ಚೀನಾದಿಂದ ಅಣುದಾಳಿಯನ್ನೂ ಸಹಿಸಬಲ್ಲ ಕೃತಕ ದ್ವೀಪ ಸೃಷ್ಟಿ!

KannadaprabhaNewsNetwork |  
Published : Nov 24, 2025, 03:45 AM IST
ಬಾಂಬ್‌ | Kannada Prabha

ಸಾರಾಂಶ

ಎಲ್ಲಾ ಸಂಶೋಧನೆಗಳಲ್ಲಿ ಜಗತ್ತಿಗಿಂತ ಒಂದು ಹೆಜ್ಜೆ ಮುಂದಿರಲು ಬಯಸುವ ಚೀನಾ ಇದೀಗ ಅಣು ದಾಳಿಯನ್ನೂ ಸಹಿಸಬಲ್ಲ ಅತ್ಯಾಧುನಿಕ ದ್ವೀಪವೊಂದನ್ನು ನಿರ್ಮಿಸಲು ಮುಂದಾಗಿದೆ.

- ಭವಿಷ್ಯದಲ್ಲಿ ಅಣ್ವಸ್ತ್ರ ದಾಳಿಯಿಂದ ಮುಕ್ತವಾಗಲು ಪ್ಲಾನ್‌

- 2028ರಿಂದ ದ್ಬೀಪದ ಕೆಲಸ ಆರಂಭ: ಮಾಧ್ಯಮ ವರದಿ

- ಹೊಸತು

==

ಚೀನಾ ಖತರ್ನಾಕ್ ಪ್ಲಾನ್‌

- ಚೀನಾ ಶಾಂಘೈನ ಜಿಯಾವೊ ಟಾಂಗ್ ವಿಶ್ವವಿದ್ಯಾಲಯದಿಂದ ಕೃತಕ ದ್ವೀಪದ ಅಭಿವೃದ್ಧಿ

- ಹೊರಮೈಗೆ ಸ್ಯಾಂಡ್‌ವಿಚ್‌ ಪ್ಯಾನಲ್‌ ಅಳವಡಿಕೆ. ಇದರಿಂದ ದ್ವೀಪ ಅಣುದಾಳಿ ನಿರೋಧಕ

- ದೊಡ್ಡ ಅಲೆ, ಸೈಕ್ಲೋನ್‌, ಪರಮಾಣು ಸ್ಫೋಟದ ತೀವ್ರತೆ ಸಹಿಸಿಕೊಳ್ಳಲು ಇದು ಶಕ್ತ

- 78,000 ಟನ್‌ ತೂಗುವ ಈ ಕೃತಕ ದ್ವೀಪ ಚೀನಾದ ಒಂದು ಸಮರ ನೌಕೆಯಷ್ಟು ದೊಡ್ಡದು

- ಇದರಲ್ಲಿ 238 ಜನರು 4 ತಿಂಗಳು ಹೊರಜಗತ್ತಿನ ಜತೆ ಸಂಪರ್ಕವೇ ಇಲ್ಲದೆ ಇರಬಹುದು

==

ಬೀಜಿಂಗ್‌: ಎಲ್ಲಾ ಸಂಶೋಧನೆಗಳಲ್ಲಿ ಜಗತ್ತಿಗಿಂತ ಒಂದು ಹೆಜ್ಜೆ ಮುಂದಿರಲು ಬಯಸುವ ಚೀನಾ ಇದೀಗ ಅಣು ದಾಳಿಯನ್ನೂ ಸಹಿಸಬಲ್ಲ ಅತ್ಯಾಧುನಿಕ ದ್ವೀಪವೊಂದನ್ನು ನಿರ್ಮಿಸಲು ಮುಂದಾಗಿದೆ. ಸಂಶೋಧನಾ ಕೇಂದ್ರದ ರೀತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ದ್ವೀಪ 2028ರಿಂದ ಕಾರ್ಯನಿರ್ವಹಿಸಲಿದೆ ಎಂದು ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

ಶಾಂಘೈನ ಜಿಯಾವೊ ಟಾಂಗ್ ವಿಶ್ವವಿದ್ಯಾಲಯ ಈ ದ್ವೀಪವನ್ನು ಅಭಿವೃದ್ಧಿಪಡಿಸಲಿದೆ. 78,000 ಟನ್‌ ತೂಗುವ ಈ ಕೃತಕ ದ್ವೀಪ, ಚೀನಾದ ಅತಿದೊಡ್ಡ ವಿಮಾನ ವಾಹಕ ಯುದ್ಧ ನೌಕೆಯಾದ ಫುಜಿಯಾನ್‌ನಷ್ಟು ದೊಡ್ಡದಿರಲಿದೆ. ದ್ವೀಪವು 138 ಮೀ. ಉದ್ದ, 85 ಮೀ. ಅಗಲ ಇರಲಿದ್ದು, ಡೆಕ್‌ (ನೌಕೆಯ ಜಗುಲಿ) ನೀರಿನ ಮಟ್ಟಕ್ಕಿಂತ 45 ಮೀ. ಎತ್ತರದಲ್ಲಿ ಇರಲಿದೆ. ಇದರಲ್ಲಿ 238 ಜನರು 4 ತಿಂಗಳುಗಳ ಕಾಲ ಹೊರಜಗತ್ತಿನ ಜತೆ ಸಂಪರ್ಕವೇ ಇಲ್ಲದೆ ಹಾಯಾಗಿರಬಹುದು.

ಎಲ್ಲಾ ಕಾಲದಲ್ಲೂ ಕಾರ್ಯನಿರ್ವಹಿಸಬಲ್ಲ ಇದು ಸಮುದ್ರದಲ್ಲಿ ಏಳಬಹುದಾದ 6- 9 ಮೀಟರ್‌ ಎತ್ತರದ ಅಲೆಗಳು, ಅತ್ಯಂತ ಭಯಾನಕ ಚಂಡಮಾರುತ, ಅಥವಾ ಪರಮಾಣು ಸ್ಫೋಟದ ತೀವ್ರತೆಯನ್ನು ಸಹಿಸಿಕೊಳ್ಳಲು ಶಕ್ತವಾಗಿದೆ. ಇದು ಸಾಧ್ಯವಾಗಿರುವುದು, ಮೆಟಾಮೆಟೀರಿಯಲ್‌ಗಳನ್ನು (ಮಾನವನಿರ್ಮಿತ ವಸ್ತುಗಳು) ಬಳಸಿ ನಿರ್ಮಿಸಲಾದ ಹಲವು ಪದರಗಳ ಸ್ಯಾಂಡ್‌ವಿಚ್‌ ಪ್ಯಾನಲ್‌ನಿಂದ. ಇದನ್ನು ಕಾರ್ಬನ್-ಫೈಬರ್ ಬಲವರ್ಧಿತ ಪಾಲಿಮರ್‌, ಸ್ಟೀಲ್‌ ಮತ್ತು ಅಲ್ಯುಮಿನಿಯಂನಿಂದ ತಯಾರಿಸಲಾದ ಆಕ್ಸೆಟಿಕ್ ಲ್ಯಾಟಿಸ್‌ನಿಂದ ಜೇನುಗೂಡಿನ ಮಾದರಿಯಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಪದರಗಳು ಅಣುಸ್ಫೋಟದ ತೀವ್ರತೆಯನ್ನು ತಗ್ಗಿಸುವ ಮೂಲಕ ದ್ವೀಪವನ್ನು ರಕ್ಷಿಸುತ್ತವೆ.

ಪ್ರಸ್ತುತ ಇದನ್ನು ಆಳ ಸಮುದ್ರದಲ್ಲಿ ವೈಜ್ಞಾನಿಕ ಸಂಶೋಧನೆಗಳಿಗಾಗಿ ಬಳಸಲಾಗುವುದು ಎನ್ನಲಾಗಿದೆಯಾದರೂ, ಗೌಪ್ಯವಾಗಿ ಸೇನಾ ಉದ್ದೇಶಕ್ಕೂ ಉಪಯೋಗಿಸುಕೊಳ್ಳುವ ಸಾಧ್ಯತೆಯಿದೆ.

PREV

Recommended Stories

ಡ್ರಗ್ಸ್‌-ಉಗ್ರವಾದದ ನಂಟು ಕಟ್‌ : ಜಿ-20ಯಲ್ಲಿ ಪ್ರಧಾನಿ ಮೋದಿ ಕರೆ
ಮ್ಯಾನ್ಮಾರ್‌ ವಂಚಕರ ಬಳಿ ಸಿಲುಕಿದ್ದ 25 ಜನ ಕನ್ನಡಿಗರು ತವರಿಗೆ