ಟ್ರಂಪ್‌ ಗಡುವು ಅಂತ್ಯದ ಮೊದಲೇ ಭಾರಿ ದಾಳಿ-ಪ್ರತಿದಾಳಿ

KannadaprabhaNewsNetwork |  
Published : Apr 08, 2026, 04:00 AM IST
ಯುದ್ಧ | Kannada Prabha

ಸಾರಾಂಶ

ಹೋರ್ಮುಜ್‌ ಮೇಲಿನ ನಿರ್ಬಂಧ ತೆರವುಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವಿಧಿಸಿದ್ದ ಗಡುವು ಮಂಗಳವಾರ ಅಂತ್ಯವಾಗುವ ಮುನ್ನವೇ, ಭಾರಿ ದಾಳಿ-ಪ್ರತಿದಾಳಿ ಆರಂಭವಾಗಿದೆ.

-ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರ ಖಾರ್ಗ್‌ ಮೇಲೆ ದಾಳಿ-ಟೆಹ್ರಾನ್‌ನ ಮತ್ತೊಂದು ಪ್ರಮುಖ ಸೇತುವೆ ಮೇಲೆ ಬಾಂಬ್‌

-ಟರ್ಕಿಯ ಇಸ್ರೇಲ್‌ ದೂತಾವಾಸ ಮೇಲೆ ದಾಳಿ: ದಾಳಿಕೋರನ ಹತ್ಯೆ

ಟೆಹ್ರಾನ್‌/ಇಸ್ತಾಂಬುಲ್‌: ಹೋರ್ಮುಜ್‌ ಮೇಲಿನ ನಿರ್ಬಂಧ ತೆರವುಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವಿಧಿಸಿದ್ದ ಗಡುವು ಮಂಗಳವಾರ ಅಂತ್ಯವಾಗುವ ಮುನ್ನವೇ, ಭಾರಿ ದಾಳಿ-ಪ್ರತಿದಾಳಿ ಆರಂಭವಾಗಿದೆ.

ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್‌ ದ್ವೀಪದ ಮೇಲೆ ಸೋಮವಾರ ಅಮೆರಿಕ ಭೀಕರ ದಾಳಿ ನಡೆಸಿದೆ. ಟೆಹ್ರಾನ್‌ನಲ್ಲಿನ ಬೃಹತ್‌ ಸೇತುವೆಯೊಂದರ ಮೇಲೂ ದಾಳಿ ನಡೆಸಿ, ಧ್ವಂಸಗೊಳಿಸಿದೆ.

ಇತ್ತ ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಹೊರಗೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ದಾಳಿಕೋರರನ್ನು ಹೊಡೆದುರುಳಿಸಲಾಗಿದೆ.

ಖಾರ್ಗ್‌ ಮೇಲೆ ದಾಳಿ: ಇರಾನ್‌ನ ಒಟ್ಟು ತೈಲ ರಫ್ತಿನ ಸುಮಾರು ಶೇ.90 ಖಾರ್ಗ್‌ ದ್ವೀಪದಲ್ಲಿ ನಿರ್ವಹಿಸಲ್ಪಡುತ್ತದೆ. ಜೊತೆಗೆ, ಇದು ಹೋರ್ಮುಜ್‌ ಜಲಸಂಧಿಗೆ ಸಮೀಪದಲ್ಲಿದೆ. ಹೋರ್ಮುಜ್‌ ಮುಕ್ತಗೊಳಿಸದಿದ್ದರೆ ಖಾರ್ಗ್‌ ಮೇಲೆ ದಾಳಿ ನಡೆಸುವುದಾಗಿ ಟ್ರಂಪ್‌ ಹಲವು ಬಾರಿ ಎಚ್ಚರಿಸಿದ್ದರು. ಇದೀಗ ದ್ವೀಪದಲ್ಲಿ ಹಲವು ಬೃಹತ್‌ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್‌ನ ಮೆಹ್ರ್‌ ಸುದ್ದಿಸಂಸ್ಥೆ ವರದಿ ಮಾಡಿದೆ. ಇಲ್ಲಿನ ಸೈನಿಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆದಿದ್ದಾಗಿ ಆ್ಯಕ್ಸಿಯೋಸ್‌ ವರದಿ ಮಾಡಿದೆ. ಟೆಹ್ರಾನ್‌ ಸೇತುವೆ ನಾಶ:

ಏಪ್ರಿಲ್ ಆರಂಭದಲ್ಲಿ, ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿ ಟೆಹ್ರಾನ್ ಮತ್ತು ಕರಾಜ್ ನಡುವಿನ ಪ್ರಮುಖ ‘ಬಿ1’ ಸೇತುವೆಯನ್ನು ಧ್ವಂಸಗೊಳಿಸಿದ್ದವು. ಈ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಇದೀಗ ಇರಾನ್‌ನ ಮಧ್ಯಭಾಗದಲ್ಲಿರುವ ಮತ್ತೊಂದು ಸೇತುವೆಯ ಮೇಲೆ ದಾಳಿ ನಡೆಸಿವೆ. ಇಸ್ರೇಲ್‌ ರಾಯಭಾರ ಕಚೇರಿ ಮೇಲೆ ದಾಳಿ:

ಇಸ್ತಾಂಬುಲ್‌ನ ಇಸ್ರೇಲ್ ರಾಯಭಾರ ಕಚೇರಿ ಹೊರಗೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಮೂವರು ದಾಳಿಕೋರರು ರೈಫಲ್‌ಗಳೊಂದಿಗೆ ಬಂದು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರ ಪ್ರತಿದಾಳಿಗೆ, ಒಬ್ಬ ದಾಳಿಕೋರ ಸಾವಿಗೀಡಾಗಿದ್ದಾನೆ. ಗಾಯಗೊಂಡ ಇನ್ನಿಬ್ಬರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಆ ಸಮಯದಲ್ಲಿ ಕಚೇರಿಯಲ್ಲಿ ಯಾವುದೇ ಇಸ್ರೇಲ್ ಸಿಬ್ಬಂದಿ ಇರಲಿಲ್ಲ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಪನಾಮಾ ಕಾಲುವೆ ಬಳಿ ತೈಲ ಘಟಕ ಸ್ಫೋಟ

- ಪನಾಮಾದ ‘ಅಮೆರಿಕ ಸೇತುವೆ’ ಬಳಿ ಘಟನೆ

- ಹೋರ್ಮುಜ್‌ ಬಂದ್ ನಂತರ ಪನಾಮಾದಲ್ಲಿ ಹೆಚ್ಚು ಸಂಚಾರ

- ಅದರ ನಡುವೆಯೇ ದಾಳಿ । ಓರ್ವ ಬಲಿ

ಪನಾಮಾ: ಅಮೆರಿಕ-ಇರಾನ್‌ ಸಂಘರ್ಷ ತೀವ್ರ ಸ್ವರೂಪ ಪಡೆದಿರುವ ಮಧ್ಯೆ, ಪನಾಮಾ ನಗರದಲ್ಲಿನ ‘ಅಮೆರಿಕ ಸೇತುವೆ’ಯ ಸಮೀಪ ಬಾಲ್ಬೋವಾ ತೈಲ ಸಂಗ್ರಹಣಾ ಘಟಕದಲ್ಲಿ ಮಂಗಳವಾರ ಭಾರೀ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಕಾರ್ಮಿಕ ಸಾವಿಗೀಡಾಗಿದ್ದು, ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ ಕಾಣೆಯಾಗಿದ್ದಾನೆ.1,654 ಮೀ. ಉದ್ದದ ಸೇತುವೆಗೆ ಸ್ಫೋಟದ ಉಷ್ಣತೆಯಿಂದ ಹಾನಿಯಾಗಿರಬಹುದು ಎಂದು ಶಂಕಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಪನಾಮಾ ಕಾಲುವೆಯ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಏಷ್ಯಾದಿಂದ ಅಮೆರಿಕಕ್ಕೆ ಸರಕು ಸಾಗಣೆ ಮಾಡುವಲ್ಲಿ ಮಹತ್ವದ್ದಾಗಿರುವ ಪನಾಮಾ ಕಾಲುವೆ, ವಿಶ್ವದ ಅತ್ಯಂತ ಜನನಿಬಿಡ ಹಡಗು ಮಾರ್ಗಗಳಲ್ಲಿ ಒಂದು. ಇರಾನ್ ಸಂಘರ್ಷದಿಂದಾಗಿ ಹೋರ್ಮುಜ್ ಜಲಸಂಧಿ ಬಂದ್‌ ಆಗಿರುವುದರಿಂದ, ಇತ್ತೀಚೆಗೆ ಪನಾಮಾ ಕಾಲುವೆಯ ಮೂಲಕ ಟ್ಯಾಂಕರ್‌ಗಳ ಸಂಚಾರ ಗಣನೀಯವಾಗಿ ಹೆಚ್ಚಿದೆ. ಅದರ ನಡುವೆಯೇ ಸ್ಫೋಟ ಸಂಭವಿಸಿದ್ದು ಕುತೂಹಲ ಕೆರಳಿಸಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಅಮೆರಿಕದ ದಾಳಿ ತಡೆಯಲುಇರಾನ್‌ ಮಾನವ ಗುರಾಣಿ!- ವಿದ್ಯುತ್‌ ಘಟಕ, ಸೇತುವೆಗಳ ಬಳಿ ಜನರ ನಿಯೋಜನೆ- 1.4 ಕೋಟಿ ಜನ ಪ್ರಾಣತ್ಯಾಗಕ್ಕೆ ಸಿದ್ಧ: ಇರಾನ್ ಅಧ್ಯಕ್ಷ
ನಮ್ಮ ಬಳಿ ನಿಗೂಢ ಆಸ್ತ್ರ ಇದೆ:ಅಮೆರಿಕ ಉಪಾಧ್ಯಕ್ಷ ಎಚ್ಚರಿಕೆ- ಇರಾನ್‌ ಡೀಲ್‌ಗೆ ಬರದಿದ್ರೆ ಈವರೆಗೆ ಬಳಸದ ಅಸ್ತ್ರ ಬಳಕೆ- ಟ್ರಂಪ್‌ ನಾಗರಿಕತೆ ನಾಶ ಎಚ್ಚರಿಕೆ ಬಳಿಕ ವ್ಯಾನ್ಸ್‌ ಬೆದರಿಕೆ