ಭಾರತದ ಸಂಸತ್‌ ಚುನಾವಣೆ ಕೆಡಿಸಲು ಚೀನಾ ಭಾರಿ ಸಂಚು!

KannadaprabhaNewsNetwork |  
Published : Apr 07, 2024, 01:47 AM ISTUpdated : Apr 07, 2024, 04:29 AM IST
ಚೀನಾ | Kannada Prabha

ಸಾರಾಂಶ

ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವಿಷಯಗಳನ್ನು ಬಳಸಿಕೊಂಡು ಸೋಷಿಯಲ್‌ ಮೀಡಿಯಾಗಳ ಮೂಲಕ ಭಾರತ, ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿ ಮುಂಬರುವ ಚುನಾವಣೆಗಳಿಗೆ ಅಡ್ಡಿಪಡಿಸಲು ಚೀನಾ ಸಜ್ಜಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಸಿದೆ.

ಚೀನಾ ಪ್ಲಾನ್‌ ಏನು?- ಕೃತಕ ಬುದ್ಧಿಮತ್ತೆ ಬಳಸಿ ಜನರ ದಾರಿತಪ್ಪಿಸುವ ವಿಷಯಗಳ ಸೃಷ್ಟಿ- ಅವುಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪ್ರಚಾರ ಮಾಡುವುದು- ನಕಲಿ ಖಾತೆಗಳನ್ನು ತೆರೆದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ- ಸುಳ್ಳು ಜಾಹೀರಾತುಗಳನ್ನು ಪ್ರಕಟಿಸಿ ಪ್ರಭಾವ ಬೀರಲು ಪ್ರಯತ್ನ- ತೈವಾನ್‌ ಚುನಾವಣೆಯಲ್ಲಿ ಹೀಗೆ ಮಾಡಿ ಯಶಸ್ವಿಯಾಗಿದ್ದ ಚೀನಾ- ಅದೇ ಪ್ರಯೋಗವನ್ನು ಭಾರತದಲ್ಲೂ ಮಾಡಲು ಚೀನಾದ ಸಿದ್ಧತೆ- ಮೈಕ್ರೋಸಾಫ್ಟ್ ಥ್ರೆಟ್ ಅನಾಲಿಸಿಸ್ ಸೆಂಟರ್‌ನ ಪೂರ್ವ ಏಷ್ಯಾ ಇಂಟೆಲಿಜೆನ್ಸ್‌ ವರದಿಯಲ್ಲಿ ಎಚ್ಚರಿಕೆ

ನ್ಯೂಯಾರ್ಕ್‌

ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವಿಷಯಗಳನ್ನು ಬಳಸಿಕೊಂಡು ಸೋಷಿಯಲ್‌ ಮೀಡಿಯಾಗಳ ಮೂಲಕ ಭಾರತ, ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿ ಮುಂಬರುವ ಚುನಾವಣೆಗಳಿಗೆ ಅಡ್ಡಿಪಡಿಸಲು ಚೀನಾ ಸಜ್ಜಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಸಿದೆ.

ತೈವಾನ್‌ನ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಚೀನಾವು ಪ್ರಾಯೋಗಿಕ ತಾಲೀಮು ನಡೆಸಿದ ನಂತರ, ಫಲಿತಾಂಶದ ಮೇಲೆ ಪ್ರಭಾವ ಬೀರಲು ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡ ನಂತರ ಈ ಎಚ್ಚರಿಕೆ ಬಂದಿದೆ. ಅಲ್ಲದೆ, ಇತ್ತೀಚೆಗೆ ಮಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಇದರ ನಡುವೆ ಮೈಕ್ರೋಸಾಫ್ಟ್ ಥ್ರೆಟ್ ಅನಾಲಿಸಿಸ್ ಸೆಂಟರ್ (ಎಂ-ಟ್ಯಾಕ್) ಬುಧವಾರ ಪೂರ್ವ ಏಷ್ಯಾ ವರದಿ ಪ್ರಕಟಿಸಿದೆ. ಅದರಲ್ಲಿನ ಮೈಕ್ರೋಸಾಫ್ಟ್ ಥ್ರೆಟ್ ಇಂಟೆಲಿಜೆನ್ಸ್ ಒಳನೋಟಗಳಲ್ಲಿ ಇವು ಸೇರಿವೆ.

ಭಾರತದಲ್ಲಿ 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ಮತ್ತು ಜೂನ್ 4ರ ನಡುವೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕೊರಿಯನ್ನರು ಏಪ್ರಿಲ್ 10ರಂದು ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನಕ್ಕೆ ಹೋಗುತ್ತಾರೆ, ಅಮೆರಿಕ ನವೆಂಬರ್ 5 ರಂದು ಅಧ್ಯಕ್ಷೀಯ ಚುನಾವಣೆಯನ್ನು ನಡೆಸುತ್ತದೆ. ಪ್ರಪಂಚದಾದ್ಯಂತ, ಯುರೋಪಿಯನ್ ಒಕ್ಕೂಟದ ಜೊತೆಗೆ ಕನಿಷ್ಠ 64 ದೇಶಗಳು ರಾಷ್ಟ್ರೀಯ ಚುನಾವಣೆಗಳನ್ನು ಈ ಸಲ ಎದುರಿಸಲಿವೆ. ಈ ದೇಶಗಳು ಒಟ್ಟಾರೆಯಾಗಿ ಜಾಗತಿಕ ಜನಸಂಖ್ಯೆಯ ಸರಿಸುಮಾರು ಶೇ.49ರಷ್ಟು ಪಾಲು ಹೊಂದಿವೆ.

ಬೆದರಿಕೆ ಹೇಗೆ?:

ವಿಭಜನೆಯನ್ನು ಬಿತ್ತಿ ಮತ್ತು ಅಮೆರಿಕ, ಭಾರತ ಹಾಗೂ ಇತರ ಚುನಾವಣೆಯ ಫಲಿತಾಂಶದ ಮೇಲೆ ತನ್ನ ಪ್ರಭಾವ ಬೀರಲು ಚೀನಾ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಲಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಸಿದೆ.

‘ಈ ವರ್ಷ ಪ್ರಪಂಚದಾದ್ಯಂತ ಪ್ರಮುಖ ಚುನಾವಣೆಗಳು ನಡೆಯುತ್ತಿವೆ. ವಿಶೇಷವಾಗಿ ಭಾರತ, ದಕ್ಷಿಣ ಕೊರಿಯಾ ಮತ್ತು ಅಮೆರಿಕದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ತಿರುಗಿಸಲು ಚೀನಾ ಸಾಮಾಜಿಕ ಮಾಧ್ಯಮದ ಮೂಲಕ ಎಐ-ರಚಿಸಿದ ವಿಷಯಗಳನ್ನು ಹರಿಬಿಡಲಿದೆ. ಚುನಾವಣೆಗಳಲ್ಲಿ ತನ್ನ ಹಿತಾಸಕ್ತಿಗೆ ಅನುಗುಣವಾದ ಸಂದೇಶಗಳನ್ನು ಚೀನಾ ಹಾಕಲಿದೆ’ ಎಂದು ಮೈಕ್ರೋಸಾಫ್ಟ್‌ನ ಥ್ರೆಟ್ ಅನಾಲಿಸಿಸ್ ಸೆಂಟರ್‌ನ ಜನರಲ್ ಮ್ಯಾನೇಜರ್ ಕ್ಲಿಂಟ್ ವಾಟ್ಸ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಡೀಪ್‌ಫೇಕ್ ಅಥವಾ ಅಥವಾ ಎಂದಿಗೂ ನಡೆಯದ ಘಟನೆಗಳನ್ನು ಸೃಷ್ಟಿಸುವುದು ಸೇರಿದಂತೆ ಮೋಸಗೊಳಿಸುವ ಮತ್ತು ಸುಳ್ಳು ವಿಷಯವನ್ನು ಉತ್ಪಾದಿಸಲು ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ಸೋಷಿಯಲ್‌ ಮೀಡಿಯಾಗಳಲ್ಲಿ ರಾಜಕೀಯ ಜಾಹೀರಾತು ಹಾಕಿ ಮತದಾರರ ದಾರ ತಪ್ಪಿಸಲಾಗುತ್ತದೆ. ಈ ಮೂಲಕ ಅಭ್ಯರ್ಥಿಗಳು, ಪಕ್ಷಗಳು ಹಾಗೂ ಸಾರ್ವಜನಿಕರ ದಾರಿ ತಪ್ಪಿಸುವ ಗುರಿಯನ್ನು ಚೀನಾ ಹೊಂದಿದೆ. ಇಂಥ ವಿಷಯಗಳನ್ನು ಬಿತ್ತಿ, ಮತದಾರರ ಶಕ್ತಿಯನ್ನೇ ದುರ್ಬಲಗೊಳಿಸುವ ಉದ್ದೇಶವನ್ನು ಚೀನಾ ಹೊಂದಿದೆ ಎಂದು ಹೇಳಲಾಗಿದೆ.

‘ಆದರೆ, ಇಂಥ ವಿಷಯಗಳಿಂದ ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆಯಾದರೂ, ಮೀಮ್‌ಗಳು, ವೀಡಿಯೋಗಳು ಮತ್ತು ಆಡಿಯೋಗಳ ಮೂಲ ಚೀನಾ ಕೆಲವು ಪ್ರಯೋಗ ಮಾಡಲಿದೆ, ಇದು ಕೆಲ ಮಟ್ಟಿಗೆ ಪರಿಣಾಮಕಾರಿ ಆಗಲೂಬಹುದು. ಮೊದಲು ಉತ್ತರ ಕೊರಿಯಾದೊಂದಿಗೆ ಚೀನಾ ಇದನ್ನು ಮಾಡಲಿದೆ’ ಎಂದು ಅವರು ಬರೆದಿದ್ದಾರೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!