ಇಸ್ರೇಲ್‌ ದಾಳಿಗೆ ಬೆದರಿ 4 ಲಕ್ಷ ಜನ ವಲಸೆ

KannadaprabhaNewsNetwork |  
Published : Oct 15, 2023, 12:46 AM IST

ಸಾರಾಂಶ

ಸುರಕ್ಷಿತ ಸ್ಥಳ ಅರಸಿ ಉತ್ತರ ಗಾಜಾದಿಂದ ದಕ್ಷಿಣ ಗಾಜಾದತ್ತ ಜನರ ವಲಸೆ, ನಿರಂತರ ವಾಯುದಾಳಿ: ಉಭಯ ದೇಶಗಳಲ್ಲಿ ಮೃತರ ಸಂಖ್ಯೆ 5100ಕ್ಕೇರಿಕೆ

ಜೆರುಸಲೇಂ: ಹಮಾಸ್‌ ಉಗ್ರರು ಮತ್ತು ಅವರ ಮೂಲಸೌಕರ್ಯ ನಾಶಕ್ಕೆ ಸತತ ದಾಳಿ ನಡೆಸುತ್ತಿರುವ ಇಸ್ರೇಲಿ ಸೇನಾಪಡೆಗಳು ಗಾಜಾಪಟ್ಟಿ ಪ್ರದೇಶದ ಮೇಲಿನ ತಮ್ಮ ವಾಯುದಾಳಿಯನ್ನು ತೀವ್ರಗೊಳಿಸಿದ್ದು, ಭೂದಾಳಿ ನಡೆಸಲು ಗಡಿಯೊಳಗೆ ನುಗ್ಗಿ ಸಜ್ಜಾಗಿ ನಿಂತಿವೆ. ಹೀಗಾಗಿ 24 ಗಂಟೆಯಲ್ಲಿ ಮನೆ ತೊರೆಯಿರಿ ಎಂಬ ಇಸ್ರೇಲ್‌ ಸೂಚನೆಯಿಂದ ಆತಂಕಕ್ಕೆ ಒಳಗಾಗಿದ್ದ ಉತ್ತರ ಗಾಜಾದ 11 ಲಕ್ಷ ಜನರ ಪೈಕಿ ಕನಿಷ್ಠ 4 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ದಕ್ಷಿಣ ಗಾಜಾಕ್ಕೆ ವಲಸೆ ಹೋಗಿದ್ದಾರೆ. ಈ ನಡುವೆ, ಈವರೆಗೂ ಗಾಜಾದ 1000ಕ್ಕೂ ಹೆಚ್ಚು ಪ್ರದೇಶಗಳನ್ನು ಗುರಿಯಾಗಿಸಿ ವಾಯುದಾಳಿ ನಡೆಸಿ ಯಶಸ್ಸು ಸಾಧಿಸಿದ್ದಾಗಿ ಇಸ್ರೇಲ್‌ ಹೇಳಿದೆ. ಮತ್ತೊಂದೆಡೆ ಗಾಜಾಪಟ್ಟಿ ಗಡಿಯೊಳಗೆ ಇಸ್ರೇಲಿ ಸೇನೆ ಪ್ರವೇಶಿಸಿದ್ದು, ತನ್ನ ಯೋಧರು, ಯುದ್ಧ ಟ್ಯಾಂಕರ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಗಡಿ ಪ್ರದೇಶದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದು, ಯಾವುದೇ ಕ್ಷಣದಲ್ಲಿ ದಾಳಿ ಆರಂಭಿಸುವ ಸುಳಿವು ನೀಡಿದೆ. ತೆರವು ಸೂಚನೆಗೆ ಖಂಡನೆ: ಈ ನಡುವೆ ಇದೇ ವೇಳೆ 11 ಲಕ್ಷ ಜನರ ಏಕಾಏಕಿ ತೆರವಿಗೆ ಸೂಚಿಸಿದ ಇಸ್ರೇಲ್‌ ಸರ್ಕಾರದ ನಿರ್ಧಾರವನ್ನು 57 ಇಸ್ಲಾಮಿಕ್‌ ದೇಶಗಳ ಸಂಘಟನೆಯಾದ ‘ಆರ್ಗನೈಜೇಷನ್‌ ಆಫ್‌ ಇಸ್ಲಾಮಿಕ್‌ ಕೋಆಪರೇಷನ್‌’ ಖಂಡಿಸಿದೆ. ಜೊತೆಗೆ ಯುರೋಪಿಯನ್‌ ಒಕ್ಕೂಟ ಕೂಡಾ ಜನರ ತೆರವಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿವೆ. ಅಲ್ಲದೆ ವಿಶ್ವಸಂಸ್ಥೆ ಕೂಡಾ ಇಸ್ರೇಲ್‌ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿದೆ. 5 ಸಾವಿರ ದಾಟಿದ ಸಾವು:ಸಂಘರ್ಷದಿಂದ ಉಭಯ ದೇಶಗಳಲ್ಲಿ ಸಾವನ್ನಪ್ಪಿದ ಯೋಧರು ಮತ್ತು ನಾಗರಿಕ ಸಂಖ್ಯೆ 5100 ದಾಟಿದ್ದು, ಗಾಯಾಳುಗಳ ಸಂಖ್ಯೆ 10 ಸಾವಿರದ ಸನಿಹಕ್ಕೆ ಬಂದಿದೆ. ಈ ಪೈಕಿ ಇಸ್ರೇಲ್‌ ಕಡೆ 1600 ಜನರು ಸಾವ್ನಪ್ಪಿದ್ದಾರೆ. ಗಾಜಾ ಪಟ್ಟಿ ಪ್ರದೇಶದಲ್ಲಿ 724 ಮಕ್ಕಳು ಸೇರಿದಂತೆ 2215 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ನೀಡಿದೆ. ಇನ್ನು ಗಾಜಾ ಗಡಿಯಲ್ಲಿ 1300 ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂಬ ಇಸ್ರೇಲ್‌ ಸರ್ಕಾರದ ಹೇಳಿಕೆಯನ್ನು ಪರಿಗಣಿಸಿದರೆ ಒಟ್ಟಾರೆ ಸಾವಿನ ಸಂಖ್ಯೆ 5100 ದಾಟಿದಂತಾಗಿದೆ. ಗಡಿಯಲ್ಲೇ ನೆರವು ಸಾಮಗ್ರಿ: ಗಾಜಾದ ಸಂತ್ರಸ್ತರಿಗೆಂದು ವಿಶ್ವಸಂಸ್ಥೆ ರವಾನಿಸಿರುವ ಪರಿಹಾರ ಸಾಮಗ್ರಿಗಳು ಈಜಿಪ್ಟ್‌ನೊಂದಿಗೆ ಹೊಂದಿಕೊಂಡಿರುವ ಗಾಜಾದ ದಕ್ಷಿಣ್‌ ಚೆಕ್‌ಪಾಯಿಂಟ್‌ ತಲುಪಿವೆ. ಇಸ್ರೇಲ್‌ ಅನುಮತಿ ನೀಡದ ಹೊರತೂ ಈ ಪರಿಹಾರ ಸಾಮಗ್ರಿ ಗಾಜಾ ಪ್ರವೇಶ ಸಾಧ್ಯವಿಲ್ಲ. ಅಮೆರಿಕ ಯುದ್ಧ ವಿಮಾನ: ಇದೇ ವೇಳೆ ಅಮೆರಿಕ ತನ್ನ ಎಫ್‌ -15ಇ ಯುದ್ಧ ವಿಮಾನವನ್ನು ಮಧ್ಯಪ್ರಾಚ್ಯದಲ್ಲಿ ನಿಯೋಜಿಸುವ ಮೂಲಕ ಹಮಾಸ್‌ ವಿರುದ್ಧ ಹೋರಾಟದಲ್ಲಿ ಇಸ್ರೇಲ್‌ಗೆ ಬೆಂಬಲ ಘೋಷಿಸಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು
ಚೀನಾದಲ್ಲಿ 700 ಕಿ.ಮೀ ವೇಗದ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ