ಸಾರಾಂಶ
- ಮಲೇಷ್ಯಾದಲ್ಲಿ ನಡೆವ ಆಸಿಯಾನ್ ಶೃಂಗದಲ್ಲಿ ಭೇಟಿ ಸಾಧ್ಯತೆ
ನವದೆಹಲಿ: ಶೇ.50 ಸುಂಕ ಹೇರಿಕೆ ಬಳಿಕ ಹದಗೆಟ್ಟಿರುವ ಭಾರತ-ಅಮೆರಿಕ ನಡುವಿನ ಸಂಬಂಧ ಸುಧಾರಣೆಗೆ ಮಲೇಷ್ಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ 45ನೇ ಆಸಿಯಾನ್ ಸಮ್ಮೇಳನ ವೇದಿಕೆಯಾಗುವ ನಿರೀಕ್ಷೆ ಇದೀಗ ಗರಿಗೆದರಿದೆ.ಸುಂಕ ವಿವಾದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆಗೆ ಮುಖಾಮುಖಿ ಭೇಟಿಯಿಂದ ಅಂತರ ಕಾಯ್ದುಕೊಂಡು ಬಂದಿದ್ದ ಪ್ರಧಾನಿ ಮೋದಿ ಅವರು ಆಸಿಯಾನ್ ಸಮ್ಮೇಳನದಲ್ಲಿ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮೋದಿ ಮತ್ತು ಟ್ರಂಪ್ ಈ ಸಮ್ಮೇಳನದ ನೆಪದಲ್ಲಿ ಪ್ರತ್ಯೇಕವಾಗಿ ಭೇಟಿಯಾಗಿ ಕೆಲಕಾಲ ಚರ್ಚೆ ನಡೆಸುವ ನಿರೀಕ್ಷೆಯೂ ಇದೆ. ಒಂದು ವೇಳೆ ಇದು ಸಾಧ್ಯವಾದರೆ ಅಮೆರಿಕದ ಪ್ರತಿಸುಂಕ ವಿವಾದದ ಬಳಿಕ ಹಳೆಯ ದೋಸ್ತಿಗಳಾದ ಮೋದಿ ಮತ್ತು ಟ್ರಂಪ್ ನಡುವಿನ ಮೊದಲ ಮುಖಾಮುಖಿ ಭೇಟಿ ಇದಾಗಲಿದೆ.ಪ್ರಧಾನಿ ಮೋದಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸೆ.17ರಂದು ಟ್ರಂಪ್ ಅವರು ಕರೆ ಮಾಡಿ ಮಾತನಾಡಿದ್ದರು. ಈ ಕರೆ ಮೋದಿ ಮತ್ತು ಟ್ರಂಪ್ ನಡುವಿನ ಭೇಟಿಗೆ ಮುನ್ನಡಿ ಬರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಶ್ವಸಂಸ್ಥೆ ಸಭೆಯಲ್ಲಿ ಪಾಲ್ಗೊಳ್ಳಲ್ಲ:ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಮೋದಿ ಮತ್ತು ಟ್ರಂಪ್ ಮುಖಾಮುಖಿ ಭೇಟಿಯಾಗುವ ಸಾಧ್ಯತೆ ಇದ್ದರೆ ಅದು ಮಲೇಷ್ಯಾದಲ್ಲಿ ನಡೆಯಲಿರುವ ಆಸಿಯಾನ್ ಶೃಂಗದಲ್ಲಿ ಮಾತ್ರ ಎನ್ನಲಾಗುತ್ತಿದೆ. ಉಭಯ ನಾಯಕರ ಭೇಟಿ ಕುರಿತು ಈವರೆಗೆ ಯಾವುದೇ ಚರ್ಚೆ ಆಗಿಲ್ಲ. ಅಮೆರಿಕವಾಗಲಿ, ಭಾರತವಾಗಲಿ ಅಧಿಕೃತವಾಗಿ ಉಭಯ ನಾಯಕರ ಪ್ರವಾಸ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.
ಆದರೆ, ಮೋದಿ ಹಿಂದಿನಿಂದಲೂ ಆಸಿಯಾನ್ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಈ ಬಾರಿಯೂ ಅವರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇನ್ನು ಟ್ರಂಪ್ ಕರೆ ಮಾಡಿ ಆಸಿಯಾನ್ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಕುರಿತ ಇಚ್ಛೆ ವ್ಯಕ್ತಪಡಿಸಿರುವ ವಿಚಾರವನ್ನು ಮಲೇಷ್ಯಾದ ಪ್ರಧಾನಿಯೇ ಖಚಿತಪಡಿಸಿದ್ದಾರೆ.ಭಾರತ ಭೇಟಿಗೆ ವೇದಿಕೆ:
ಆಸಿಯಾನ್ ಸಮ್ಮೇಳನದಲ್ಲಿ ಮೋದಿ- ಟ್ರಂಪ್ ಭೇಟಿ ಸಾಧ್ಯವಾದರೆ ಅದು ಮುಂದೆ ನವೆಂಬರ್‌ನಲ್ಲಿ ನಡೆಯಲಿರುವ ಕ್ವಾಡ್ ನಾಯಕರ ಸಮ್ಮೇಳನಕ್ಕೆ ಟ್ರಂಪ್ ಅವರ ಭಾರತ ಭೇಟಿಯನ್ನು ಖಚಿತಪಡಿಸುವ ನಿರೀಕ್ಷೆ ಇದೆ. ಭಾರತಕ್ಕೆ ಅಮೆರಿಕದ ನೂತನ ರಾಯಭಾರಿ ಸರ್ಜಿಯೋ ಗೊರ್ ಅವರು ಈಗಾಗಲೇ ಕ್ವಾಡ್ ಸಮ್ಮೇಳನದಲ್ಲಿ ಟ್ರಂಪ್ ಅವರ ಭೇಟಿ ಸಾಧ್ಯತೆ ಕುರಿತು ತಿಳಿಸಿದ್ದಾರೆ. ಆದರೆ ಈ ಕುರಿತ ಅಧಿಕೃತ ಸಂದೇಶ ಇನ್ನಷ್ಟೇ ಭಾರತಕ್ಕೆ ತಲುಪಬೇಕಿದೆ.==
ಸರ್ಕಾರಗಳ ಅಣತಿಯಂತೆ ಪಾಕ್ ಉಗ್ರರ ಭೇಟಿ: ಯಾಸಿನ್ಪ್ರತ್ಯೇಕತಾವಾದಿ ನಾಯಕನ ಸ್ಫೋಟಕ ಆರೋಪ
ನವದೆಹಲಿ: 2006ರಲ್ಲಿ ಅಂದಿನ ಭಾರತ ಸರ್ಕಾರದ ಮನವಿಗೆ ಮೇರೆಗೆ ನಾನು ಪಾಕಿಸ್ತಾನಕ್ಕೆ ತೆರಳಿ ಉಗ್ರ ಹಫೀಜ್ ಸಯೀದ್‌ನನ್ನು ಭೇಟಿ ಮಾಡಿದ್ದೆ. ಈ ಭೇಟಿಗಾಗಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನನಗೆ ಕೃತಜ್ಞತೆ ಸಲ್ಲಿಸಿದ್ದರು ಎಂದು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ, ಉಗ್ರ ಯಾಸಿನ್ ಮಲಿಕ್ ಗಂಭೀರ ಆರೋಪ ಮಾಡಿದ್ದಾನೆ.
ಜೊತೆಗೆ ನನಗೆ ಆರ್‌ಎಸ್‌ಎಸ್, ಬಿಜೆಪಿ ನಾಯಕರ ನಂಟೂ ಇತ್ತು ಎಂದಿದ್ದಾನೆ.ಉಗ್ರರಿಗೆ ನೆರವಿನ ಆರೋಪದಡಿ ಬಂಧಿತ ಯಾಸಿನ್ ದೆಹಲಿ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾನೆ.ಭಾರತದಲ್ಲಿ ಶಾಂತಿ ಸ್ಥಾಪನೆಗೆ ಕೇವಲ ಪಾಕ್ ಸರ್ಕಾರದೊಂದಿಗೆ ಮಾತುಕತೆಯಿಂದ ಪರಿಹಾರ ಸಿಗದು. ಇದಕ್ಕೆ ಉಗ್ರರನ್ನೂ ವೇದಿಕೆಗೆ ತರಬೇಕು ಎಂದು ಭಾರತ ಉಗ್ರರ ಜೊತೆ ಹಿಂಬಾಗಿಲ ಮಾತುಕತೆ ನಡೆಸಿತ್ತು. ಈ ಸಂಬಂಧ ಉಗ್ರ ಸಯೀದ್ ಭೇಟಿಗೆ ಸ್ವತಃ ಸುಪ್ತಚರ ಸಂಸ್ಥೆ ಮುಖ್ಯಸ್ಥ ವಿ.ಕೆ.ಜೋಶಿ ನನಗೆ ಮನವಿ ಮಾಡಿದ್ದರು. ಅದರಂತೆ ನಾನು ಪಾಕ್‌ಗೆ ತೆರಳಿ ಸಯೀದ್‌ನ ಭೇಟಿಯಾಗಿ ಬಂದೆ. ಬಳಿಕ ಈ ವಿಷಯವನ್ನು ಸ್ವತಃ ಮನಮೋಹನ್‌ಗೆ ವಿವರಿಸಿದಾಗ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ತಿಳಿಸಿದ್ದರು. ಆದರೆ ಬಳಿಕ ಉಗ್ರರ ನಂಟಿನ ಆರೋಪ ಹೊರಿಸಿ ನನ್ನನ್ನು ಬಂಧಿಸಲಾಯಿತು ಎಂದು ಆರೋಪಿಸಿದ್ದಾನೆ.