2600 ಕೋಟಿ ಡೇಟಾ ಸಾಮಾಜಿಕ ತಾಣಗಳಿಂದ ಲೀಕ್‌

KannadaprabhaNewsNetwork |  
Published : Jan 24, 2024, 02:01 AM ISTUpdated : Jan 24, 2024, 02:39 PM IST
Cyber Crime

ಸಾರಾಂಶ

ಸೈಬರ್‌ ಅಪರಾಧಗಳು ಹೆಚ್ಚುತ್ತಿರುವುದರ ನಡುವೆಯೇ ಜಗತ್ತು ಕಂಡುಕೇಳರಿಯದಂಥ ಬೃಹತ್‌ ದತ್ತಾಂತ ಸೋರಿಕೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಟ್ವೀಟರ್‌, ಲಿಂಕ್ಡ್‌ಇನ್‌ ಸೇರಿದಂತೆ ಜಗತ್ತಿನ ವಿವಿಧ ಸಾಮಾಜಿಕ ಜಾಲತಾಣಗಳು ಮತ್ತು ಖಾಸಗಿ ಸಂಸ್ಥೆಗಳ 2600 ಕೋಟಿಗೂ ಹೆಚ್ಚಿನ ದತ್ತಾಂಶ ಸೋರಿಕೆಯಾಗಿದೆ.

ನವದೆಹಲಿ: ಸೈಬರ್‌ ಅಪರಾಧಗಳು ಹೆಚ್ಚುತ್ತಿರುವುದರ ನಡುವೆಯೇ ಜಗತ್ತು ಕಂಡುಕೇಳರಿಯದಂಥ ಬೃಹತ್‌ ದತ್ತಾಂತ ಸೋರಿಕೆ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಟ್ವೀಟರ್‌, ಲಿಂಕ್ಡ್‌ಇನ್‌ ಸೇರಿದಂತೆ ಜಗತ್ತಿನ ವಿವಿಧ ಸಾಮಾಜಿಕ ಜಾಲತಾಣಗಳು ಮತ್ತು ಖಾಸಗಿ ಸಂಸ್ಥೆಗಳ 2600 ಕೋಟಿಗೂ ಹೆಚ್ಚಿನ ದತ್ತಾಂಶ ಸೋರಿಕೆಯಾಗಿದೆ ಎಂದು ವರದಿಯೊಂದು ಎಚ್ಚರಿಸಿದೆ. 

ಇದು ಜಗತ್ತಿನಲ್ಲಿ ಈವರೆಗೆ ನಡೆದ ಅತಿದೊಡ್ಡ ದತ್ತಾಂಶ ಸೋರಿಕೆಯಾಗಿದೆ ಎಂದ ಫೋರ್ಬ್ಸ್‌ ಹೇಳಿದೆ.

ಸೋರಿಕೆಯಾಗಿರುವ ಇಷ್ಟೊಂದು ಪ್ರಮಾಣದ ದತ್ತಾಂಶಗಳ ಒಟ್ಟು ಗಾತ್ರ 12 ಟೆರಾಬೈಟ್‌ನಷ್ಟಿದ್ದು, ಇದನ್ನು ಡೇಟಾ ಬ್ರೋಕರ್‌ವೊಬ್ಬರು ಜಾಲತಾಣವೊಂದರಲ್ಲಿ ಒಂದುಗೂಡಿಸಿದ್ದಾರೆ ಎಂದು ಫೋರ್ಬ್ಸ್‌ ಹೇಳಿದೆ. 

ಸೋರಿಕೆಯಾಗಿರುವ ದತ್ತಾಂಶಗಳಲ್ಲಿ ಹಲವು ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಗಳಿವೆ. ಹೀಗಾಗಿ ಇದರ ಬಳಕೆಯಿಂದ ಸೈಬರ್‌ಕ್ರೈಮ್‌ ಹೆಚ್ಚಾಗಬಹುದು ಎಂದು ವರದಿ ಹೇಳಿದೆ.

ಸೋರಿಕೆ ಪತ್ತೆ ಹೇಗೆ?
ಸೆಕ್ಯುರಿಟಿ ಡಿಸ್ಕವರಿ ಮತ್ತು ಸೈಬರ್‌ನ್ಯೂಸ್‌ ಎಂಬ ಎರಡು ಸಂಸ್ಥೆಗಳ ಸಂಶೋಧಕರು, ಓಪನ್‌ ಸ್ಟೋರೇಜ್‌ ಇನ್‌ಸ್ಟ್ಯಾನ್ಸ್‌ನಲ್ಲಿ ಈ ದಾಖಲೆಗಳು ಸಂಗ್ರಹವಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಆದರೆ ಇದರ ಹಿಂದಿನ ಶಕ್ತಿ ಯಾರು ಎಂಬುದು ಪತ್ತೆ ಕಷ್ಟ ಎಂದಿದ್ದಾರೆ.

ಸೈಬರ್‌ ದಾಳಿ ಆತಂಕ: ಇಷ್ಟೊಂದು ಪ್ರಮಾಣದಲ್ಲಿ ದತ್ತಾಂಶ ಸೋರಿಕೆಯಾಗಿರುವುದರಿಂದ ಸೈಬರ್‌ ಕಳ್ಳರು, ಅತ್ಯಂತ ದೊಡ್ಡ ಮಟ್ಟದಲ್ಲಿ ದಾಳಿ ಕೈಗೊಳ್ಳುವ ಸಾಧ್ಯತೆಗಳಿವೆ.

 ಅತ್ಯಾಧುನಿಕ ಫಿಶಿಂಗ್‌ ದಾಳಿ (ಇ-ಮೇಲ್‌ ಕಳುಹಿಸುವ ಮೂಲಕ ದತ್ತಾಂಶ ಕಳ್ಳತನ), ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿ ಸೈಬರ್‌ ದಾಳಿ ಮತ್ತು ಸೂಕ್ಷ್ಮ ಖಾತೆಗಳಿಂದ ಮಾಹಿತಿ ಕಳ್ಳತನಗಳ ಪ್ರಮಾಣ ಹೆಚ್ಚಾಗಬಹುದು ಎಂಬ ಆತಂಕ ಎದುರಾಗಿದೆ.

ಚೀನಾ ಕಂಪನಿಗಳೇ ಹೆಚ್ಚು: ಟ್ವೀಟರ್‌, ಲಿಂಕ್ಡ್‌ಇನ್‌ ಮತ್ತು ಡ್ರಾಪ್‌ಬಾಕ್ಸ್‌ನಂತಹ ಜಾಗತಿಕ ಕಂಪನಿಗಳ ದತ್ತಾಂಶ ಸೋರಿಕೆಯಾಗಿದ್ದರೂ ಚೀನಾದ ಕಂಪನಿಗಳಿಂದಲೇ ಹೆಚ್ಚಿನ ದತ್ತಾಂಶ ಸೋರಿಕೆಯಾಗಿದೆ. 

ಚೀನಾದ ಪ್ರಮುಖ ಮೆಸೇಜಿಂಗ್‌ ತಾಣ ಟೆನ್ಸೆಂಟ್‌, ಸಾಮಾಜಿಕ ಜಾಲತಾಣ ವೈಬೋ, ಅಡೋಬ್‌, ಕ್ಯಾನ್ವಾ ಮತ್ತು ಟೆಲಿಗ್ರಾಂಗಳಿಂದಲೇ ಅತಿ ಹೆಚ್ಚು ದತ್ತಾಂಶ ಸೋರಿಕೆಯಾಗಿದೆ.

ಪ್ರಸ್ತುತ ಸಿಕ್ಕಿರುವ ದತ್ತಾಂಶದ ಪ್ರಮಾಣ ಬೃಹತ್‌ ಆಗಿದ್ದರೂ ಇದರಲ್ಲಿ ಹೊಸ ಮಾಹಿತಿ ಪ್ರಮಾಣ ಕಡಿಮೆ ಇದೆ ಎಂಬುದು ಸಂತೋಷದ ವಿಚಾರ. ಇದರಲ್ಲಿ ಈ ಮೊದಲು ನಡೆದ ದತ್ತಾಂಶ ಸೋರಿಕೆಗಳ ಮಾಹಿತಿಯನ್ನು ಒಟ್ಟುಗೂಡಿಸಲಾಗಿದೆ ಎಂದು ಫೋರ್ಬ್‌ ಹೇಳಿದೆ.

ಟಾಪ್‌ 5 ಕಂಪನಿಗಳು:
ಟೆನ್ಸೆಂಟ್‌- 150 ಕೋಟಿ
ವೈಬೋ - 50.4 ಕೋಟಿ
ಮೈ ಸ್ಪೇಸ್‌ - 30.6 ಕೋಟಿ
ಟ್ವೀಟರ್‌ - 28.1 ಕೋಟಿ
ವ್ಯಾಟ್‌ ಪ್ಯಾಡ್‌ - 27.1 ಕೋಟಿ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭಾರತ-ಬಾಂಗ್ಲಾ ರಾಜತಾಂತ್ರಿಕ ಸಮರ
15 ವರ್ಷ ಬಳಿಕ ಜಪಾನ್‌ನಲ್ಲಿ ವಿಶ್ವದ ದೊಡ್ಡ ಅಣುವಿದ್ಯುತ್‌ ಸ್ಥಾವರಕ್ಕೆ ಮತ್ತೆ ಚಾಲನೆ