ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಠಿಣ ವ್ಯಕ್ತಿ, ಅವರು ನನ್ನ ಉತ್ತಮ ಸ್ನೇಹಿತ ಎಂದು ಬಣ್ಣಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಭಾರತದ ಆರ್ಥಿಕ ಪ್ರಗತಿ ದರವನ್ನು ಮೆಚ್ಚಿ ಮಾತನಾಡಿದ್ದಾರೆ.
ವಾಷಿಂಗ್ಟನ್: ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಠಿಣ ವ್ಯಕ್ತಿ, ಅವರು ನನ್ನ ಉತ್ತಮ ಸ್ನೇಹಿತ ಎಂದು ಬಣ್ಣಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಭಾರತದ ಆರ್ಥಿಕ ಪ್ರಗತಿ ದರವನ್ನು ಮೆಚ್ಚಿ ಮಾತನಾಡಿದ್ದಾರೆ. ಭಾರತದಲ್ಲಿ ಬಡ್ಡಿದರವೂ ಕಡಿಮೆ ಇದೆ, ಜಿಡಿಪಿ ಬೆಳವಣಿಗೆ ದರವು ಶೇ.7ರಷ್ಟಿದೆ. ಭಾರತವನ್ನು ನೋಡಿ ಕಲಿಯಿರಿ ಎಂದು ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಆರ್ಥಿಕತೆ ಗಂಭೀರ ಸ್ಥಿತಿಯಲ್ಲಿದೆ 2 ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕದ ನೆಲದಲ್ಲೇ ನಿಂತು ಮೋದಿ ಸರ್ಕಾರದ ಆರ್ಥಿಕತೆ ಟೀಕಿಸಿದ್ದರೆ, ಇದೀಗ ಅದೇ ಅಮೆರಿಕ ದೇಶದ ಅಧ್ಯಕ್ಷರೇ ರಾಹುಲ್ ವಾದವನ್ನು ತಿರಸ್ಕರಿಸುವಂಥ ಹೇಳಿಕೆ ನೀಡಿದ್ದಾರೆ. ಇದು ಭಾರತದ ಆರ್ಥಿಕತೆ ಕುರಿತ ರಾಹುಲ್ ವಾದಕ್ಕೆ ಭಾರೀ ಹಿನ್ನಡೆ ಆದಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಟೀಕೆ, ಮೆಚ್ಚುಗೆ:
ಶ್ವೇತಭವನದಲ್ಲಿ ಶುಕ್ರವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು,‘ಅಮೆರಿಕದ ಫೆಡರಲ್ ರಿಸರ್ವ್ ರಾಜಕೀಯ ಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಅದು ಬಡ್ಡಿದರಗಳನ್ನು ಹೆಚ್ಚಿಸುತ್ತಿದೆ. ಈ ಮೂಲಕ ದೇಶವನ್ನು ನಾಶಮಾಡುತ್ತಿದೆ. ಹೀಗಾಗಬಾರದು. ಅಮೆರಿಕ ವಿಶ್ವದಲ್ಲೇ ಅತ್ಯಂತ ಕಡಿಮೆ ಬಡ್ಡಿದರಗಳನ್ನು ಹೊಂದಿರಬೇಕು’ ಎಂದು ಕರೆ ನೀಡಿದರು.
ತಮ್ಮ ಮಾತಿನ ಸಮರ್ಥನೆಯಾಗಿ ಭಾರತದ ಉದಾಹರಣೆ ನೀಡಿದ ಅವರು, ‘ಭಾರತದಲ್ಲಿ ಕಡಿಮೆ ಬಡ್ಡಿದರಗಳಿದ್ದು, ಸುಮಾರು ಶೇ.7ರಷ್ಟು ಜಿಡಿಪಿ (ಜಿಡಿಪಿ) ಬೆಳವಣಿಗೆ ಇದೆ. ಅಮೆರಿಕವೂ ಇದೇ ರೀತಿ ಬಡ್ಡಿದರಗಳನ್ನು ಕಡಿಮೆ ಮಾಡಿದರೆ ಶೇ. 15–20ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಬಹುದು ಮತ್ತು ಸಾಲವನ್ನು ವೇಗವಾಗಿ ತೀರಿಸಬಹುದು. ಆದರೆ ಫೆಡರಲ್ ರಿಸರ್ವ್ ಇದಕ್ಕೆ ಅವಕಾಶ ನೀಡುತ್ತಿಲ್ಲ’ ಎಂದರು.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2026ರಲ್ಲಿ ಭಾರತದ ಬೆಳವಣಿಗೆಯನ್ನು ಶೇ. 7ರಷ್ಟು ಅಂದಾಜಿಸಿದೆ, ಆದರೆ ಹಣದುಬ್ಬರ ಮತ್ತು ಜಾಗತಿಕ ಒತ್ತಡಗಳ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಅಮೆರಿಕದ ಫೆಡರಲ್ ರಿಸರ್ವ್ ತಮ್ಮದೇ ಆದ ನೀತಿಗಳನ್ನು ಅನುಸರಿಸುತ್ತಿವೆ.
ರಾಗಾ ವಾದ ಫೇಲ್
ಅಮೆರಿಕದ ಕೊಲಂಬಿಯಾ ವಿವಿಯಲ್ಲಿ ವಿದ್ಯಾರ್ಥಿಗಳ ಜೊತೆ ರಾಹುಲ್ ಸಂವಾದ
ಭಾರತದ ನಿರುದ್ಯೋಗ, ಆರ್ಥಿಕತೆ, ಶಿಕ್ಷಣ ನೀತಿ, ಉತ್ಪಾದನೆ ಕುಸಿತ ಬಗ್ಗೆ ಟೀಕೆ
ಅದರ ಬೆನ್ನಲ್ಲೇ ರಾಹುಲ್ ವಾದ ತಿರಸ್ಕರಿಸುವ ರೀತಿ ಹೇಳಿಕೆ ಕೊಟ್ಟ ಅಧ್ಯಕ್ಷ ಟ್ರಂಪ್
ಭಾರತದಲ್ಲಿ ಬಡ್ಡಿ ದರ ಕಮ್ಮಿ. ಹೀಗಾಗಿ ಆರ್ಥಿಕತೆಯೂ ಉತ್ತಮ ಪ್ರಗತಿ ಕಂಡಿದೆ
ಅಮೆರಿಕದಲ್ಲೂ ಬಡ್ಡಿದರ ಇಳಿದರೆ ಜಿಡಿಪಿ ಪ್ರಗತಿ ಶೇ.14ಕ್ಕೆ ಏರುತ್ತದೆ ಎಂದು ವಾದ
ಈ ಮೂಲಕ ಭಾರತ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಮೆಚ್ಚುಗೆ
ರಾಹುಲ್ ಈಗೇನು ಹೇಳ್ತಾರೆ?: ಬಿಜೆಪಿ
ನವದೆಹಲಿ: ‘ಟ್ರಂಪ್ ಅವರೇ ಭಾರತದ ಆರ್ಥಿಕತೆ ಹೊಗಳಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತ್ರ ಜಾಣಕುರುಡು ತೋರುತ್ತಿದ್ದಾರೆ. ಭಾರತದ ಆರ್ಥಿಕತೆ ಹದಗೆಟ್ಟಿದೆ ಎನ್ನುತ್ತಿದ್ದಾರೆ. ಟ್ರಂಪ್ ಹೇಳಿಕೆ ಬಳಿಕ ಈಗೇನು ಹೇಳುತ್ತಾರೆ?’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟಿಸಿರುವ ಬಿಜೆಪಿ ನಾಯಕ ಆಶಿಶ್ ಸೂದ್, ‘ಭಾರತದ ಜಿಡಿಪಿ ಬೆಳವಣಿಗೆಯನ್ನು ಟ್ರಂಪ್ ಗುರುತಿಸಿರುವುದು, ದೇಶದ ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನ ಮತ್ತು ಆರ್ಥಿಕ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಭಾರತದ ಈ ಗಮನಾರ್ಹ ಪ್ರಗತಿಯನ್ನು ಜಗತ್ತೇ ಒಪ್ಪಿಕೊಳ್ಳುತ್ತಿರುವಾಗ, ರಾಹುಲ್ ಮತ್ತು ಕಾಂಗ್ರೆಸ್ ದೇಶದ ಸಾಧನೆಗಳನ್ನು ಕಂಡೂ ಕಾಣದಂತೆ ನಿರ್ಲಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

