ಮಾಲ್ಡೀವ್ಸ್‌ನತ್ತ ಚೀನಾ ಗೂಢಚರ್ಯೆ ನೌಕೆ: ಭಾರತಕ್ಕೆ ಮತ್ತಷ್ಟು ಆತಂಕ

KannadaprabhaNewsNetwork |  
Published : Jan 24, 2024, 02:02 AM IST
ಚೀನಿ ಹಡಗು | Kannada Prabha

ಸಾರಾಂಶ

ಭಾರತ- ಮಾಲ್ಡೀವ್ಸ್‌ ಸಂಘರ್ಷದ ಬೆನ್ನಲ್ಲೇ ಮಾಲ್ಡೀವ್ಸ್‌ನತ್ತ ಚೀನಾದ ಗೂಢಚರ್ಯ ಹಡಗೊಂದು ಸಂಚಾರ ಮಾಡಿದ ಬೆಳವಣಿಗೆ ನಡೆದಿದೆ.

ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿರುವ ನಡುವೆಯೇ ಚೀನಾದ ಗೂಢಚರ್ಯೆ ಹಡಗೊಂದು ಮಾಲ್ಡೀವ್ಸ್‌ನತ್ತ ಪ್ರಯಾಣಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಉಪಗ್ರಹ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿ ತಯಾರಿಸಲಾಗಿದೆ.

ಮಾಲ್ಡೀವ್ಸ್‌ನಲ್ಲಿ ಭಾರತ ಸೈನ್ಯದ ಉಪಸ್ಥಿತಿಯನ್ನು ವಿರೋಧಿಸುತ್ತಿರುವ ಅಧ್ಯಕ್ಷ ಮಯಿಜು ಚೀನಾ ಪ್ರವಾಸ ಮುಗಿಸಿ ಮರಳಿದ ಬೆನ್ನಲ್ಲೇ ಚೀನಾ ಗುಪ್ತಚರ ಹಡಗು ಮಾಲ್ಡೀವ್ಸ್‌ನತ್ತ ಪ್ರಯಾಣ ಆರಂಭಿಸಿದೆ. ಈ ಹಡಗು ಇಂಡೋನೇಷ್ಯಾ ಬಳಿ ಇರುವ ಸುಂಡಾ ಜಲಸಂಧಿಯನ್ನು ದಾಟಿದ್ದು, ಫೆ.8ರ ವೇಳೆಗೆ ಮಾಲ್ಡೀವ್ಸ್‌ ತಲುಪುವ ಸಾಧ್ಯತೆ ಇದೆ. 2019 ಮತ್ತು 2020ರಲ್ಲೂ ಚೀನಾದ ಹಡಗುಗಳು ಭಾರತದ ಸುತ್ತಮುತ್ತ ಸರ್ವೇಕ್ಷಣೆ ನಡೆಸಿದ್ದವು. ಇದೀಗ ಮಾಲ್ಡೀವ್ಸ್‌ನಲ್ಲೂ ಚೀನಾ ಬೀಡು ಬಿಡುವುದು ಭಾರತದ ಆತಂಕವನ್ನು ಹೆಚ್ಚಿಸಿದೆ.ಚೀನಾ ಈ ಹಡಗುಗಳನ್ನು ಹಿಂದೂ ಮಹಾಸಾಗರ ಅಧ್ಯಯನಕ್ಕಾಗಿ ಬಳಕೆ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದರೂ ಸಹ ಇವುಗಳನ್ನು ಬಳಸಿ ಚೀನಾ ಗೂಢಚರ್ಯೆ ನಡೆಸುತ್ತಿದೆ ಎಂಬ ಅನುಮಾನಗಳು ದಟ್ಟವಾಗಿವೆ. ಹಿಂದೂ ಮಹಾಸಾಗರದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿರುವ ಚೀನಾ ಪದೇ ಪದೇ ತನ್ನ ಹಡಗುಗಳನ್ನು ಹಿಂದೂ ಮಹಾಸಾಗರಕ್ಕಿಳಿಸುತ್ತಿದೆ.

4 ಕಡೆ ಚೀನಾ ಚೀನಾ ಗೂಢಚರ್ಯೆ ಹಡಗು:ಹಿಂದೂ ಮಹಾಸಾಗರದಲ್ಲಿ ಬಲಿಷ್ಠ ರಾಷ್ಟ್ರವಾಗಿರುವ ಭಾರತದ ವಿರುದ್ಧ ಮಾಹಿತಿಗಳನ್ನು ಕಲೆ ಹಾಕಲು ಚೀನಾ ಮೂರು ದೇಶಗಳಲ್ಲಿ ತನ್ನ ಗೂಢಚರ್ಯೆ ಹಡಗುಗಳನ್ನು ನಿಲ್ಲಿಸಿತ್ತು. ಕಳೆದ ವರ್ಷ ಜುಲೈನಲ್ಲಿ ಶ್ರೀಲಂಕಾದ ಹಂಬನ್‌ತೋಟಾದಲ್ಲಿ, ನವೆಂಬರ್‌ನಲ್ಲಿ ಕರಾಚಿ ಬಂದರುಗಳನ್ನು ಚೀನಾದ ಗೂಢಚರ್ಯೆ ಹಡಗುಗಳು ಲಂಗರು ಹಾಕಿದ್ದವು. ಭಾರತದ ಪ್ರಮುಖ ವ್ಯಾಪಾರಿ ಮಾರ್ಗವಾದ ಜಿಬೋಟಿಯಲ್ಲೂ ಚೀನಾದ ಯುದ್ಧನೌಕೆ ಇದ್ದು ಭಾರತಕ್ಕೆ ಬರುವ ಹಡಗುಗಳ ಮೇಲೆ ಕಣ್ಣಿಟ್ಟಿದೆ. ಇದೀಗ ಮಾಲ್ಡೀವ್ಸ್‌ನಲ್ಲೂ ಚೀನಾ ತನ್ನ ಹಡಗನ್ನು ಲಂಗರು ಹಾಕುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!