ಜಾಗತಿಕ ಎಐಗೆ ಚೀನಾ ಕಂಪನಿಯಿಂದ ಡೀಪ್‌ ಶಾಕ್‌ - ಉಚಿತ ಎಐ ಬಿಡುಗಡೆ । ಅಮೆರಿಕದ ಪಾರಮ್ಯಕ್ಕೆ ಹೊಡೆತ

ಸಾರಾಂಶ

ಕೃತಕ ಬುದ್ದಿಮತ್ತೆ ವ್ಯವಸ್ಥೆಯಲ್ಲಿ ತನ್ನನ್ನು ಬಿಟ್ಟರೆ ಮತ್ಯಾರೂ ಇಲ್ಲ ಎಂಬ ಅಹಂನಿಂದ ಮೆರೆಯುತ್ತಿದ್ದ ಅಮೆರಿಕದ ಬೃಹತ್‌ ಕಂಪನಿಗಳಿಗೆ ಚೀನಾದ ಸಣ್ಣ ಕಂಪನಿಯೊಂದು ಮುಟ್ಟಿಕೊಳ್ಳುವ ಏಟು ನೀಡಿದೆ. 

ಜಾಗತಿಕ ಎಐಗೆ ಚೀನಾ ಡೀಪ್‌ ಶಾಕ್‌

ಚೀನಾ ಕಂಪನಿಯಿಂದ ಉಚಿತ ಎಐ ಬಿಡುಗಡೆ । ಅಮೆರಿಕದ ಪಾರಮ್ಯಕ್ಕೆ ಹೊಡೆತ

ಕೃತಕ ಬುದ್ದಿಮತ್ತೆ ವ್ಯವಸ್ಥೆಯಲ್ಲಿ ತನ್ನನ್ನು ಬಿಟ್ಟರೆ ಮತ್ಯಾರೂ ಇಲ್ಲ ಎಂಬ ಅಹಂನಿಂದ ಮೆರೆಯುತ್ತಿದ್ದ ಅಮೆರಿಕದ ಬೃಹತ್‌ ಕಂಪನಿಗಳಿಗೆ ಚೀನಾದ ಸಣ್ಣ ಕಂಪನಿಯೊಂದು ಮುಟ್ಟಿಕೊಳ್ಳುವ ಏಟು ನೀಡಿದೆ. ‘ಡೀಪ್‌ ಸೀಕ್‌ ಆರ್‌ 1 ಎನ್ನುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕಡಿಮೆ ಬಜೆಟ್‌ನಲ್ಲಿ ತಯಾರಿಸಲಾದ ಈ ಎಐ ಟೆಕ್ ದೈತ್ಯ ಕಂಪನಿಗಳನ್ನು ಹೊಂದಿರುವ ಅಮೆರಿಕಕ್ಕೆ ಆಘಾತ ನೀಡಿದೆ.

ಓಪನ್ ಎಐ , ಚಾಟ್ ಜಿಪಿಟಿಯಂತಹ ಮಾನವ ಬುದ್ಧಿಮತ್ತೆಯನ್ನೂ ಮೀರಿಸುವ ತಂತ್ರಜ್ಞಾನಗಳು ಇಡೀ ಜಗತ್ತನ್ನೇ ಅಳುತ್ತಿರುವ ಕಾಲವಿದು. ಸ್ಪರ್ಧಾತ್ಮಕ ಜಗತ್ತಿನ ತಳಹದಿ ನಿಂತಿರುವುದೇ ಇವುಗಳ ಮೇಲೆ. ಈ ನಡುವೆ ಡೀಪ್ ಸೀಕ್ ಎನ್ನುವ ಪದ ತಂತ್ರಜ್ಞಾನ ಜಗದಲ್ಲಿ ಸದ್ದಿಲ್ಲದೆ ಸದ್ದು ಮಾಡುತ್ತಿದೆ. ಅಮೆರಿಕದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಕಂಪನಿಗಳ ನಿದ್ದೆ ಕೆಡಿಸಿದೆ. ಡೀಪ್ ಸೀಕ್.. ಚಾಟ್‌ ಜಿಪಿಟಿ, ಜೆಮಿನಿ, ಕ್ಲೌಡ್ , ಓಪನ್ ಎಐನಂತಹ ಕಂಪನಿಗಳೊಂದಿಗೆ ಪೈಪೋಟಿ ನಡೆಸುತ್ತಿರುವ ಚೀನೀ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಅದೆಷ್ಟರ ಮಟ್ಟಿಗೆ ಹವಾ ಸೃಷ್ಟಿಸಿದೆ ಎಂದರೆ ಎಐನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದಲ್ಲೇ ಹೆಚ್ಚಿನ ಜನರು ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ದಾರೆ. ಇದು ಎಚ್ಚೆತ್ತುಕೊಳ್ಳುವ ಸಮಯ ಎಂದು ಟೆಕ್ ದೈತ್ಯರಿಗೆ ಎಚ್ಚರಿಕೆ ನೀಡಿದೆ.

ಏನಿದು ಡೀಪ್‌ಸೀಕ್‌?

ಇದೊಂದು ಕೃತಕ ಬುದ್ಧಿಮತ್ತೆ ವ್ಯವಸ್ಥೆ. ನಾವು ಏನೇ ಪ್ರಶ್ನೆ ಕೇಳಿದರೂ ಅದಕ್ಕೆ ಉತ್ತರ ನೀಡುತ್ತದೆ. ಇದನ್ನು ಲಿಯಾಂಗ್‌ ವೆನ್‌ಫೆಂಗ್‌ ಎನ್ನುವವರು 2023ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ್ದರು. ಡೀಪ್‌ಸೀಕ್‌ ಚಾಟ್‌ ಜಿಪಿಟಿ ರೀತಿಯ ಲಾರ್ಜ್‌ ಲ್ಯಾಂಗ್ವೇಜ್ ಮಾಡೆಲ್. ಇದು ಎಐ, ಚಾಟ್‌ ಜಿಪಿಟಿ, ಜೆಮಿನಿಯಂತಹ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಅವುಗಳ ಅವಿಷ್ಕಾರಕ್ಕೆ ತಗುಲಿದ ಶೇ.1 ರಷ್ಟು ಅಗ್ಗದ ದರದಲ್ಲಿ ಅಭಿವೃದ್ದಿಪಡಿಸಲಾಗಿದೆ. ಕೇವಲ ಒಂದೆರೆಡು ವರ್ಷಗಳ ಹಿಂದಷ್ಟೇ ಆರಂಭವಾದ ಡೀಪ್‌ಸೀಕ್‌ ಕಂಪನಿಯು ಇಷ್ಟು ಕಡಿಮೆ ಅವಧಿಯಲ್ಲಿ ಬೃಹತ್ ಎಐ ಮಾದರಿಯನ್ನು ಸೃಷ್ಟಿಸಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ.

ಕಳೆದ ಕ್ರಿಸ್ಮಸ್‌ ಸಂದರ್ಭದಲ್ಲಿ ಡೀಪ್‌ಸಿಕ್‌ ತನ್ನ ವಿ3 ಮಾದರಿಯನ್ನು ಹೊರ ತಂದಿತ್ತು. ಅಮೆರಿಕದ ಓಪನ್ ಎಐ, ಗೂಗಲ್‌ ತಂತ್ರಜ್ಞಾನಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ತಯಾರಿಸಲಾಗಿತ್ತು. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಈ ವರ್ಷದ ಜನವರಿ 20 ರಂದು ಡೀಪ್ ಸೀಕ್ - ಆರ್‌ 1 ಮಾದರಿಯನ್ನು ಪರಿಚಯಿಸಿದೆ.

ಬಳಕೆ ಹೇಗೆ?

ಡೀಪ್ ಸೀಕ್ ಬಳಸಲು ನೀವು ಹಣ ನೀಡಬೇಕಂತಿಲ್ಲ. ಮೊಬೈಲ್‌ನ ಪ್ಲೇಸ್ಟೋರ್‌ಗೆ ಹೋಗಿ ಡೀಪ್ ಸೀಕ್ ಡೌನ್ಲೋಡ್‌ ಮಾಡಿಕೊಳ್ಳಬಹುದು. ಬಳಿಕ ಲಾಗಿನ್ ಮಾಡಿ ಚಾಟ್‌ ಜಿಪಿಟಿ ರೀತಿಯಲ್ಲಿಯೇ ಸಂದೇಹವಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಅನೇಕ ಪಾಶ್ಚಾತ್ಯ ಮಾದರಿಗಳಿಗಿಂತ ಭಿನ್ನವಾಗಿರುವ ಇದು ಚೀನಾದ ಕಟ್ಟು ನಿಟ್ಟಾದ ಸೆನ್ಸಾರ್‌ಶಿಪ್ ನಿಯಮಗಳನ್ನು ಅನುಸರಿಸುತ್ತದೆ. ಕೆಲವೊಮ್ಮೆ ಸೂಕ್ಷ್ಮ ವಿಷಯಗಳ ಬಗ್ಗೆ ಕೇಳಿದಾಗ, ನೇರ ಉತ್ತರಗಳನ್ನು ನೀಡುವುದಿಲ್ಲ. ಇದು ಡಿಜಿಟಲ್ ವಿಷಯದ ಮೇಲೆ ಸರ್ಕಾರದ ನಿಯಂತ್ರಣವನ್ನು ಪ್ರತಿಬಿಂಬಿಸುತ್ತದೆ.

ಚೀನಾ ಪ್ರಶ್ನೆಗಳಿಗೆ ಚೀನಿ ಆ್ಯಪ್‌ ಮೌನ

ಅಂದಹಾಗೆ ನೀವು ಚೀನಾಗೆ ಸಂಬಂಧಿಸಿದ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿದರೆ ಇದು ನಿಮಗೆ ಉತ್ತರ ನೀಡುವುದಿಲ್ಲ. ಉದಾಹರಣೆಗೆ,

ಅರುಣಾಚಲ ಭಾರತದ ಭಾಗವೇ?

ಈ ರೀತಿ ನೀವು ಡೀಪ್‌ ಸೀಕ್‌ನಲ್ಲಿ ಟೈಪ್ ಮಾಡಿದರೆ ಅದ ನಿಮಗೆ ಸಮರ್ಪಕ ರೀತಿಯಲ್ಲಿ ಉತ್ತರ ನೀಡುವುದಿಲ್ಲ. ಈ ಪ್ರಶ್ನೆ ನನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಬೇರೆ ಏನಾದರೂ ಮಾತನಾಡಿ ಎನ್ನುವ ಉತ್ತರವನ್ನು ನೀಡುತ್ತದೆ.

ಆದರೆ ಕಾಶ್ಮೀರದ ಬಗ್ಗೆ ನೀವು ಪ್ರಶ್ನೆ ಕೇಳಿದರೆ,

ಕಾಶ್ಮೀರ ಭಾರತದ ಭಾಗವೇ?

ಕಾಶ್ಮೀರ ಭಾರತದ ಉತ್ತರ ಭಾಗದಲ್ಲಿ ನೆಲೆಗೊಂಡಿದೆ. ಜಮ್ಮು- ಕಾಶ್ಮೀರ, ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳು ಎಂದು ಕರೆಯಲಾಗುತ್ತದೆ. ಪಾಕಿಸ್ತಾನದ ಸ್ಥಾನಮಾನವು ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದದ ವಿಷಯವಾಗಿದೆ ಎನ್ನುವ ಉತ್ತರವನ್ನು ನೀಡುತ್ತದೆ.

ಅಮೆರಿಕದಲ್ಲಿ ತಲ್ಲಣ?

ಅಮೆರಿಕದ ಉದ್ಯಮ ಪ್ರಮುಖರಿಗೆ ಡೀಪ್ ಸಿಕ್ ದೊಡ್ಡ ಆತಂಕವನ್ನು ತಂದೊಡ್ಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇದನ್ನು ಅಮೆರಿಕನ್ ಟೆಕ್ ದೈತ್ಯರಿಗೆ ಎಚ್ಚರಗೊಳ್ಳುವ ಸಮಯ ಎಂದು ಕರೆದಿದ್ದಾರೆ. ಅಮೆರಿಕದ ನಿವಿಡಾ ಟೆಕ್ ಕಂಪನಿ ಒಂದೇ ದಿನದಲ್ಲಿ ಶೇ.18ರಷ್ಟು ಕುಸಿತ ಕಂಡಿದೆ. ಇಲ್ಲೊಂದು ಗಮನಿಸಬೇಕಾದ ವಿಚಾರ ಎಂದರೆ ಚೀನಾದ ಡೀಪ್​ಸೀಕ್ ಎಐ ಮಾಡಲ್ ತಯಾರಿಸಲು ಟ್ರೈನಿಂಗ್​ಗಾಗಿ ನಿವಿಡಿಯಾದ ಚಿಪ್​ಗಳನ್ನೇ ಬಳಸಲಾಗಿದೆ.

ಗೌಪ್ಯತೆ ಬಗ್ಗೆ ಅಪಸ್ವರ?

ಚೀನಾದ ವಸ್ತುಗಳು ಮಾರುಕಟ್ಟೆಗೆ ಕಾಲಿಟ್ಟಾಗ ಅದರ ಬಗ್ಗೆ ವಿಶ್ವಾಸರ್ಹತೆ ಪ್ರಶ್ನೆಗಳು ಎದ್ದೇಳುವುದು ಸಹಜ. ಇದರ ನಡುವೆ ಈ ಆ್ಯಪ್‌ ಬಗ್ಗೆಯೂ ಸಂಶಯಗಳೆದ್ದಿವೆ. ನೀವು ಡೀಪ್ ಸೀಕ್‌ನಲ್ಲಿ ಅಪ್ಲೋಡ್‌ ಮಾಡಲಾದ ಡೇಟಾವು ಚೀನಾದಲ್ಲಿನ ಸರ್ವರ್‌ಗಳಲ್ಲಿ ಸಂಗ್ರಹವಾಗುತ್ತದೆ. ದತ್ತಾಂಶದ ಗೌಪ್ಯತೆ ಮತ್ತು ಬೌದ್ಧಿಕ ಆಸ್ತಿಯ ಕುರಿತಾದ ಕಳವಳಕ್ಕೆ ಕಾರಣವಾಗಿದೆ. ಚೀನಿ ಕಮ್ಯುನಿಸ್ಟ್‌ ಪಕ್ಷದ ಅಧಿಕಾರದ ಅಡಿಯಲ್ಲಿ ಡೇಟಾ ಸಂಗ್ರಹ ಆಗುವುದರಿಂದ ಚೀನಿ ಕಮ್ಯುನಿಸ್ಟ್‌ ಪಕ್ಷದ ಮೌಲ್ಯಗಳಿಗೆ ಅನುಗುಣವಾಗಿ ಸೆನ್ಸಾರ್‌ ಮಾಡುತ್ತದೆ.

ಚಾಟ್‌ ಜಿಪಿಟಿಗೆ ಹೋಲಿಸಿದರೆ ಡೀಪ್ ಸೀಕ್ ಅಷ್ಟು ಪರಿಣಾಮಕಾರಿಯಾಗಿಲ್ಲ ಎನ್ನುವ ಮಾತುಗಳೂ ಇವೆ. ಡೀಪ್ ಸೀಕ್ ನಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್ಲ ಎಂಬ ಅಪವಾದಗಳಿವೆ. ಇದು ಚೀನಾದ ಆಪ್ ಆಗಿರುವುದರಿಂದ ನಂಬಲರ್ಹವಲ್ಲ ಎನ್ನುವವರೂ ಇದ್ದಾರೆ.

ಕಡಿಮೆ ಬಜೆಟ್

ಸೀಮಿತ ಸಂಪನ್ಮೂಲಗಳೊಂದಿಗೆ ಅತ್ಯಾಧುನಿಕ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಡೀಪ್‌ ಸೀಕ್ ಸಾಬೀತು ಪಡಿಸಿದೆ. ಇದು ಓಪನ್ ಎಐಗಳಿಗೆ ಪ್ರತಿಸ್ಪರ್ಧಿ ಎಂದೇ ಬಿಂಬಿತವಾಗಿದೆ. ಆದರೆ ಇದರ ಅವಿಷ್ಕಾರಕ್ಕೆ ತಗುಲಿದ ವೆಚ್ಚದ ಒಂದು ಭಾಗ ಎಂದರೆ ನಂಬಲೇ ಬೇಕು. ಇದು ಓಪನ್ ಎಐಗಿಂತ 20 ರಿಂದ 50 ಪಟ್ಟು ಅಗ್ಗವಾಗಿದೆ. ಡೀಪ್‌ಸೀಕ್ ಕಂಪ್ಯೂಟಿಂಗ್‌ಗೆ ತರಬೇತಿ ನೀಡಲು ಸುಮಾರು 60 ಲಕ್ಷ ಚಿಪ್‌ಗಳ ಬಳಕೆಯಾಗಿದೆ. ಇದು ಮೆಟಾ ತನ್ನ ಇತ್ತೀಚಿನ ಎಐ ಅಭಿವೃದ್ಧಿ ಪಡಿಸಲು ಬಳಸಿದ ಚಿಪ್‌ಗಳಿಗಿಂತ 10 ಪಟ್ಟು ಕಡಿಮೆ.

Share this article