ಇಸ್ರೇಲ್‌-ಹಿಜ್ಬುಲ್ಲಾ ನಡುವೆಯೂ ಕದನ ವಿರಾಮ

Published : Jun 20, 2026, 01:01 PM IST
israel

ಸಾರಾಂಶ

ದಕ್ಷಿಣ ಲೆಬನಾನ್‌ನಲ್ಲಿ ಭೀಕರ ಸಮರ ನಡೆಸಿದ್ದ ಇಸ್ರೇಲ್‌ ಹಾಗೂ ಇರಾನ್‌ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಕದನ ವಿರಾಮ ಒಪ್ಪಂದಕ್ಕೆ ಬಂದಿದ್ದಾರೆ. ಅಮೆರಿಕ ಹಾಗೂ ಕತಾರ್‌ನ ಮಧ್ಯಸ್ಥಿಕೆಯಲ್ಲಿ, ಇರಾನ್‌ನ ಸಹಕಾರದೊಂದಿಗೆ ಇದು ಜಾರಿಗೆ ಬಂದಿದೆ ಎಂದು ಅಮೆರಿಕ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

 ಜೆರುಸಲೇಂ/ಬೈರೂತ್‌: ದಕ್ಷಿಣ ಲೆಬನಾನ್‌ನಲ್ಲಿ ಭೀಕರ ಸಮರ ನಡೆಸಿದ್ದ ಇಸ್ರೇಲ್‌ ಹಾಗೂ ಇರಾನ್‌ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಕದನ ವಿರಾಮ ಒಪ್ಪಂದಕ್ಕೆ ಬಂದಿದ್ದಾರೆ. ಅಮೆರಿಕ ಹಾಗೂ ಕತಾರ್‌ನ ಮಧ್ಯಸ್ಥಿಕೆಯಲ್ಲಿ, ಇರಾನ್‌ನ ಸಹಕಾರದೊಂದಿಗೆ ಇದು ಜಾರಿಗೆ ಬಂದಿದೆ ಎಂದು ಅಮೆರಿಕ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಇದರೊಂದಿಗೆ ಈವರೆಗೆ ಅಮೆರಿಕ-ಇರಾನ್‌ ನಡುವೆ ನಡೆದಿದ್ದ ಶಾಂತಿ ಒಪ್ಪಂದಕ್ಕೆ ಈಗ ಹಿಜ್ಬುಲ್ಲಾ ಹಾಗೂ ಇಸ್ರೇಲ್‌ ಕೂಡ ಸೇರಿಕೊಂಡಂತಾಗಿದೆ. ಈ ಒಪ್ಪಂದವು ಲೆಬನಾನ್‌ ಹಾಗೂ ಇಸ್ರೇಲ್‌ ಅನ್ನೂ ಒಳಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬಾಯಿ ಮಾತಿನಲ್ಲಿ ಹೇಳಿದ್ದರೂ, ಸಂಧಾನ ಕಡತದಲ್ಲಿ ಈ ಅಂಶ ಇರಲಿಲ್ಲ. ಹೀಗಾಗಿ ಕದನವಿರಾಮವು ಮಧ್ಯಪ್ರಾಚ್ಯ ಶಾಂತಿ ಸ್ಥಾಪನೆಯತ್ತ ಮಹತ್ವದ ಹೆಜ್ಜೆಯಾಗಿದೆ.

ಯುದ್ಧವಿರಾಮಕ್ಕೆ ಸಮ್ಮತಿ

‘ಶುಕ್ರವಾರ ಬೆಳಗ್ಗೆ ನಡೆದ ತೀವ್ರ ಗುಂಡಿನ ಚಕಮಕಿಯ ನಂತರ ಎರಡೂ ಪಕ್ಷಗಳೂ ಯುದ್ಧವಿರಾಮಕ್ಕೆ ಸಮ್ಮತಿಸಿದವು. ಲೆಬನಾನ್ ಸ್ಥಳೀಯ ಸಮಯ ಮಧ್ಯಾಹ್ನ 4 ಗಂಟೆ ಸುಮಾರಿಗೆ ಕದನ ವಿರಾಮ ಜಾರಿಗೆ ಬಂದಿದೆ’ ಎಂದು 3 ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ದಕ್ಷಿಣ ಲೆಬನಾನ್‌ ಮೇಲೆ ಭೀಕರ ದಾಳಿ ನಡೆಸಿದ್ದ ಇಸ್ರೇಲ್‌ 47 ಜನರನ್ನು ಬಲಿ ಪಡೆದಿತ್ತು. ಇದಾದ ನಂತರ ಹಿಜ್ಬುಲ್ಲಾ ಕೂಡ ಪ್ರತಿದಾಳಿ ನಡೆಸಿ 4 ಇಸ್ರೇಲಿ ಯೋಧರನ್ನು ಸಾಯಿಸಿತ್ತು. ಲೆಬನಾನ್‌ ಮೇಲಿನ ಇಸ್ರೇಲ್‌ ದಾಳಿಗೆ ಕಿಡಿಕಾರಿದ್ದ ಇರಾನ್‌, ಪುನಃ ಹೋರ್ಮುಜ್‌ ಜಲಸಂಧಿಯನ್ನು ಮುಚ್ಚುವ ಬೆದರಿಕೆ ಹಾಕಿತ್ತು. ಅತ್ತ ಸ್ವಿಜರ್ಲೆಂಡ್‌ನಲ್ಲಿ ಶುಕ್ರವಾರ ನಡೆಯಬೇಕಿದ್ದ ಇರಾನ್-ಅಮೆರಿಕ ಸಂಧಾನ ಸಭೆ ಕೂಡ ಲೆಬನಾನ್‌-ಇಸ್ರೇಲ್‌ ಜಟಾಪಟಿ ಕಾರಣ ರದ್ದಾಗಿತ್ತು.

ಬೆದರಿಕೆ ವಿರುದ್ಧ ಹೋರಾಡುವ ಸ್ವಾತಂತ್ರ್ಯವಿದೆ: ಇಸ್ರೇಲ್

ಈ ನಡುವೆ, ಇಸ್ರೇಲ್ ಸೈನ್ಯದ ವಕ್ತಾರ ಬ್ರಿಗೇಡಿಯರ್ ಜನರಲ್ ಎಫಿ ಡೆಫ್ರಿನ್ ಮಾತನಾಡಿ, ‘ಯುದ್ಧವಿರಾಮದ ಹೊರತಾಗಿಯೂ ಯಾವುದೇ ಬೆದರಿಕೆಯ ವಿರುದ್ಧ ಪೂರ್ಣ ಕಾರ್ಯಾಚರಣಾ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದೇವೆ. ಇಸ್ರೇಲ್ ಪಡೆಗಳು ಬ್ಯೂಫೋರ್ಟ್ ಕ್ಯಾಸಲ್ ಪ್ರದೇಶ ಮತ್ತು ಅಲಿ ತಾಹೆರ್ ರಿಡ್ಜ್‌ನಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ಅಲ್ಲಿ ಹಿಜ್ಬುಲ್ಲಾಗಳ ಪ್ರಮುಖ ಸುರಂಗ ಮಾರ್ಗಗಳನ್ನು ನಾಶಪಡಿಸುವ ಕೆಲಸ ನಡೆಯುತ್ತಿದೆ. ಈ ಸುರಂಗಗಳು ಉಗ್ರರ ಕೇಂದ್ರೀಯ ಕಮಾಂಡ್ ಮೂಲಸೌಕರ್ಯವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಅಮೆರಿಕ - ಇರಾನ್‌ ಶಾಂತಿ ಒಪ್ಪಂದ - ಯುದ್ಧ ಅಂತ್ಯ
ಯುಎಇನಲ್ಲೂ 15 ವರ್ಷ ಒಳಗಿನ ಮಕ್ಕಳಿಗೆ ಜಾಲತಾಣ ಬಳಕೆ ನಿರ್ಬಂಧ