ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮುಂದಿನ ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್‌ಎಸ್) ಪ್ರಯಾಣ ಕೈಗೊಳ್ಳಲಿದ್ದಾರೆ. ಈ ಮೂಲಕ ಇದೆ ಮೊದಲ ಬಾರಿಗೆ ಭಾರತೀಯೊಬ್ಬರು ಐಎಸ್‌ಎಸ್‌ಗೆ ಪ್ರಯಾಣ ಕೈಗೊಂಡ ಮತ್ತು 40 ವರ್ಷಗಳ ಬಳಿಕ ಭಾರತೀಯರೊಬ್ಬರು ಗಗನಯಾನ ಮಾಡಿದ ದಾಖಲೆ ನಿರ್ಮಾಣವಾಗಲಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ನೆರವಿನ ಆಕ್ಸಿಯೋಂ -4 ಯೋಜನೆಯಡಿ ಶುಕ್ಲಾ ಕೂಡಾ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿದ್ದಾರೆ. ರಷ್ಯಾದ ಸೂಯೆಜ್ ನೌಕೆಯಲ್ಲಿ ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾ 4 ದಶಕಗಳ ಹಿಂದೆ ಬಾಹ್ಯಾಕಾಶಯಾನ ಕೈಗೊಂಡಿದ್ದರು. .
ಏನಿದು ಯೋಜನೆ?:
‘ಎಎಕ್ಸ್-4’ ಅಮೆರಿಕದ ಆ್ಯಕ್ಸಿಯಂ ಸ್ಪೇಸ್ ಸಂಸ್ಥೆ ಆಯೋಜಿಸುತ್ತಿರುವ ಯೋಜನೆಯಾಗಿದೆ. ಇದು ಪ್ರಮುಖ ವಿಜ್ಞಾನಕೇಂದ್ರಿತ ಯೋಜನೆಯಾಗಿದ್ದು, 31 ದೇಶಗಳ 60ಕ್ಕೂ ಹೆಚ್ಚು ಪ್ರಯೋಗಗಳನ್ನು ಒಳಗೊಂಡಿದೆ. ಇಸ್ರೋ ಮೂಲಕ ಭಾರತ ಇವುಗಳಲ್ಲಿ 7 ಪ್ರಯೋಗಗಳ ನೇತೃತ್ವ ವಹಿಸುತ್ತಿದೆ. ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಈ ಯೋಜನೆಯ ಭಾಗವಾಗಿ ಐಎಸ್ಎಎಸ್‌ಗೆ ತೆರಳಲಿದ್ದು, ಐಎಸ್ಎಸ್‌ನಲ್ಲಿ ಕೆಲಸ ಮಾಡುತ್ತಿರುವ ಮೊದಲ ಭಾರತೀಯರೆನಿಸಲಿದ್ದಾರೆ. 14 ದಿನಗಳ ದೀರ್ಘ ಕಾರ್ಯಾಚರಣೆ ವೇಳೆ ವಾಯೇಜರ್ ಟಾರ್ಡಿಗ್ರೇಡ್ ಪ್ರಯೋಗ ಸೇರಿದಂತೆ ಹಲವಾರು ಮಹತ್ವದ ಪ್ರಯೋಗಗಳನ್ನು ನಡೆಸಲಿದ್ದಾರೆ.
ನೀರು ಕರಡಿ ಪ್ರಯೋಗ:
ವಾಯೇಜರ್ ಟಾರ್ಡಿಗ್ರೇಡ್ಸ್ (ನೀರುಕರಡಿ) ಪ್ರಯೋಗವು ಬಾಹ್ಯಾಕಾಶದಲ್ಲಿ ಇಸ್ರೋ ನಡೆಸುತ್ತಿರುವ ಇತರ 7 ಪ್ರಯೋಗಗಳ ಭಾಗವಾಗಿದೆ. ಟಾರ್ಡಿಗ್ರೇಡ್‌ಗಳು ನೀರಿನಲ್ಲಿ ವಾಸಿಸುವ ಸೂಕ್ಷ್ಮ ಪ್ರಾಣಿಗಳಾಗಿದ್ದು, ಅದ್ಭುತ ಜೀವಿತ ಸಾಮರ್ಥ್ಯ ಹೊಂದಿರುತ್ತವೆ. ಬಾಹ್ಯಾಕಾಶದ ನಿರ್ವಾತ, ವಿಕಿರಣ ಮತ್ತು ತೀವ್ರ ತಾಪಮಾನದಲ್ಲಿ ಇವು ತಮ್ಮ ಡಿಎನ್‌ಎಯನ್ನು ಹೇಗೆ ರಕ್ಷಿಸಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ ವಿಜ್ಞಾನಿಗಳು, ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ವಾಸಕ್ಕೆ ಯೋಗ್ಯವಾದ ಅಧ್ಯಯನ ಕೈಗೊಳ್ಳುತ್ತಾರೆ.