ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ಚೀಮಾ ಪಾಕ್‌ನಲ್ಲಿ ನಿಗೂಢ ಸಾವು

KannadaprabhaNewsNetwork |  
Published : Mar 03, 2024, 01:34 AM ISTUpdated : Mar 03, 2024, 11:50 AM IST
ಅಜಂ ಚೀಮಾ | Kannada Prabha

ಸಾರಾಂಶ

ಲಷ್ಕರ್‌-ಎ-ತೊಯ್ಬಾ ಕಮಾಂಡರ್‌ ಚೀಮಾ ಪಾಕಿಸ್ತಾನದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಇತ್ತೀಚಿನ ತಿಂಗಳಲ್ಲಿ ಭಾರತಕ್ಕೆ ಬೇಕಾದ 24ನೇ ಉಗ್ರ ಸಾವು ಪಾಕಿಸ್ತಾನದಲ್ಲಿ ಆಗಿದೆ.

ಇಸ್ಲಾಮಾಬಾದ್‌: 2006ರ ಮುಂಬೈ ಸರಣಿ ರೈಲ್ವೆ ಸ್ಫೋಟ ಹಾಗೂ 2008ರಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್‌ ಆಜಂ ಚೀಮಾ ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ. 

ಈತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದ್ದರೂ, ಇತ್ತೀಚೆಗೆ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಮೋಸ್ಟ್‌ ವಾಂಟೆಡ್‌ ಉಗ್ರರು ನಿಗೂಢವಾಗಿ ಸಾವನ್ನಪ್ಪುತ್ತಿರುವ ಬೆಳವಣಿಗೆಗಳು ನಡೆಯುತ್ತಿರುವುದರಿಂದ ಈತನ ಸಾವು ಕೂಡ ಅನುಮಾನಕ್ಕೆ ಕಾರಣವಾಗಿದೆ. 

ಕಳೆದ ಕೆಲ ತಿಂಗಳಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಭಾರತಕ್ಕೆ ಬೇಕಾದ 24ನೇ ಉಗ್ರ ಇವನಾಗಿದ್ದಾನೆ.

ಮುಂಬೈ ಮೇಲೆ ಎರಡು ಭೀಕರ ದಾಳಿಗಳನ್ನು ನಡೆಸಲು ಭಯೋತ್ಪಾದಕರಿಗೆ ತರಬೇತಿ ನೀಡಿದ್ದು ಆಜಂ ಚೀಮಾ ಎಂದು ಹೇಳಲಾಗಿದೆ. 2006ರ ಸರಣಿ ಬಾಂಬ್‌ ದಾಳಿಯಲ್ಲಿ 188 ಮಂದಿ ಹಾಗೂ 2008ರ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು. 

ಲಷ್ಕರ್‌-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ ಆಗಿರುವ ಈತ ಫೈಸಲಾಬಾದ್‌ನಲ್ಲಿ ಮೃತಪಟ್ಟಿದ್ದಾನೆ. ಅಲ್ಲಿನ ಮಲ್ಖಾನ್‌ವಾಲಾದಲ್ಲಿ ಅಂತ್ಯಸಂಸ್ಕಾರ ನಡೆದಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಆಜಂ ಚೀಮಾ ಲಷ್ಕರ್‌ ಸಂಘಟನೆಗೆ ಸೇರಿದವನಾಗಿದ್ದರೂ ಅಲ್‌ ಖೈದಾ ಉಗ್ರರಿಗೆ ತರಬೇತಿ ನೀಡಿ ಮುಂಬೈ ಮೇಲೆ ಎರಡು ಭೀಕರ ದಾಳಿಗಳನ್ನು ಸಂಯೋಜಿಸಿದ್ದ. 

ಈತನನ್ನು ಅಮೆರಿಕದ ಗೃಹ ಇಲಾಖೆಯು ಲಷ್ಕರ್‌-ಎ-ತೊಯ್ಬಾದ ‘ಪ್ರಮುಖ ಕಮಾಂಡರ್‌’ ಎಂದು ವರ್ಗೀಕರಿಸಿತ್ತು. 

ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ತೀವ್ರಗೊಳಿಸಲು ಯತ್ನಿಸುತ್ತಿರುವ ಲಷ್ಕರ್‌-ಎ-ತೊಯ್ಬಾ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳಿಗೆ ಆಜಂ ಚೀಮಾನ ಸಾವು ಹಿನ್ನಡೆ ಉಂಟುಮಾಡಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾದ ಸಂಭಾವ್ಯ ಪ್ರಧಾನಿ ರಹಮಾನ್‌ ತವರಿಗೆ ವಾಪಸ್‌
ಚೀನಾದಲ್ಲಿ 1 ಮಗು ನೀತಿಯ ಜನನಿ ಪೆಂಗ್‌ ಪೆಯುನ್‌ ನಿಧನ