40 ದಿನ ಯುದ್ಧ ಬಳಿಕ ಅಮೆರಿಕ-ಇರಾನ್ ಕದನ ವಿರಾಮ ಘೋಷಣೆ

KannadaprabhaNewsNetwork |  
Published : Apr 09, 2026, 01:15 AM ISTUpdated : Apr 09, 2026, 04:09 AM IST
Donald Trump

ಸಾರಾಂಶ

2 ವಾರ ವಾರ್‌ ಮಾಡದೆ ಇರಾನ!- ಇರಾನ್‌ ನಾಗರಿಕತೆ ನಾಶ ಮಾಡುವ ಡೆಡ್‌ಲೈನ್‌ಗೆ 90 ನಿಮಿಷಗಳಿರುವಾಗ ಟ್ರಂಪ್‌ ದಿಢೀರ್‌ ಶಾಂತಿ ಮಂತ್ರ- ಪಾಕಿಸ್ತಾನ ಮಧ್ಯಸ್ಥಿಕೆಗೆ ಅಮೆರಿಕ- ಇರಾನ್‌ ಎರಡೂ ಒಪ್ಪಿಗೆ । ಶಾಶ್ವತ ಕದನ ಸ್ಥಗಿತಕ್ಕೆ ನಾಳೆ ಮಹತ್ವದ ಸಭೆ

 ಟೆಹ್ರಾನ್‌/ ಜೆರುಸಲೇಂ: ಅಮೆರಿಕ- ಇರಾನ್‌ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕವೂ ಸಮರ ಮಾತ್ರ ಪೂರ್ಣವಾಗಿ ನಿಂತಿಲ್ಲ. ಇರಾನ್‌ನ ತೈಲ ಸಂಸ್ಕರಣಾ ಕೇಂದ್ರದ ಮೇಲೆ ಒಂದೆಡೆ ದಾಳಿ ನಡೆದಿದ್ದರೆ, ಇನ್ನೊಂದೆಡೆ ಯುಎಇ, ಕುವೈತ್‌, ಸೌದಿ ಅರೇಬಿಯಾ ಮೇಲೆ ಇರಾನ್ ಪ್ರತಿ ದಾಳಿ ನಡೆಸಿದೆ.

ನಾವ್‌ ಸುಮ್ಮನೆ ಇರಾಲ್ಲ: ಇಸ್ರೇಲ್‌ಟೆಲ್‌ ಅವೀವ್‌: ಇನ್ನೆರಡು ವಾರಗಳ ಕಾಲ ಇರಾನ್‌ ಜತೆಗಿನ ಕದನವಿರಾಮ ಜಾರಿಯಲ್ಲಿರಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಘೋಷಣೆಯನ್ನು ಬೆಂಬಲಿಸಿರುವ ಇಸ್ರೇಲ್‌, ಈ ಕದನವಿರಾಮವು ಹಿಜ್ಬುಲ್ಲಾಗಳ ನೆಲೆಯಾಗಿರುವ ಲೆಬನಾನ್‌ಗೆ ಅನ್ವಯಿಸದು ಎಂದು ಹೇಳಿದೆ. ತನ್ಮೂಲಕ ಅಲ್ಲಿ ದಾಳಿ ನಡೆಸುವುದಾಗಿ ಹೇಳಿದೆ.

ನಾವೂ ಸುಮ್ಮನೆ ಕೂರಲ್ಲ: ಇರಾನ್‌ಟೆಹ್ರಾನ್‌: ಇರಾನ್‌ ಜತೆಗಿನ ಕದನವಿರಾಮವು ಲೆಬನಾನ್‌ಗೆ ಅನ್ವಯಿಸದು ಎಂಬ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿಕೆಗೆ ಇರಾನ್‌ ತಿರುಗೇಟು ನೀಡಿದೆ. ‘ದಕ್ಷಿಣ ಲೆಬನಾನ್‌ ಮೇಲಿನ ಆಕ್ರಮಣ ನಿಲ್ಲದಿದ್ದರೆ ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ ಅನ್ನೇ ಗುರಿಯಾಗಿಸಿ ದಾಳಿ ಮಾಡುತ್ತೇವೆ. ಕದನವಿರಾಮ ಅಂತ್ಯಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದೆ.

 ಇರಾನ್‌ನಲ್ಲಿ ಸಂಭ್ರಮಾಚರಣೆ 

ಟೆಹ್ರಾನ್: ಕದನ ವಿರಾಮ ಘೋಷಣೆ ಬೆನ್ನಲ್ಲೇ ಇರಾನ್‌ನಲ್ಲಿ ಸಂಭ್ರಮಾಚರಣೆ ನಡೆದಿದೆ. ಜನರು ಟ್ರಂಪ್‌ ವಿರುದ್ಧ ಘೋಷಣೆ ಕೂಗುತ್ತ ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ವೇಳೆ ಕೆಲವರು ಇರಾನ್‌ನ ನಾಗರಿಕತೆ ಎದುರು ಟ್ರಂಪ್ ತಲೆಬಾಗಿ ನಿಂತ ಚಿತ್ರವನ್ನು ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

 ಪಾಕ್ ಪ್ರಧಾನಿಯ ಟ್ವೀಟ್‌ ಎಡವಟ್ಟು

ಇಸ್ಲಾಮಾಬಾದ್‌: ತಾನೇ ಮಧ್ಯಸ್ಥಿಕೆ ವಹಿಸಿ ಅಮೆರಿಕ- ಇರಾನ್‌ ಯುದ್ಧವನ್ನು ನಿಲ್ಲಿಸಿದ್ದಾಗಿ ಬಡಾಯಿ ಕೊಚ್ಚಿಕೊಳ್ಳುವ ಭರದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಮಾಡಿರುವ ಎಡವಟ್ಟು ಇಡೀ ಪ್ರಕ್ರಿಯೆಯ ಬಗ್ಗೆಯೇ ಅನುಮಾನ ಹುಟ್ಟುಹಾಕಿದೆ. ಕದನ ವಿರಾಮ ಘೋಷಣೆ ಕುರಿತ ಸುದ್ದಿ ಪ್ರಕಟಿಸುವಾಗ ‘ಪಾಕಿಸ್ತಾನ ಪ್ರಧಾನಮಂತ್ರಿಗಳ ಕರಡು’ ಎಂಬ ಟ್ವೀಟ್‌ ಅನ್ನು ಮಾಡಿದ್ದರು. ಬೇರೆ ದೇಶ ಬರೆದುಕೊಟ್ಟ ಟ್ವೀಟ್‌ ಅನ್ನು ಶೆಹಬಾಜ್‌ ಮಾಡಿರಬಹುದು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಯಿತು.

 ಮಾರುಕಟ್ಟೆಯಲ್ಲಿ ಉತ್ಸಾಹ 

1. ಜಾಗತಿಕ ಮಾರುಕಟ್ಟೆಯಲ್ಲಿ 100 ಡಾಲರ್‌ಗಿಂತ ಮೇಲಿದ್ದ ಪ್ರತಿ ಬ್ಯಾರೆಲ್‌ ಕಚ್ಚಾತೈಲ ಬೆಲೆ 94 ಡಾಲರ್‌ಗೆ ಕುಸಿತ2. ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ನಿನ್ನೆ ಒಂದೇ ದಿನ 2946 ಏರಿಕೆ. ಹೂಡಿಕೆದಾರರ ಸಂಪತ್ತು ₹16 ಲಕ್ಷ ಕೋಟಿ ವೃದ್ಧಿ3. ಡಾಲರ್‌ ಎದುರು ರುಪಾಯಿ ಮೌಲ್ಯ 47 ಪೈಸೆ ಏರಿಕೆ. 92.59 ರುಪಾಯಿಗೆ ಇಳಿಕೆ

 ವಾಷಿಂಗ್ಟನ್‌/ಟೆಹ್ರಾನ್‌: ಅಂತಾರಾಷ್ಟ್ರೀಯ ಅರ್ಥ ವ್ಯವಸ್ಥೆಗೆ ಭಾರೀ ಹೊಡೆತ ನೀಡಿದ್ದ ಮಧ್ಯಪ್ರಾಚ್ಯ ಸಂಘರ್ಷಕ್ಕೆ ಕೊನೆಗೂ 2 ವಾರಗಳ ಅಲ್ಪವಿರಾಮ ಬಿದ್ದಿದೆ. ‘ಡೀಲ್‌ಗೆ ಒಪ್ಪದಿದ್ದರೆ ಇರಾನ್‌ ನಾಗರಿಕತೆಯನ್ನೇ ನಾಶ ಮಾಡುವೆ’ ಎಂದು ಅಬ್ಬರಿಸಿ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 5.30ರವರೆಗೆ ಗಡುವು ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ಗಡುವು ಮುಕ್ತಾಯಕ್ಕೆ ಸುಮಾರು 90 ನಿಮಿಷ ಬಾಕಿ ಇರುವಾಗಲೇ 15 ದಿನಗಳ ಕದನ ವಿರಾಮ ಸಾರಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಕೂಡ ಕದನವಿರಾಮಕ್ಕೆ ಸಮ್ಮತಿಸಿದೆ. ಪಾಕಿಸ್ತಾನ ಈ ಪ್ರಕ್ರಿಯೆಯ ಮಧ್ಯಸ್ಥಿಕೆ ವಹಿಸಿತ್ತು ಎಂಬುದು ವಿಶೇಷ.

ಆದರೆ ಈ ಕದನವಿರಾಮ ಎಷ್ಟು ಬಾಳಿಕೆ ಬರುತ್ತದೆ ಎಂಬ ಸ್ಪಷ್ಟತೆ ಇಲ್ಲ. ಏಕೆಂದರೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತನಾಡಿ, ‘ಈ ಕದನವಿರಾಮ ಲೆಬನಾನ್‌ ಮೇಲೆ ಇಸ್ರೇಲ್ ನಡೆಸುವ ದಾಳಿಗೆ ಅನ್ವಯಿಸದು’ ಎಂದಿದ್ದಾರೆ. ಹೀಗಾಗಿ ‘ಲೆಬನಾನ್‌ ಮೇಲೆ ದಾಳಿ ನಿಲ್ಲಿಸದೇ ಇದ್ದರೆ ನಾವು ಕದನವಿರಾಮಕ್ಕೆ ಅಂತ್ಯ ಹಾಡಿ ಮತ್ತೆ ದಾಳಿ ಆರಂಭಿಸುತ್ತೇವೆ’ ಎಂದು ಇರಾನ್‌ ಎಚ್ಚರಿಸಿದೆ.

ಅಲ್ಲದೆ, ‘ಹೋರ್ಮುಜ್‌ ಜಲಸಂಧಿಯನ್ನು ಎಲ್ಲರಿಗೂ ಮುಕ್ತವಾಗಿ ಇಡುವ ಅಂಶ ಆಧರಿಸಿ ಕದನವಿರಾಮ ಸಾರಲಾಗಿದೆ’ ಎಂಬ ಟ್ರಂಪ್‌ ಹೇಳಿಕೆಗೂ ಇರಾನ್‌ ಸಮ್ಮತಿಸಿಲ್ಲ. ಬದಲಾಗಿ ‘ಪ್ರತಿ ಹಡಗಿಗೆ 18 ಕೋಟಿ ರು. ಶುಲ್ಕ ನೀಡಿದರೆ ಮಾತ್ರ ಬಿಡುತ್ತೇವೆ. ಪರವಾನಗಿ ಇಲ್ಲದೆ ಹೋರ್ಮುಜ್‌ ದಾಟಲು ಯತ್ನಿಸುವ ನೌಕೆಗಳನ್ನು ಧ್ವಂಸ ಮಾಡುತ್ತೇವೆ’ ಎಂದಿದೆ. ಇದೇ ವೇಳೆ, ‘ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ ಮಾಡಿ ಕದನವಿರಾಮ ಉಲ್ಲಂಘಿಸಿದೆ’ ಎಂಬ ನೆಪ ಹೇಳಿ ಹೋರ್ಮುಜ್‌ ಅನ್ನು ಪುನಃ ಇರಾನ್ ಬಂದ್‌ ಮಾಡಿದೆ ಎನ್ನಲಾಗಿದೆ.

ಇದಲ್ಲದೆ, ಕದನವಿರಾಮ ಘೋಷಣೆ ಬಳಿಕವೂ ಕುವೈತ್‌, ಯುಎಇ ಹಾಗೂ ಸೌದಿ ಮೇಲೆ ಇರಾನ್‌ ದಾಳಿ ಮಾಡಿದೆ. ಇರಾನ್‌ನ ತೈಲ ಘಟಕವೊಂದರ ಮೇಲೂ ದಾಳಿ ನಡೆದಿದೆ. ಹೀಗಾಗಿ ಕದನವಿರಾಮ ತೂಗುಯ್ಯಾಲೆಯಲ್ಲಿ ಇರುವಂತೆ ಮಾಡಿದೆ.

ಆದಾಗ್ಯೂ ಶಾಶ್ವತ ಕದನವಿರಾಮಕ್ಕಾಗಿ ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ಇರಾನ್‌ ಹಾಗೂ ಅಮೆರಿಕ ಪಾಕ್‌ ಮಧ್ಯಸ್ಥಿಕೆಯಲ್ಲಿ ಸಭೆ ಸೇರಲಿವೆ. ಅಲ್ಲಿ ಯಾವ ಸಂಧಾನ ಹೊರಬೀಳಲಿದೆ ಎಂಬುದು ಕುತೂಹಲಕಾರಿ.

ಪಾಕಿಸ್ತಾನದ ಮಧ್ಯಸ್ಥಿಕೆ !: 

ಹೋರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸಲು ಡೊನಾಲ್ಡ್‌ ಟ್ರಂಪ್‌ ನೀಡಿದ್ದ ಗಡುವು ಮುಕ್ತಾಯಗೊಳ್ಳಲು ಕೆಲವೇ ಗಂಟೆಗಳಿವೆ ಎನ್ನುವಾಗ ಪಾಕಿಸ್ತಾನ ಮಧ್ಯಪ್ರವೇಶಿಸಿ ಕದನ ವಿರಾಮಕ್ಕೆ ದಾರಿ ಮಾಡಿಕೊಟ್ಟಿದೆ.ತಮ್ಮ ಟ್ರುತ್ ಸೋಷಿಯಲ್‌ ಮೀಡಿಯಾದಲ್ಲಿ ಇದನ್ನು ಟ್ರಂಪ್‌ ಖಚಿತಪಡಿಸಿದ್ದು, ‘ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಆಸಿಂ ಮುನೀರ್‌ ಅವರ ಜತೆಗಿನ ಮಾತುಕತೆ ಬಳಿಕ ಇರಾನ್‌ನ ನಾಗರಿಕತೆಯನ್ನೇ ಅಳಿಸಿಹಾಕುವ ಭಾರೀ ದಾಳಿಯ ನಿರ್ಧಾರ ಹಿಂತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ಮಾತುಕತೆಗೆ ಸಂಬಂಧಿಸಿದ ಇರಾನ್‌ನ 10 ಅಂಶಗಳ ಪ್ರಸ್ತಾಪ ನಮ್ಮ ಕೈಸೇರಿದೆ. 2 ವಾರಗಳ ಕದನ ವಿರಾಮವನ್ನು ಯುದ್ಧವನ್ನು ಸಂಪೂರ್ಣ ಸಮಾಪ್ತಿಗೊಳಿಸುವ ವಿಸ್ತೃತ ಒಪ್ಪಂದಕ್ಕಾಗಿ ಬಳಸಿಕೊಳ್ಳಲಾಗುವುದು. ಈ ಮೂಲಕ ಇರಾನ್‌ ಹಾಗೂ ಮಧ್ಯ ಏಷ್ಯಾದಲ್ಲಿ ಶಾಂತಿಗೆ ಪ್ರಯತ್ನಿಸಲಾಗುವುದು’ ಎಂದು ಹೇಳಿಕೊಂಡಿದ್ದಾರೆ.‘ಇರಾನ್ ವಿಚಾರದಲ್ಲಿ ನಮ್ಮೆಲ್ಲಾ ಸೈನಿಕ ಉದ್ದೇಶವನ್ನು ಗುರಿ ಮೀರಿ ಸಾಧಿಸಿದ್ದೇವೆ. ಆ ದೇಶದ ಜತೆಗೆ ನಿರ್ಣಾಯಕ ಒಪ್ಪಂದ ಮಾಡಿಕೊಳ್ಳುವ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದೇವೆ’ ಎಂದು ಟ್ರಂಪ್‌ ನುಡಿದಿದ್ದಾರೆ.

ಹೋರ್ಮುಜ್‌ ಬಗ್ಗೆ ಗೊಂದಲ:ಆದರೆ ಹೋರ್ಮುಜ್‌ ಜಲಸಂಧಿ ಬಗ್ಗೆ ಒಪ್ಪಂದದಲ್ಲೇನಿದೆ ಎಂಬ ಬಗ್ಗೆ ಗೊಂದಲವಿದೆ. ‘ಈ ಕದನ ವಿರಾಮವು ಹೋರ್ಮುಜ್‌ ಜಲಸಂಧಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ಹಡಗುಗಳ ಸಂಚಾರಕ್ಕೆ ಸುರಕ್ಷಿತ ಮತ್ತು ಮುಕ್ತಗೊಳಿಸುವ ಷರತ್ತಿಗೆ ಒಳಪಟ್ಟಿದೆ’ ಎಂದು ಟ್ರಂಪ್‌ ಹೇಳಿದ್ದಾರೆ.

ಆದರೆ ಹೋರ್ಮುಜ್‌ ವಿಚಾರದಲ್ಲಿ ಇರಾನ್‌ ಸ್ಪಷ್ಟ ಹೇಳಿಕೆ ನೀಡಿಲ್ಲ.‘ಈ ಒಪ್ಪಂದವು ಹೋರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಶುಲ್ಕ ವಿಧಿಸುವ ತನ್ನ ಹೊಸ ಪದ್ಧತಿಯನ್ನು ಅನುಮೋದಿಸಲು ಅನುವು ಮಾಡಿಕೊಡುತ್ತದೆ’ ಎಂದು ಇರಾನ್ ಹೇಳಿದೆ. ಹೀಗಾಗಿ ನಿಯಮಗಳು ಸ್ಪಷ್ಟವಾಗಿಲ್ಲ.

ಇರಾನ್‌ ಘೋಷಣೆ:ಇರಾನ್‌ ವಿದೇಶಾಂಗ ಸಚಿವ ಸಯೀದ್‌ ಅಬ್ಬಾಸ್‌ ಅರಾಗ್ಚಿ ಮಾತನಾಡಿ, ‘ನಮ್ಮ ಮೇಲಿನ ದಾಳಿ ನಿಂತರೆ ನಮ್ಮ ಶಕ್ತಿಶಾಲಿ ಸೇನಾಪಡೆಗಳು ಕೂಡ ತಮ್ಮ ಕಾರ್ಯಾಚರಣೆ ನಿಲ್ಲಿಸಲಿವೆ. ಕದನ ವಿರಾಮಕ್ಕೆ ಪ್ರಯತ್ನ ನಡೆಸಿದ ಸಹೋದರರಾದ ಶೆಹಬಾಜ್‌ ಷರೀಫ್‌ ಹಾಗೂ ಆಸೀಂ ಮುನೀರ್‌ಗೆ ಅವರಿಗೆ ಕೃತಜ್ಞತೆ. ಶುಕ್ರವಾರ ಶಾಶ್ವತ ಕದನವಿರಾಮ ಬಗ್ಗೆ ಪಾಕ್‌ನಲ್ಲಿ ಮಾತುಕತೆ ನಡೆಸುತ್ತೇವೆ’ ಎಂದಿದ್ದಾರೆ.

 ನಮ್ಮ ಕೈ ಟ್ರಿಗರ್ ಮೇಲಿರಲಿದೆ

ತಪ್ಪು ಮಾಡಿದ್ರೆ ಶಾಸ್ತಿ: ಇರಾನ್‌ಅಮೆರಿಕ, ಇಸ್ರೇಲ್‌ ಜತೆಗೆ 2 ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರೂ ಪರೋಕ್ಷವಾಗಿ ಖಡಕ್‌ ಎಚ್ಚರಿಕೆಯನ್ನೂ ನೀಡಿದೆ. ‘ಕದನ ವಿರಾಮವೆಂದರೆ ಸಂಪೂರ್ಣವಾಗಿ ಯುದ್ಧವೇ ನಿಂತಿತು ಎಂದರ್ಥವಲ್ಲ. ನಮ್ಮ ಕೈ ಬಂದೂಕಿನ ಟ್ರಿಗರ್‌ ಮೇಲೆಯೇ ಇರಲಿದೆ. ಶತ್ರುಗಳು ಸಣ್ಣ ತಪ್ಪು ಮಾಡಿದ್ರೂ ತಕ್ಕ ಪ್ರತ್ಯುತ್ತರ ನೀಡಲಾಗುವುದು’ ಎಂದು ಇರಾನ್‌ ಉನ್ನತ ರಾಷ್ಟ್ರೀಯ ಭದ್ರತಾ ಸಮಿತಿ ಎಚ್ಚರಿಕೆ ನೀಡಿದೆ.

ಟ್ರಂಪ್‌ ಹೇಳಿದ್ದೇನು?

- ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌, ಸೇನಾ ಮುಖ್ಯಸ್ಥ ಮುನೀರ್‌ ದೂರವಾಣಿ ಕರೆ ಮಾಡಿದ್ದರು- ಇರಾನ್‌ಗೆ ನಾನು ಕಳುಹಿಸುತ್ತಿದ್ದ ವಿನಾಶಕಾರಿ ಪಡೆಯನ್ನು ತಡೆಹಿಡಿಯುವಂತೆ ಕೇಳಿಕೊಂಡರು- ಹೋರ್ಮುಜ್‌ ಜಲಸಂಧಿ ತೆರೆಯಲು ಒಪ್ಪಿದರೆ 2 ವಾರ ಕದನ ದಾಳಿ ನಿಲ್ಲಿಸುತ್ತೇನೆ ಅಂತ ಹೇಳಿದೆ

ಕದನ ವಿರಾಮಕ್ಕೆಇರಾನ್‌ 10 ಷರತ್ತು

1. ಇರಾನ್‌ ಮೇಲೆ ಇಸ್ರೇಲ್‌, ಅಮೆರಿಕ ಆಕ್ರಮಣಶೀಲತೆ ಪ್ರದರ್ಶಿಸುವಂತಿಲ್ಲ2. ಯುರೇನಿಯಂ ಸಂಸ್ಕರಿಸುವ ಇರಾನ್‌ನ ಅಧಿಕಾರವನ್ನು ಒಪ್ಪಿಕೊಳ್ಳಬೇಕು3. ಹೋರ್ಮುಜ್‌ ಜಲಸಂಧಿ ಮೇಲೆ ಇರಾನ್‌ ನಿಯಂತ್ರಣ ಮುಂದುವರಿಕೆಗೆ ಅಸ್ತು4. ಹಿಜ್ಬುಲ್ಲಾ ಸೇರಿ ತನ್ನೆಲ್ಲ ಮಿತ್ರಪಡೆಗಳ ಜತೆಗಿನ ಸಂಘರ್ಷಕ್ಕೂ ತೆರೆ ಎಳೀಬೇಕು5. ಮಧ್ಯಪ್ರಾಚ್ಯದಿಂದ ಸೇನಾಪಡೆಗಳನ್ನು ಅಮೆರಿಕ ವಾಪಸ್‌ ಕರೆಸಿಕೊಳ್ಳಬೇಕು6. ಯುದ್ಧದಿಂದಾಗಿ ಇರಾನ್‌ಗೆ ಆದ ನಷ್ಟ ಸಂಪೂರ್ಣವಾಗಿ ಭರಿಸಿಕೊಡಬೇಕು7. ಇರಾನ್‌ ದೇಶದ ಮೇಲಿನ ಎಲ್ಲ ನಿರ್ಬಂಧಗಳನ್ನೂ ರದ್ದು ಮಾಡಬೇಕು8. ವಿದೇಶಗಳಲ್ಲಿ ವಶಕ್ಕೆ ಪಡೆದಿರುವ ಇರಾನ್‌ನ ಆಸ್ತಿಯನ್ನು ವಾಪಸ್‌ ನೀಡಬೇಕು9 ಇರಾನ್‌ ಮೇಲಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ ರದ್ದು ಮಾಡಬೇಕು10. ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಯ ನಿರ್ಣಯಗಳನ್ನೆಲ್ಲಾ ರದ್ದು ಮಾಡಬೇಕು--ಟ್ರಂಪ್‌ ಟ್ವೀಟ್‌ಯುದ್ಧ1. ಇರಾನ್‌ನಲ್ಲಿ ಇನ್ನು ಯುರೇನಿಯಂ ಸಂಸ್ಕರಣೆಗೆ ಅವಕಾಶ ನೀಡಲ್ಲ. ಉಪಗ್ರಹ ಮೂಲಕ ಕಣ್ಣಿಟ್ಟಿದ್ದೇವೆ2. ಇರಾನ್‌ಗೆ ಯಾವುದೇ ದೇಶ ಶಸ್ತ್ರಾಸ್ತ್ರ ಪೂರೈಕೆ ಮಾಡಿದರೆ ಶೇ.50ರಷ್ಟು ತೆರಿಗೆ ವಿಧಿಸಲಾಗುವುದು--ಕದನ ವಿರಾಮಕ್ಕೆಇರಾನ್‌ ಬೇಡಿತ್ತು!ಮಂಗಳವಾರ ರಾತ್ರಿ ನಾವು ಇರಾನ್‌ ಮೇಲೆ 800 ದಾಳಿಗಳನ್ನು ನಡೆಸಿದೆವು. ಅಮೆರಿಕ ದಾಳಿಯಿಂದ ಇರಾನ್‌ ದುರ್ಬಲಗೊಂಡಿತ್ತು. ಯಾವುದೇ ಆಯ್ಕೆಗಳಿಲ್ಲದೆ ಅವಮಾನಕ್ಕೊಳಗಾಗಿ ಕದನ ವಿರಾಮಕ್ಕೆ ಅಮೆರಿಕ ಬಳಿ ಬೇಡಿಕೊಂಡಿತ್ತು.ಪೀಟ್ ಹೆಗ್ಸೆತ್‌, ಅಮೆರಿಕದ ರಕ್ಷಣಾ ಸಚಿವ--ಕದನವಿರಾಮ ಆದರೂ ಕದನ ಮುಂದುವರಿಕೆ!

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಟ್ರಂಪ್‌ ಗಡುವು ಅಂತ್ಯದ ಮೊದಲೇ ಭಾರಿ ದಾಳಿ-ಪ್ರತಿದಾಳಿ
ಅಮೆರಿಕದ ದಾಳಿ ತಡೆಯಲುಇರಾನ್‌ ಮಾನವ ಗುರಾಣಿ!- ವಿದ್ಯುತ್‌ ಘಟಕ, ಸೇತುವೆಗಳ ಬಳಿ ಜನರ ನಿಯೋಜನೆ- 1.4 ಕೋಟಿ ಜನ ಪ್ರಾಣತ್ಯಾಗಕ್ಕೆ ಸಿದ್ಧ: ಇರಾನ್ ಅಧ್ಯಕ್ಷ