ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರು, ಸೆಪ್ಟೆಂಬರ್‌ನಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದ ರಿಪಬ್ಲಿಕನ್‌ ಪಕ್ಷದ ಕಾರ್ಯಕರ್ತ ಚಾರ್ಲಿ ಕಿರ್ಕ್‌ ಅವರ ಪತ್ನಿ ಎರಿಕಾ ಕಿರ್ಕ್‌ರನ್ನು ಕಾರ್ಯಕ್ರಮವೊಂದರಲ್ಲಿ ಆಪ್ತತೆಯಿಂದ ಅಪ್ಪಿಕೊಂಡದ್ದು ಇದೀಗ ಹಲವು ಲೆಕ್ಕಾಚಾರಗಳಿಗೆ ಎಡೆಮಾಡಿದೆ. 

ವಾಷಿಂಗ್ಟನ್‌: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರು, ಸೆಪ್ಟೆಂಬರ್‌ನಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದ ರಿಪಬ್ಲಿಕನ್‌ ಪಕ್ಷದ ಕಾರ್ಯಕರ್ತ ಚಾರ್ಲಿ ಕಿರ್ಕ್‌ ಅವರ ಪತ್ನಿ ಎರಿಕಾ ಕಿರ್ಕ್‌ರನ್ನು ಕಾರ್ಯಕ್ರಮವೊಂದರಲ್ಲಿ ಆಪ್ತತೆಯಿಂದ ಅಪ್ಪಿಕೊಂಡದ್ದು ಇದೀಗ ಹಲವು ಲೆಕ್ಕಾಚಾರಗಳಿಗೆ ಎಡೆಮಾಡಿದೆ. 

ವಿಚ್ಛೇದನ ವದಂತಿಗೆ ನಾಂದಿ ಹಾಡಿದೆ.ಮಿಸಿಸಿಪಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎರಿಕಾ, ‘ನನ್ನ ಗಂಡನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಆದರೆ ವ್ಯಾನ್ಸ್‌ರಲ್ಲಿ ಅವರ ಕೆಲ ಹೋಲಿಕೆಗಳಿವೆ’ ಎಂದಿದ್ದರು. 

ಬಳಿಕ ವ್ಯಾನ್ಸ್‌ರನ್ನು ಅಪ್ಪಿಕೊಂಡಿದ್ದರು. ಈ ವೇಳೆ ವ್ಯಾನ್ಸ್‌, ಎರಿಕಾರ ಸೊಂಟವನ್ನು ಬಳಸಿದ್ದರು. ಅತ್ತ ಎರಿಕಾ, ವ್ಯಾನ್ಸ್‌ ಅವರನ್ನು ಅಪ್ಪಿಕೊಂಡು ಅವರ ತಲೆಗೂದಲಲ್ಲಿ ಕೈಯ್ಯಾಡಿಸಿದ್ದರು. ಇದು ಔಪಚಾರಿಕೆ ಅಪ್ಪುಗೆಗಿಂತ ಜಾತಿ ಅತ್ಯಾಪ್ತ ಎನಿಸುತ್ತಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ. ಅತ್ತ ಅದೇ ಕಾರ್ಯಕ್ರಮದಲ್ಲಿ ವ್ಯಾನ್ಸ್‌, ‘ನನ್ನ ಪತ್ನಿ ಕ್ರೈಸ್ತ ಧರ್ಮದಿಂದ ಪ್ರಭಾವಿತಳಾಗಿ ಅದನ್ನೊಪ್ಪುತ್ತಾಳೆ ಎಂಬ ಭರವಸೆ ಇದೆ’ ಎಂದಿದ್ದರು. ಈ ಎಲ್ಲಾ ಘಟನೆಗಳಿಂದಾಗಿ, ಅವರು ತಮ್ಮ ಭಾರತ ಮೂಲದ ಪತ್ನಿ ಉಷಾ ಚಿಲುಕೂರಿ ಅವರಿಂದ ಬೇರ್ಪಡಲಿದ್ದಾರೆ ಎನ್ನಲಾಗುತ್ತಿದೆ.

ಇಂಡಿಗೋ ವಿಮಾನಕ್ಕೆ ಮಾನವ ಬಾಂಬ್‌ ಕರೆ: ಆತಂಕ

ಹೈದರಾಬಾದ್‌: ಸೌದಿ ಅರೇಬಿಯಾದ ಜೆಡ್ಡಾದಿಂದ ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಮಾನವ ಬಾಂಬ್‌ ಕರೆ ಬಂದ ಘಟನೆ ಶನಿವಾರ ನಡೆದಿದೆ.ಶನಿವಾರ ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಬಂದಿದೆ. ‘ಎಲ್‌ಟಿಟಿಇ-ಐಎಸ್‌ಐಗೆ ಸೇರಿದ ಆತ್ಮಾಹುತಿ ಬಾಂಬರ್‌ಗಳು 1984ರ ಮದ್ರಾಸ್‌ ಏರ್‌ಪೋರ್ಟ್‌ ಮಾದರಿಯಲ್ಲಿ ಬಾಂಬ್‌ ಸ್ಫೋಟಗಳಿಸಲಿದ್ದಾರೆ. ಹೈದರಾಬಾದ್‌ನಲ್ಲಿ ಲ್ಯಾಂಡ್‌ ಮಾಡಬೇಡಿ’ ಎಂಬ ಸಂದೇಶ ಬಂದಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ವಿಮಾನವನ್ನು ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿ, ಸಂಪೂರ್ಣ ವಿಮಾನ ಪರಿಶೀಲಿಸಿದ್ದಾರೆ. ಈ ವೇಳೆ ಯಾವುದೇ ಬಾಂಬ್‌ ಪತ್ತೆಯಾಗದ ಹಿನ್ನೆಲೆಯಲ್ಲಿ ಹುಸಿ ಕರೆ ಎಂದು ಪರಿಗಣಿಸಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ.

ಗೆದ್ದರೆ ಬಾಂಗ್ಲಾ ಗಡಿ ಬೇಲಿ ತೆಗೆಯುತ್ತೇವೆ: ಬಿಜೆಪಿ ಸಂಸದನ ವಿವಾದ

ಕೋಲ್ಕತಾ: ‘ ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನದಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಂಗ್ಲಾದೇಶದ ಗಡಿ ಬೇಲಿಯನ್ನು ತೆಗೆದು ಹಾಕುತ್ತೇವೆ’ ಎಂದು ಬಿಜೆಪಿ ಸಂಸದ ಜಗನ್ನಾಥ್‌ ಸರ್ಕಾರ್‌ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.ಸರ್ಕಾರ್‌ ಹೇಳಿಕೆಗೆ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಕಿಡಿಕಾರಿದ್ದು, ‘ಬಿಜೆಪಿ ನಾಯಕರು ಬೂಟಾಟಿಕೆಯ ಹೊಸ ಆಳಕ್ಕೆ ಇಳಿದಿದ್ದಾರೆ.ಅಧಿಕಾರಕ್ಕೆ ಬಂದರೆ ಭಾರತ- ಬಾಂಗ್ಲಾ ನಡುವೆ ಯಾವುದೇ ಗಡಿ ಇರುವುದಿಲ್ಲ.ಎರಡು ದೇಶಗಳು ಒಂದಾಗುತ್ತದೆ ಎಂದು ಘೋಷಿಸುತ್ತಾರೆ. ಕೇಂದ್ರ ಸಚಿವ ಅಮಿತ್‌ ಶಾ ಅವರು, ತಮ್ಮದೇ ಸಂಸದರು ತೆಗೆದು ಹಾಕಲು ಬಯಸುವ ಗಡಿ ಬೇಲಿಗೆ ಜಾಗ ನೀಡಿದ್ದಕ್ಕೆ ಪಶ್ಚಿಮ ಬಂಗಾಳ ಸರ್ಕಾರವನ್ನು ದೂಷಿಸುತ್ತಾರೆ. ಸರ್ಕಾರ್‌ ಅವರ ಹೇಳಿಕೆ ರಾಷ್ಟ್ರೀಯತೆ ಅಲ್ಲ, ವಂಚನೆ’ ಎಂದು ಕಿಡಿ ಕಾರಿದರು.

ಚಿನ್ನ-ಕನ್ನ ಕೇಸ್‌: ಶಬರಿಮಲೆ ಮಾಜಿ ಅಧಿಕಾರಿ ಸುಧೀರ್‌ ಬಂಧನ

ಪಟ್ಟಣಂತಿಟ್ಟ: ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಕವಚಗಳ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇವಸ್ಥಾನದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್‌ ಕುಮಾರ್‌ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.1990ರಿಂದ ಶಬರಿಮಲೆ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಸುಧೀರ್‌ಗೆ, 1998-99ರ ಅವಧಿಯಲ್ಲಿ ಕವಚಕ್ಕೆ ಚಿನ್ನದ ಲೇಪನವಾಗಿದ್ದು ಅರಿವಿತ್ತು. ಹೀಗಿದ್ದರೂ, 2019ರಲ್ಲಿ ದೇವಸ್ಥಾನದ ಅಧಿಕಾರಿಯಾಗಿದ್ದ ಇವರು, ದ್ವಾರಪಾಲಕ ವಿಗ್ರಹಗಳ ಕವಚ ಚಿನ್ನದ್ದೆಂದು ಬರೆಯುವ ಬದಲು ತಾಮ್ರದ್ದು ಎಂದು ದಾಖಲಿಸಿದ ಆರೋಪ ಇವರ ಮೇಲಿದ್ದು, ಅಪರಾಧ ವಿಭಾಗದ ಅಧಿಕಾರಿಗಳ ವಿಚಾರಣೆ ಬಳಿಕ ಬಂಧಿಸಲಾಗಿದೆ.ಈ ಮೂಲಕ, ಚಿನ್ನ-ಕನ್ನ ಪ್ರಕರಣದಲ್ಲಿ ಬಂಧನಕ್ಕೊಳಗಾದವರಲ್ಲಿ ಸುಧೀರ್‌ 3ನರಯವರಾಗಿದ್ದಾರೆ. ಈಗಾಗಲೇ ಬೆಂಗಳೂರಿನ ಉನ್ನಿಕೃಷ್ಣನ್‌ ಪೊಟ್ಟಿ, ಮುರಾರಿ ಬಾಬು ಅವರನ್ನು ಬಂಧಿಸಲಾಗಿದೆ.

ಶಾರುಖ್‌ಗೆ ಇಂದು 60ನೇ ವರ್ಷದ ಜನ್ಮದಿನ ಸಂಭ್ರಮ

ಮುಂಬೈ: ಬಾಲಿವುಡ್‌ ಬಾದ್‌ಷಾ ಎಂದೇ ಖ್ಯಾತಿ ಪಡೆದ ನಟ ಶಾರುಖ್‌ ಖಾನ್ ಭಾನುವಾರ 60ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಮುಂಬೈ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ.ಶಾರುಖ್‌ ಕೂಡ ತಮಗೆ ಶುಭಕೋರಲು ಬರುವ ಅಭಿಮಾನಿಗಳಿಗಾಗಿ ಔತಣ ಆಯೋಜಿಸಿದ್ದಾರೆ ಎಂದು ಅವರ ಒಬ್ಬಅಭಿಮಾನಿ ಹೇಳಿದ್ದಾರೆ. ಜತೆಗೆ ಶಾರುಖ್‌ ಅಭಿನಯದ ಕಿಂಗ್ ಸಿನಿಮಾದ ಫಸ್ಟ್‌ ಲುಕ್ ಕೂಡ ಅದೇ ದಿನ ಬಿಡುಗಡೆಯಾಗಲಿದೆ.ತ್ರಿವಳಿ ಖಾನ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡು ಕಿಂಗ್‌ ಖಾನ್‌ ಅಂತಲೇ ಶಾರುಖ್‌ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಾರೆ. ದೆಹಲಿ ಮೂಲದ ಶಾರುಖ್‌ ‘ಫೌಜಿ’ , ‘ಸರ್ಕಸ್‌’ ನಂತಹ ಟೀವಿ ಧಾರಾವಾಹಿಗಳ ಮೂಲಕ ನಟನಾ ಲೋಕಕ್ಕೆ ಪ್ರವೇಶಿಸಿದರು. ಆ ಬಳಿಕ 1992ರಲ್ಲಿ ‘ದೀವಾನಾ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟು ಹಿಂದಿ ಚಿತ್ರರಂಗದಲ್ಲಿ ಬಾದ್‌ ಷಾ ಆಗಿ ಮೆರೆದರು. ಬಾಜಿಗರ್‌, ಡರ್‌, ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕುಛ್‌ ಕುಛ್‌ ಹೋತಾ ಹೈ, ಜವಾನ್‌ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಜನರ ಮನೆಸೆಳೆದರು.