ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.245ರಷ್ಟು ಭಾರೀ ತೆರಿಗೆ ಹೇರಿದ ಬೆನ್ನಲ್ಲೇ ಚೀನಾ ಇದೀಗ ಭಾರತದತ್ತ ಸ್ನೇಹದ ಹಸ್ತ ಚಾಚಿದೆ. ಭಾರತದ ಪ್ರೀಮಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತಾನು ಸಿದ್ಧ ಎಂದು ಚೀನಾ ಘೋಷಿಸಿದೆ.
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.245ರಷ್ಟು ಭಾರೀ ತೆರಿಗೆ ಹೇರಿದ ಬೆನ್ನಲ್ಲೇ ಚೀನಾ ಇದೀಗ ಭಾರತದತ್ತ ಸ್ನೇಹದ ಹಸ್ತ ಚಾಚಿದೆ. ಭಾರತದ ಪ್ರೀಮಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತಾನು ಸಿದ್ಧ ಎಂದು ಚೀನಾ ಘೋಷಿಸಿದೆ. ಜೊತೆಗೆ ಭಾರತದಲ್ಲಿ ಚೀನಾದ ಕಂಪನಿಗಳಿಗೆ ಸೂಕ್ತ ವಾತಾವರಣ ಒದಗಿಸುವಂತೆಯೂ ಕೋರಿದೆ.
ಈ ಕುರಿತು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಭಾರತದಲ್ಲಿನ ಚೀನಾ ರಾಯಭಾರಿ ಶು ಫೆಹೈಹಾಂಗ್, ‘ಭಾರತದ ಪ್ರೀಮಿಯಂ ವಸ್ತುಗಳ ಆಮದನ್ನು ಹೆಚ್ಚಿಸಿಕೊಳ್ಳುವುದರಿಂದ, ಭಾರತದ ಉದ್ಯಮಗಳು ಚೀನಾದ ಮಾರುಕಟ್ಟೆಯನ್ನು ಪ್ರವೇಶಿಸಿ ಬೇಡಿಕೆಗಳನ್ನು ಪೂರೈಸಬಹುದು. ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆ ನೀಗುತ್ತದೆ. ಜೊತೆಗೆ, ಭಾರತ ಕೂಡ ಚೀನೀ ಕಂಪನಿಗಳಿಗೆ ಪಾರದರ್ಶಕ ಮತ್ತು ತಾರತಮ್ಯರಹಿತ ವ್ಯವಹಾರ ವಾತಾವರಣ ಕಲ್ಪಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.
ಇದೇ ವೇಳೆ, ‘ಸ್ಪರ್ಧೆಯು ಸಮರವಾಗಿ ಮಾರ್ಪಾಡಾಗಬಾರದು’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನು ಉಲ್ಲೇಖಿಸಿದ ಶು, ‘ಸಂಬಂಧದಲ್ಲಿ ಸ್ಥಿರತೆ ಮತ್ತು ಸಹಕಾರಕ್ಕೆ ಮಾತುಕತೆ ಅಗತ್ಯ. ಚೀನಾ ಮತ್ತು ಭಾರತ ಎಲ್ಲಾ ರೀತಿಯ ಏಕಪಕ್ಷೀಯತೆ ಮತ್ತು ರಕ್ಷಣಾ ನೀತಿಯನ್ನು ವಿರೋಧಿಸುತ್ತವೆ’ ಎಂದರು. ಜೊತೆಗೆ, ವರ್ಷಾಂತ್ಯದಲ್ಲಿ ನಡೆಯಲಿರುವ ಎಸ್‌ಸಿಒ ಶೃಂಗಸಭೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಲು ಚೀನಾ ಬಯಸುತ್ತದೆ ಎಂದು ಹೇಳಿದರು. ಅಮೆರಿಕದ ತೆರಿಗೆ ದಾಳಿಯನ್ನು ಭಾರತ - ಚೀನಾ ದೇಶಗಳು ಒಟ್ಟಾಗಿ ಎದುರಿಸಬೇಕು ಎಂದು ಇತ್ತೀಚೆಗೆ ಚೀನಾದ ವಿದೇಶಾಂಗ ಇಲಾಖೆ ಹೇಳಿತ್ತು.
- ಭಾರತದ ಪ್ರೀಮಿಯಂ ಉತ್ಪನ್ನ ಆಮದಿಗೆ ಸಿದ್ಧ
- ಚೀನಾ ಮಾರುಕಟ್ಟೆಗೆ ಬನ್ನಿ: ಭಾರತಕ್ಕೆ ಆಹ್ವಾನ
- ಭಾರತದ ಪ್ರೀಮಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತಾನು ಸಿದ್ಧ ಎಂದು ಚೀನಾ ಘೋಷಣೆ
- ಭಾರತದ ಉದ್ಯಮಗಳು ಚೀನಾ ಪ್ರವೇಶಿಸಲು ಆಹ್ವಾನ. ಇದರಿಂದ ವ್ಯಾಪಾರ ಕೊರತೆ ನೀಗುತ್ತೆಂದು ವಾದ
- ಭಾರತ ಕೂಡ ಚೀನಿ ಕಂಪನಿಗಳಿಗೆ ಪಾರದರ್ಶಕ, ತಾರತಮ್ಯರಹಿತ ವಾತಾವರಣ ಕಲ್ಪಿಸಲಿ ಎಂದು ಕೋರಿಕೆ
- ಚೀನಾ ಮೇಲೆ ಟ್ರಂಪ್ 245% ತೆರಿಗೆ ಹೇರಿದ ಬೆನ್ನಲ್ಲೇ ಭಾರತದತ್ತ ಮುಖ ಮಾಡಿದ ಕಮ್ಯುನಿಸ್ಟ್ ದೇಶ
- ಗಲ್ವಾನ್ ಸಂಘರ್ಷದ ಬಳಿಕ ಚೀನಾ ಉತ್ಪನ್ನ ಬಹಿಷ್ಕರಿಸಿ ಬಿಸಿ ಮುಟ್ಟಿಸಿದ್ದ ಭಾರತದತ್ತ ಈಗ ಚೀನಾ ನೋಟ