ವಿದೇಶದಲ್ಲಿನ ಭಾರತೀಯರಿಂದಲೂ ಬಿಜೆಪಿ ಪರ ಪ್ರಚಾರ

KannadaprabhaNewsNetwork |  
Published : Mar 04, 2024, 01:22 AM ISTUpdated : Mar 04, 2024, 02:00 PM IST
ಬಿಜೆಪಿ | Kannada Prabha

ಸಾರಾಂಶ

ಮೊನ್ನೆಯಿಂದಲೇ ಪ್ರಚಾರ ಆರಂಭಿಸಿದ ಬಿಜೆಪಿ ಬೆಂಬಲಿಗರು ತವರು ರಾಜ್ಯದವರಿಗೆ ಕರೆ ಮಾಡಿ ಅಮೆರಿಕದಿಂದಲೇ ಪ್ರಚಾರ ಮಾಡುತ್ತಿದ್ದಾರೆ.

ವಾಷಿಂಗ್ಟನ್‌: ಲೋಕಸಭೆ ಚುನಾವಣೆ ನಿಮಿತ್ತ ಶನಿವಾರ ಬಿಜೆಪಿ 195 ಸೀಟುಗಳ ಅಭ್ಯರ್ಥಿಗಳ ಘೋಷಣೆ ಮಾಡುತ್ತಿದ್ದಂತೆಯೇ ಅಮೆರಿಕದಲ್ಲಿನ ‘ಸಾಗರೋತ್ತರ ಸ್ನೇಹಿತರ ಬಿಜೆಪಿ ಘಟಕ’ ನರೇಂದ್ರ ಮೋದಿ ಅವರನ್ನು 3ನೇ ಬಾರಿ ಪ್ರಧಾನ ಮಂತ್ರಿ ಮಾಡಲು ಅಲ್ಲಿಂದಲೇ ಪ್ರಚಾರ ಆರಂಭಿಸಿದೆ.

ಪಟ್ಟಿ ಘೋಷಣೆ ಆಗುತ್ತಿದ್ದಂತೆಯೇ ಸಭೆ ನಡೆಸಿದ ಸಾಗರೋತ್ತರ ಸ್ನೇಹಿತರ ಬಿಜೆಪಿ ಘಟಕ (ಒಎಫ್‌ಬಿಜೆಪಿ) ಅಧ್ಯಕ್ಷ ಅಡಪ ಪ್ರಸಾದ್, ವಾಷಿಂಗ್ಟನ್‌ನ ಮೇರಿಲ್ಯಾಂಡ್‌ನಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.

ಒಎಫ್‌ಬಿಜೆಪಿಯಲ್ಲಿ ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಂದ ಅಮೆರಿಕಕ್ಕೆ ಕೆಲಸಕ್ಕೆಂದು ಬಂದವರು ಇದ್ದಾರೆ. ಇವರು ತಮ್ಮ ತಮ್ಮ ತವರು ರಾಜ್ಯದವರಿಗೆ ಕರೆ ಮಾಡಿ ಬಿಜೆಪಿ ಪರ ಪ್ರಚಾರ ಮಾಡುತ್ತಾರೆ. 

ಉದಾಹರಣೆಗೆ: ಒಎಫ್‌ಬಿಜೆಪಿಯ ಕರ್ನಾಟಕ ಮೂಲದ ಸದಸ್ಯ ಕನ್ನಡಿಗರಿಗೆ ಕರೆ ಮಾಡಿ ಬಿಜೆಪಿಗೆ ಮತ ಹಾಕುವಂತೆ ಕನ್ನಡದಲ್ಲೇ ಕೇಳಿಕೊಳ್ಳುತ್ತಾನೆ. ಬಿಜೆಪಿ ಪರ ಆನ್‌ಲೈನ್‌ನಲ್ಲೂ (ಸೋಷಿಯಲ್‌ ಮೀಡಿಯಾ) ಇವರು ಪ್ರಚಾರ ಮಾಡುತ್ತಾರೆ.

ಈ ರೀತಿ ಅಮೆರಿಕದಲ್ಲಿನ ಸುಮಾರು 3000 ಸಾಗರೋತ್ತರ ಭಾರತೀಯರು ಬಿಜೆಪಿ ಪರ ವಿವಿಧ ವಿಭಾಗಗಳಲ್ಲಿ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಒಎಫ್‌ಬಿಜೆಪಿ ಹೇಳಿದೆ.

PREV