ಸಾರಾಂಶ
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಇದೀಗ ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇ.245ರ ವರೆಗೆ ಪ್ರತಿ ತೆರಿಗೆ ಹಾಕುವುದಾಗಿ ಹೇಳಿದೆ. ಈ ಮೂಲಕ ಅಮೆರಿಕ ಮತ್ತು ಚೀನಾ ನಡುವಿನ ತೆರಿಗೆ ಯುದ್ಧ ಮತ್ತಷ್ಟು ತೀವ್ರಗೊಂಡಂತಾಗಿದೆ. ಚೀನಾವು ಇತ್ತೀಚೆಗೆ ರಫ್ತು ನಿರ್ಬಂಧಗಳು ಮತ ಪ್ರತಿ ತೆರಿಗೆ ಘೋಷಿಸಿದ ಬೆನ್ನಲ್ಲೇ ಅಮೆರಿಕ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಚೀನಾವು ಉದ್ದೇಶಪೂರ್ವಕವಾಗಿ ಗ್ಯಾಲಿಯಂ, ಜರ್ಮೇನಿಯಂ, ಆ್ಯಂಟಿಮೋನಿಯಂಥ ಮಿಲಿಟರಿ, ಬಾಹ್ಯಾಕಾಶ ಮತ್ತು ಸೆಮಿಕಂಡಕ್ಟರ್ ಉದ್ಯಮಗಳಿಗೆ ಮುಖ್ಯವಾಗಿರುವ ವಸ್ತುಗಳ ರಫ್ತಿಗೆ ನಿರ್ಬಂಧ ಹೇರಿದೆ. ಜತೆಗೆ, ತಿಂಗಳ ಹಿಂದಷ್ಟೇ ಆರು ವಿರಳ ಲೋಹಗಳು ಮತ್ತು ಮ್ಯಾಗ್ನೆಟ್‌ಗಳ ರಫ್ತನ್ನು ನಿರ್ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರು ಇದೀಗ ಚೀನಾ ಉತ್ಪನ್ನಗಳ ಮೇಲೆ ಶೇ.245 ತೆರಿಗೆ ವಿಧಿಸಲು ನಿರ್ಧರಿಸಿದ್ದಾರೆ.
ಮಾತುಕತೆಗೆ ಪ್ರತಿನಿಧಿ ನೇಮಿಸಿದ ಚೀನಾ:
ಈ ನಡುವೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾವು ಅಮೆರಿಕ ಜತೆಗೆ ಮಾತುಕತೆಗೆ ಅಂತಾರಾಷ್ಟ್ರೀಯ ವ್ಯಾಪಾರ ಪ್ರತಿನಿಧಿ ಚೆಂಗ್‌ಗ್ಯಾಂಗ್ ಅವರನ್ನು ಪ್ರತಿನಿಧಿಯಾಗಿ ನೇಮಿಸಿದೆ. ಲೀ ಅವರು ಈ ಹಿಂದೆ ಡಬ್ಲ್ಯುಟಿಒದಲ್ಲಿ ಚೀನಾದ ರಾಯಭಾರಿ ಆಗಿದ್ದರು. ವ್ಯಾಪಾರ ಒಪ್ಪಂದ ಮಾಡಬೇಕೋ, ಬೇಡವೋ ಎಂಬ ನಿರ್ಧಾರವನ್ನು ಚೀನಾಗೆ ಬಿಡಲಾಗಿದೆ ಎಂಬ ಟ್ರಂಪ್ ಹೇಳಿಕೆ ಬೆನ್ನಲ್ಲೇ ಚೀನಾ ಈ ಹೆಜ್ಜೆ ಇಟ್ಟಿದೆ.