ಚೀನಾ ಶಸ್ತ್ರಾಸ್ತ್ರಕ್ಕೆ ಪಾಕ್‌ ಪ್ರಯೋಗಶಾಲೆ!

KannadaprabhaNewsNetwork |  
Published : Jul 05, 2025, 01:48 AM ISTUpdated : Jul 05, 2025, 06:04 AM IST
China Army

ಸಾರಾಂಶ

ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ‘ಆಪರೇಷನ್‌ ಸಿಂದೂರ’ ವೇಳೆ ಚೀನಾವು ತನ್ನ ಯುದ್ಧೋಪಕರಣಗಳನ್ನು ಪರೀಕ್ಷಿಸಲು ಪಾಕಿಸ್ತಾನವನ್ನು ಪ್ರಯೋಗಶಾಲೆಯಾಗಿ ಬಳಸಿಕೊಂಡಿತ್ತು.

 ನವದೆಹಲಿ: ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ‘ಆಪರೇಷನ್‌ ಸಿಂದೂರ’ ವೇಳೆ ಚೀನಾವು ತನ್ನ ಯುದ್ಧೋಪಕರಣಗಳನ್ನು ಪರೀಕ್ಷಿಸಲು ಪಾಕಿಸ್ತಾನವನ್ನು ಪ್ರಯೋಗಶಾಲೆಯಾಗಿ ಬಳಸಿಕೊಂಡಿತ್ತು. ಜೊತೆಗೆ ನಾಲ್ಕು ದಿನಗಳ ಪಾಕ್‌ - ಭಾರತ ಸಂಘರ್ಷದ ವೇಳೆ ಚೀನಾವು ಪಾಕಿಸ್ತಾನಕ್ಕೆ ಸಾಧ್ಯವಾದ ಎಲ್ಲಾ ಬೆಂಬಲ ನೀಡಿತ್ತು ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿ ಲೆಫ್ಟಿನಂಟ್‌ ಜನರಲ್‌ ರಾಹುಲ್‌ ಆರ್‌.ಸಿಂಗ್‌ ಹೇಳಿದ್ದಾರೆ.

ಬೇರೆಯವರಿಂದ ಪಡೆದ ಚಾಕುವಿನಿಂದ ಭಾರತಕ್ಕೆ ಚೀನಾ ಇರಿಯಲೆತ್ನಿಸಿತು. ಟರ್ಕಿ ಕೂಡ ಡ್ರೋನ್‌ಗಳನ್ನು ಪೂರೈಸುವ ಮೂಲಕ ಭಾರತದ ವಿರುದ್ಧ ನಿಂತಿತು. ನೈಜಾರ್ಥದಲ್ಲಿ ನೋಡಿದರೆ ‘ಆಪರೇಷನ್ ಸಿಂದೂರ’ದ ಸಮಯದಲ್ಲಿ ಭಾರತವು ಒಂದು ಗಡಿಯಲ್ಲಿ ಮೂರು ಶತ್ರುಗಳನ್ನು ಎದುರಿಸಿತು. ಪಾಕಿಸ್ತಾನ ಮುಖ ಮಾತ್ರ, ಅದರ ಬೆನ್ನ ಹಿಂದೆ ಚೀನಾ, ಟರ್ಕಿ ನಿಂತಿದ್ದವು ಎಂದು ತಿಳಿಸಿದ್ದಾರೆ.

ಎಫ್‌ಐಸಿಸಿಐಯಲ್ಲಿ ಆಯೋಜಿಸಿದ್ದ ‘ನ್ಯೂ ಏಜ್‌ ಮಿಲಿಟರಿ ಟೆಕ್ನಾಲಜೀಸ್‌’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಚೀನಾವು ತನ್ನ ವಿವಿಧ ಯುದ್ಧೋಪಕರಣಗಳನ್ನು ಪರೀಕ್ಷಿಸಲು ಭಾರತ ಮತ್ತು ಪಾಕ್‌ ಸಂಘರ್ಷವನ್ನು ಲೈವ್‌ ಲ್ಯಾಬ್‌ (ಸಾಕ್ಷಾತ್‌ ಪ್ರಯೋಗಶಾಲೆ) ಆಗಿ ಬಳಸಿಕೊಂಡಿತು ಎಂದಿದ್ದಾರೆ.

ಚೀನಾದ ಪುರಾತನ 36 ತಂತ್ರಗಳ(ಚೀನಿ ಯುದ್ಧನೀತಿ ಗ್ರಂಥ) ಕುರಿತು ಉಲ್ಲೇಖಿಸಿದ ಅವರು, ಬೇರೆಯವರಿಂದ ಪಡೆದ ಚೂರಿಯಿಂದ ಭಾರತಕ್ಕೆ ಇರಿಯುವ ಯುದ್ಧತಂತ್ರವನ್ನು ಭಾರತದ ಮೇಲೆ ಚೀನಾ ಪ್ರಯತ್ನಿಸುತ್ತಿದೆ. ಭಾರತಕ್ಕೆ ಹಾನಿ ಮಾಡಲು ಚೀನಾವು ಪಾಕಿಸ್ತಾನಕ್ಕೆ ಸಾಧ್ಯವಾದ ಎಲ್ಲಾ ನೆರವು ನೀಡಿತು. ಡಿಜಿಎಂಒ ಮಟ್ಟದ ಮಾತುಕತೆ ನಡೆಯುತ್ತಿದ್ದಾಗಲೇ ಚೀನಾದಿಂದ ನಮ್ಮ ಸೇನಾ ನೆಲೆಗಳ ಬಗ್ಗೆ ಪಾಕಿಸ್ತಾನ ಲೈವ್‌ ಮಾಹಿತಿಗಳನ್ನು ಪಡೆಯುತ್ತಿತ್ತು. ಪಾಕಿಸ್ತಾನದ ಶೇ.81ರಷ್ಟು ಯುದ್ಧೋಪಕರಣಗಳಿಗೆ ಚೀನಾವೇ ಮೂಲ. ಇನ್ನು ಟರ್ಕಿ ಕೂಡ ಡ್ರೋನ್‌ಗಳು ಮತ್ತು ಅದನ್ನು ನಿರ್ವಹಿಸುವ ಸಿಬ್ಬಂದಿಯನ್ನು ಆಪರೇಷನ್‌ ಸಿಂದೂರದ ಸಮಯದಲ್ಲಿ ಒದಗಿಸಿ ಭಾರತದ ವಿರುದ್ಧ ನಿಂತಿತು ಎಂದರು.

ಮಾಸ್ಟರ್‌ಸ್ಟ್ರೋಕ್‌:

ಇದೇ ವೇ‍ಳೆ ಯುದ್ಧ ಆರಂಭಿಸುವುದು ಸುಲಭ, ಆದರೆ ನಿಯಂತ್ರಿಸುವುದು ಕಷ್ಟ. ಸೂಕ್ತ ಸಂದರ್ಭದಲ್ಲಿ ಯುದ್ಧ ನಿಲ್ಲಿಸುವ ರೀತಿಯಲ್ಲಿ ಆಪರೇಷನ್‌ ಸಿಂದೂರ ಕಾರ್ಯಾಚರಣೆಯನ್ನು ಜಾಗರೂಕವಾಗಿ ರೂಪಿಸಲಾಗಿತ್ತು. ಹೀಗಾಗಿ ಆಪರೇಷನ್‌ ಸಿಂದೂರ ಒಂದು ಮಾಸ್ಟರ್‌ ಸ್ಟ್ರೋಕ್‌ ಎಂದು ಲೆಫ್ಟಿನೆಂಟ್‌ ಜನರಲ್‌ ಕರೆದರು.

ನಮ್ಮ ಸೇನಾ ನೆಲೆಗಳ ಬಗ್ಗೆ ಚೀನಾದಿಂದ ಲೈವ್‌ ಮಾಹಿತಿ

‘ಆಪರೇಷನ್‌ ಸಿಂದೂರ’ ಬಳಿಕ ಡಿಜಿಎಂಒ ಮಟ್ಟದ ಮಾತುಕತೆ ನಡೆಯುತ್ತಿದ್ದಾಗಲೇ ನಮ್ಮ ಸೇನಾ ನೆಲೆಗಳ ಬಗ್ಗೆ ಚೀನಾದಿಂದ ಪಾಕಿಸ್ತಾನ ಲೈವ್‌ ಮಾಹಿತಿಗಳನ್ನು ಪಡೆಯುತ್ತಿತ್ತು. ಪಾಕಿಸ್ತಾನದ ಶೇ.81ರಷ್ಟು ಯುದ್ಧೋಪಕರಣಗಳಿಗೆ ಚೀನಾವೇ ಮೂಲ. ಇನ್ನು ಟರ್ಕಿ ಕೂಡ ಡ್ರೋನ್‌ಗಳು ಮತ್ತು ಅದನ್ನು ನಿರ್ವಹಿಸುವ ಸಿಬ್ಬಂದಿಯನ್ನು ಒದಗಿಸಿ ಭಾರತದ ವಿರುದ್ಧ ನಿಂತಿತ್ತು.

- ಲೆಫ್ಟಿನಂಟ್‌ ಜನರಲ್‌ ರಾಹುಲ್‌ ಆರ್‌. ಸಿಂಗ್‌

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌