ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮಂದುವರಿದಿದ್ದು, ಇದೀಗ ಇಸ್ಕಾನ್‌ ನಿಷೇಧಕ್ಕೆ ಇಸ್ಲಾಮಿಕ್‌ ಸಂಘಟನೆಯೊಂದು ಕರೆ

KannadaprabhaNewsNetwork | Updated : Nov 16 2024, 04:06 AM IST

ಸಾರಾಂಶ

ಶೇಖ್ ಹಸೀನಾ ಅಧಿಕಾರದಿಂದ ನಿರ್ಗಮಿಸಿದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಸರಣಿ ಮಂದುವರಿದಿದ್ದು, ಇದೀಗ ಇಸ್ಕಾನ್‌ ನಿಷೇಧಕ್ಕೆ ಇಸ್ಲಾಮಿಕ್‌ ಸಂಘಟನೆಯೊಂದು ಕರೆ ನೀಡಿದೆ ಎಂದು ವರದಿಯಾಗಿದೆ.

ಢಾಕಾ: ಶೇಖ್ ಹಸೀನಾ ಅಧಿಕಾರದಿಂದ ನಿರ್ಗಮಿಸಿದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಸರಣಿ ಮಂದುವರಿದಿದ್ದು, ಇದೀಗ ಇಸ್ಕಾನ್‌ ನಿಷೇಧಕ್ಕೆ ಇಸ್ಲಾಮಿಕ್‌ ಸಂಘಟನೆಯೊಂದು ಕರೆ ನೀಡಿದೆ ಎಂದು ವರದಿಯಾಗಿದೆ.

ಈ ಹಿಂದೆ ಕೋವಿಡ್‌ ವೇಳೆ ಅಬಲರಿಗೆ ಅನ್ನ ಹಾಕಿದ್ದ, ಇತ್ತೀಚೆಗೆ ನಡೆದ ದಂಗೆಯ ವೇಳೆಯಲ್ಲೂ ಸಂತ್ರಸ್ತರಿಗೆ ಉಚಿತವಾಗಿ ಅನ್ನಾಹಾರ ನೀಡಿದ್ದ ಇಸ್ಕಾನ್‌ ಸಂಘಟನೆಯ ಮೇಲೇ ಇಸ್ಲಾಮಿಕ್‌ ಮೂಲಭೂತವಾದಿಗಳು ಸಮರ ಸಾರಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಶೇಖ್‌ ಹಸೀನಾ ಪದಚ್ಯುತಿ ಬಳಿಕ ದೇಶವ್ಯಾಪಿ ನಡೆದ ಹಿಂಸಾಚಾರದ ವೇಳೆಯೂ ಇಸ್ಕಾನ್‌ ಮೇಲೆ ದಾಳಿ ನಡೆಸಿದ್ದ ಈ ಸಂಘಟನೆಗಳು ಇದೀಗ ನೇರವಾಗಿ ದೇಗುಲಗಳನ್ನೇ ಮುಚ್ಚಬೇಕೆಂಬ ತಾಕೀತು ಮಾಡುವ ಹಂತಕ್ಕೆ ಬಂದು ನಿಂತಿವೆ.

ಚಿತ್ತಗಾಂಗ್ ಮೂಲದ ‘ಹಿಫಾಜತ್-ಎ-ಇಸ್ಲಾಂ’ ಎಂಬ ಇಸ್ಲಾಮಿಕ್‌ ಸಂಘಟನೆಯು ಇಸ್ಕಾನ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿರುವ ವಿಡಿಯೋವನ್ನು ಇಸ್ಕಾನ್ ಉಪಾಧ್ಯಕ್ಷ ರಾಧಾರಮಣ ದಾಸ್‌ ಹಂಚಿಕೊಂಡಿದ್ದಾರೆ. ‘ಬಾಂಗ್ಲಾದೇಶಿ ಮುಸ್ಲಿಮರು ಇಸ್ಕಾನ್ ನಿಷೇಧಿಸುವಂತೆ ದೇಶದ ಆಡಳಿತ ಮುಖ್ಯಸ್ಥ ಮೊಹಮ್ಮದ್ ಯೂನಸ್‌ಗೆ ಗಡುವು ನೀಡಿದ್ದಾರೆ. ಇಲ್ಲದಿದ್ದರೆ ಅವರು ಇಸ್ಕಾನ್ ಭಕ್ತರನ್ನು ಹಿಡಿದು ಬರ್ಬರವಾಗಿ ಕೊಲ್ಲಲು ಪ್ರಾರಂಭಿಸುವ ಬೆದರಿಕೆ ಹಾಕಿದ್ದಾರೆ’ ಎಂದಿದ್ದಾರೆ.

ಇದೇ ವೇಳೆ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್‌ ಅವರು, ‘ಹಿಫಾಜತ್-ಎ-ಇಸ್ಲಾಂ ಸಂಘಟನೆ ಇಸ್ಕಾನ್ ಸದಸ್ಯರನ್ನು ಕೊಲ್ಲಲು ಬಯಸುತ್ತದೆ. ಇಸ್ಕಾನ್ ಒಂದು ಭಯೋತ್ಪಾದಕ ಸಂಘಟನೆಯೇ ಮತ್ತು ಅದನ್ನು ನಿಷೇಧಿಸಬೇಕೇ? ಇಸ್ಕಾನ್ ಪ್ರಪಂಚದಾದ್ಯಂತ ಇದೆ. ಅದು ಎಂದಿಗೂ ಹಿಂಸೆ ಪ್ರಚೋದಿಸಿಲ್ಲ’ ಎಂದಿದ್ದಾರೆ.

ವಿವಾದ ಎಲ್ಲಿಂದ ಶುರು?:

ಬಾಂಗ್ಲಾದೇಶದ ಇಸ್ಕಾನ್‌ಗೆ ಸಂಬಂಧಿಸಿದ ವಿವಾದ ನ.5ರಂದು ಸ್ಥಳೀಯ ಉದ್ಯಮಿಯೊಬ್ಬರು ಫೇಸ್‌ಬುಕ್ ಪೋಸ್ಟ್‌ನೊಂದಿಗೆ ಪ್ರಾರಂಭವಾಯಿತು. ಅವರು ಇಸ್ಕಾನ್ ಅನ್ನು ಉಗ್ರರ ಗುಂಪು ಎಂದು ಹೇಳಿದ್ದರು. ಈ ಪೋಸ್ಟ್‌ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿ ಹಿಂಸೆಗೆ ಕಾರಣವಾಗಿತ್ತು.

Share this article