ನವದೆಹಲಿ: ಏ.19ರಿಂದ ಜೂ.4ರವರೆಗೆ ಭಾರತದಲ್ಲಿ ನಡೆಯಲಿರುವ ವಿಶ್ವದ ಬೃಹತ್ ಚುನಾವಣಾ ಹಬ್ಬ ವೀಕ್ಷಿಸಲು ಆಗಮಿಸುವಂತೆ ವಿಶ್ವದ ಹಲವು ದೇಶಗಳ 25ಕ್ಕೂ ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ ನೀಡಿದೆ.
ಯಾರಿಗುಂಟು? ಯಾರಿಗಿಲ್ಲ?: ಅಮೆರಿಕದ ಚುನಾವಣಾ ಪದ್ಧತಿಯೇ ಬೇರೆ ಆಗಿರುವ ಕಾರಣ ಅಲ್ಲಿನ ಎರಡೂ ಪ್ರಮುಖ ಪಕ್ಷಗಳಿಗೆ ಆಹ್ವಾನ ನೀಡಿಲ್ಲ. ಇನ್ನು ಭಾರತದ ಕಡುವೈರಿ ಪಾಕಿಸ್ತಾನದ ಯಾವುದೇ ಪಕ್ಷ ಹಾಗೂ ಚೀನಾದ ಕಮ್ಯನಿಸ್ಟ್ ಪಕ್ಷಕ್ಕೆ ಕೂಡಾ ಕರೆ ನೀಡಿಲ್ಲ. ಆದರೆ ನೇಪಾಳದ ಕಮ್ಯುನಿಸ್ಟ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್‌ಗೆ ಆಹ್ವಾನ ನೀಡಲಾಗಿದೆ. ಆದರೆ ಬಾಯ್ಕಾಟ್ ಭಾರತ ಅಭಿಯಾನ ನಡೆಸುತ್ತಿರುವ ವಿಪಕ್ಷ ಬಿಎನ್‌ಪಿಗೆ ಕರೆ ನೀಡಿಲ್ಲ.
ಭೇಟಿ ಹೇಗೆ?: ವಿದೇಶಿ ಗಣ್ಯರಿಗೆ ಮೊದಲಿಗೆ ದೆಹಲಿಯಲ್ಲಿ ಭಾರತೀಯ ಚುನಾವಣಾ ಪದ್ಧತಿ ಬಗ್ಗೆ ಮಾಹಿತಿ ನೀಡಲಾಗುವುದು. ನಂತರ 5-6 ವೀಕ್ಷಕರ ತಂಡ ರಚನೆ ಮಾಡಿ ಅವರನ್ನು 4-5 ಚುನಾವಣಾ ಕ್ಷೇತ್ರಕ್ಕೆ ಕರೆದೊಯ್ದ ಅಲ್ಲಿ ಬಿಜೆಪಿ ನಾಯಕರ ಭೇಟಿ ಮಾಡಿಸಲಾಗುವುದು. ಅಲ್ಲದೆ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಮೊದಲಾದ ಬಿಜೆಪಿ ರ್‍ಯಾಲಿಗಳಿಗೂ ಕರೆದೊಯ್ಯಲಾಗುವುದು ಎನ್ನಲಾಗಿದೆ.ಬಿಜೆಪಿ ಬಗ್ಗೆ ತಿಳಿದುಕೊಳ್ಳಿ ಅಭಿಯಾನದ ಭಾಗವಾಗಿ ಈಗಾಗಲೇ 70ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಅದರ ಮುಂದುವರೆದ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.