ಕದನ ವಿರಾಮ 20 ದಿನಕ್ಕೇ ಖತಂ - ಯುದ್ಧ ಮತ್ತೆ ಪ್ರಾರಂಭ!

Published : Jul 09, 2026, 09:44 AM IST
trump iran ceasefire us airstrikes iran hormuz war middle east news

ಸಾರಾಂಶ

20 ದಿನಗಳ ಹಿಂದೆ ಏರ್ಪಟ್ಟ ಕದನ ವಿರಾಮದಿಂದ ಸಂಘರ್ಷ ಮುಗಿದು, ಇನ್ನೇನು ಶಾಂತಿ ಪುನಸ್ಥಾಪನೆಯಾಯಿತು ಎನ್ನುವ ಹೊತ್ತಿನಲ್ಲೇ ಅಮೆರಿಕ ಮತ್ತು ಇರಾನ್‌ ನಡುವೆ ಮತ್ತೆ ಭೀಕರ ಯುದ್ಧ ಆರಂಭವಾಗಿದೆ.

 ಟೆಹ್ರಾನ್‌: 20 ದಿನಗಳ ಹಿಂದೆ ಏರ್ಪಟ್ಟ ಕದನ ವಿರಾಮದಿಂದ ಸಂಘರ್ಷ ಮುಗಿದು, ಇನ್ನೇನು ಶಾಂತಿ ಪುನಸ್ಥಾಪನೆಯಾಯಿತು ಎನ್ನುವ ಹೊತ್ತಿನಲ್ಲೇ ಅಮೆರಿಕ ಮತ್ತು ಇರಾನ್‌ ನಡುವೆ ಮತ್ತೆ ಭೀಕರ ಯುದ್ಧ ಆರಂಭವಾಗಿದೆ. ಹೋರ್ಮುಜ್‌ ಜಲಸಂಧಿಯಲ್ಲಿ ಸಾಗುತ್ತಿದ್ದ 3 ಹಡಗಿನ ಮೇಲೆ ಇರಾನ್‌ ನಡೆಸಿದ ದಾಳಿಗೆ ತಿರುಗೇಟು ನೀಡುವ ಸಲುವಾಗಿ, ಇರಾನ್‌ನ 80 ಸ್ಥಳಗಳನ್ನು ಗುರಿಯಾಗಿಸಿ ಬುಧವಾರ ಅಮೆರಿಕ ದಾಳಿ ನಡೆಸಿದೆ. ಇದಕ್ಕೆ ಸಡ್ಡು ಹೊಡೆಯುವಂತೆ ಇರಾನ್‌ ಕೂಡ ಕುವೈತ್‌ ಮತ್ತು ಬಹ್ರೈನ್‌ನಲ್ಲಿನ ಅಮೆರಿಕ ನೆಲೆಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಇದರ ಬೆನ್ನಲ್ಲೇ ಇರಾನ್‌ ವಿರುದ್ಧ ಕೆಂಡಾಮಂಡಲವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಸರ್ಕಾರ ಕ್ಯಾನ್ಸರ್‌ ಇದ್ದಂತೆ. ಆದಷ್ಟು ಬೇಗ ಅದನ್ನು ಕಿತ್ತೆಸೆಯಬೇಕು. ಇನ್ನು ಕದನ ವಿರಾಮ ಮುಂದುವರಿಸುವುದರಲ್ಲಿ ಯಾವುದೇ ಅರ್ಥ ಇಲ್ಲ. ನಾವು ಅವರ ಮೇಲೆ ಗುರುವಾರ ಮತ್ತಷ್ಟು ದಾಳಿ ನಡೆಸಲಿದ್ದೇವೆ. ಅದು ನಾಗರಿಕ ಮೂಲಸೌಕರ್ಯಗಳ ಮೇಲೆ ಆಗಿರಲಿದೆ. ಜೊತೆಗೆ ಭಾರೀ ತೈಲ ಸಂಪತ್ತು ಹೊಂದಿರುವ ಖಾರ್ಗ್‌ ದ್ವೀಪವನ್ನು ವಶಪಡಿಸಿಕೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಇರಾನ್‌ಗೆ ತೈಲ ಮಾರಾಟಕ್ಕೆ ನೀಡಲಾಗಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದಿರುವುದಾಗಿ ಘೋಷಿಸಿದ್ದಾರೆ.

ಇದರ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಭಾರೀ ಏರಿಕೆ ಕಂಡಿದ್ದರೆ, ಜಗತ್ತಿನ ಹಲವು ಷೇರುಪೇಟೆಗಳು ಭಾರೀ ಕುಸಿತ ಕಂಡಿವೆ.

ಆಗಿದ್ದೇನು?:

ಭಾರತಕ್ಕೆ ಹೊರಟಿದ್ದ ಒಂದು ಹಡಗು ಸೇರಿದಂತೆ ಮೂರು ಹಡಗುಗಳ ಮೇಲೆ ಇರಾನ್‌ ಮಂಗಳವಾರ ದಿಢೀರ್‌ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಇರಾನ್‌ನ 80 ಸ್ಥಳಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಟ್ರಂಪ್‌, ‘ನಾವು ಇರಾನ್‌ ಮೇಲೆ ಪ್ರಬಲ ದಾಳಿ ನಡೆಸಿದ್ದೇವೆ. ನನ್ನ ಪ್ರಕಾರ ಇರಾನ್‌ ಜತೆಗೆ ಕದನ ವಿರಾಮ ಮುಗಿದಿದೆ. ಇರಾನ್‌ ಸರ್ಕಾರ ಕ್ಯಾನ್ಸರ್‌ ಇದ್ದಂತೆ. ಅದನ್ನು ಆದಷ್ಟು ಬೇಗ ಕತ್ತರಿಸಬೇಕು. ಅವರೆಲ್ಲ ದುಷ್ಟರು, ತುಚ್ಛರು, ವಂಚಕರು. ಅವರು ತಮ್ಮದೇ ಜನರನ್ನು ಕೊಲ್ಲುತ್ತಾರೆ. ಸರ್ಕಾರ ವಿರೋಧಿ ಪ್ರತಿಭಟನೆ ವೇಳೆ 54,000 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಅವರು ನನ್ನ ಮೇಲೂ ದಾಳಿ ನಡೆಸಬಹುದು. ನಮಗೆ ಅವರು ಇಷ್ಟ ಇಲ್ಲ. ನನ್ನ ದೃಷ್ಟಿಯಲ್ಲಿ ಅವರ ಜತೆಗೆ ಮಾತುಕತೆ ಅಂದರೆ ಸಮಯದ ವ್ಯರ್ಥ. ಆದರೆ, ಅಮೆರಿಕದ ಪ್ರತಿನಿಧಿಗಳು ಮಾತುಕತೆ ಮಂದುವರಿಸಲು ಮುಕ್ತರು ಎಂದಿದ್ದಾರೆ. ಇದೇ ವೇಳೆ ನಾವು ಇರಾನ್‌ನ ಪರಮಾಣು ನಿಶಸ್ತ್ರೀಕರಣಕ್ಕೆ ಬದ್ಧವಾಗಿದ್ದೇವೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ಇರಾನ್‌ ಆಕ್ರೋಶ:

ಅಮೆರಿಕ ದಾಳಿಗೆ ಇರಾನ್‌ ತೀವ್ರ ಆಕ್ರೋಶ ಹೊರಹಾಕಿದ್ದು, ಮಕ್ಕಳ ಹಂತಕ ಮತ್ತು ಭಯೋತ್ಪಾದಕ ಅಮೆರಿಕ ಸೇನೆಯು ಹೋರ್ಮೊಜ್ಗನ್‌ ಮತ್ತು ಮಹ್‌ಶಹರ್‌ ಪ್ರಾಂತ್ಯಗಳ ಮೇಲೆ ದಾಳಿ ನಡೆಸುವ ಮೂಲಕ ಕದನ ವಿರಾಮ ಮತ್ತು ಇಸ್ಲಾಮಾಬಾದ್‌ ತಿಳಿವಳಿಕೆ ಒಪ್ಪಂದ ಉಲ್ಲಂಘಿಸಿದೆ ಎಂದಿದೆ.

ಕೊಲ್ಲಿ ಯುದ್ಧಕ್ಕೆ ಬೆದರಿದ ಸೆನ್ಸೆಕ್ಸ್‌:  1677 ಅಂಕ ಪಲ್ಟಿ

ಮುಂಬೈ: ಅಮೆರಿಕ- ಇರಾನ್‌ ನಡುವೆ ಮತ್ತೆ ಯುದ್ಧ ಆರಂಭವಾದ ಹಿನ್ನೆಲೆಯಲ್ಲಿ ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1677 ಅಂಕಗಳ ಕುಸಿತ ದಾಖಲಿಸಿದೆ. ಇದರಿಂದಾಗಿ ಹೂಡಿಕೆದಾರರಿಗೆ 10 ಲಕ್ಷ ಕೋಟಿ ರು. ನಷ್ಟ ಸಂಭವಿಸಿದೆ.

 ಕಚ್ಚಾ ತೈಲ ಬೆಲೆ 80 ಡಾಲರ್‌ಗೇರಿಕೆ

ನ್ಯೂಯಾರ್ಕ್‌: ಇರಾನ್‌ ಜೊತೆಗಿನ ಕದನವಿರಾಮ ಒಪ್ಪಂದ ಮುಗಿದ ಕಥೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಘೋಷಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆ ಕಚ್ಚಾತೈಲ ಬೆಲೆ ಒಮ್ಮೆಗೆ ಶೇ.6ರಷ್ಟು ಭರ್ಜರಿ ಏರಿಕೆ ಕಂಡಿದೆ. ಹೀಗಾಗಿ ಬ್ಯಾರಲ್‌ಗೆ 70 ಡಾಲರ್‌ ಆಸುಪಾಸಿಗೆ ಬಂದಿದ್ದ ಬೆಲೆ ಮತ್ತು 80 ಡಾಲರ್‌ ಸನಿಹ ತಲುಪಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇಂಡೋನೇಷ್ಯಾಗೆ ಮೋದಿ : ಇಂದು ಬ್ರಹ್ಮೋಸ್‌ ಡೀಲ್‌?
ಇಂದಿನಿಂದ 6 ದಿನ ಖಮೇನಿ ಅಂತ್ಯಕ್ರಿಯೆ