ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ನಿಯಮ ಅಂತಿಮ: ವ್ಯಾನ್ಸ್‌

| Published : Apr 23 2025, 12:39 AM IST

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ತೆರಿಗೆ ಹೊಡೆತದಿಂದ ಜಗತ್ತು ಜರ್ಜರಿತವಾಗಿರುವ ಹೊತ್ತಿನಲ್ಲಲ್ಲೇ, ‘ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ನಿಯಮಗಳು ಅಂತಿಮಗೊಂಡಿವೆ’ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ತಿಳಿಸಿದ್ದಾರೆ.

- ಸುಂಕ ಬಿಕ್ಕಟ್ಟು ಶಮನ ಮುನ್ಸೂಚನೆ ನೀಡಿದ ಅಮೆರಿಕ ಉಪಾಧ್ಯಕ್ಷ

ಜೈಪುರ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ತೆರಿಗೆ ಹೊಡೆತದಿಂದ ಜಗತ್ತು ಜರ್ಜರಿತವಾಗಿರುವ ಹೊತ್ತಿನಲ್ಲಲ್ಲೇ, ‘ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ನಿಯಮಗಳು ಅಂತಿಮಗೊಂಡಿವೆ’ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ತಿಳಿಸಿದ್ದಾರೆ.

ಮೋದಿ ಭೇಟಿಯಾದ ಮರುದಿನ ಮಂಗಳವಾರ ಜೈಪುರದಲ್ಲಿ ಮಾತನಾಡಿದ ವ್ಯಾನ್ಸ್‌, ‘ನಮ್ಮ ಆಡಳಿತವು ನ್ಯಾಯಯುತ ಮತ್ತು ಸಾಮ್ಯ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದಲ್ಲಿ ವ್ಯಾಪಾರ ಪಾಲುದಾರರನ್ನು ಹುಡುಕುತ್ತದೆ. ತನ್ನ ನೌಕರರನ್ನು ಗೌರವಿಸಿ, ರಫ್ತು ಹೆಚ್ಚಳಕ್ಕಾಗಿ ಅವರ ವೇತನವನ್ನು ಕಡಿತಗೊಳಿಸದೆ ರಾಷ್ಟ್ರದೊಂದಿಗೆ ನಾವು ಸಂಬಂಧ ಬೆಳೆಸಲು ಬಯಸುತ್ತೇವೆ. ಅವುಗಳು ನಮ್ಮೊಂದಿಗೆ ಸೇರಿ ವಸ್ತುಗಳನ್ನು ಉತ್ಪಾದಿಸಬೇಕೇ ಹೊರತು, ಕೇವಲ ಸರಕು ಸಾಗಣೆಯ ಮಾರ್ಗವಾಗಿರಬಾರದು. ಸಮತೋಲಿತ ಜಾಗತಿಕ ವ್ಯಾಪಾರ ವ್ಯವಸ್ಥೆ ಕಟ್ಟಲು ಒಂದಾಗಬೇಕು’ ಎಂದರು.ಅಂತೆಯೇ, ‘ಭಾರತದೊಂದಿಗಿನ ಸಾಮಾನ್ಯ ಗುರಿಗಳು ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿವೆ’ ಎಂದು ಅವರು ಹೇಳಿದರು.

==

ಮೋದಿಗೆ ಅಮೆರಿಕ ಉಪದೇಶ ಮಾಡಲ್ಲ: ವ್ಯಾನ್ಸ್‌

‘ಇನ್ನು ಅಮೆರಿಕ ಮೋದಿಯವರಿಗೆ ಉಪದೇಶ ನೀಡಲು ಬರುವುದಿಲ್ಲ’ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ. ಇದರರ್ಥ, ‘ಭಾರತ ಹಾಗೂ ಮೋದಿಯವರಿಗೆ ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಕ್ಷಮತೆ ಇದೆ’ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಭೇಟಿಯ ಬಗ್ಗೆ ಮಂಗಳವಾರ ಮಾತನಾಡಿದ ವಾನ್ಸ್‌, ‘ಅವರ ಜನಪ್ರಿಯತೆಯಿಂದ ನನಗೆ ಹೊಟ್ಟೆಕಿಚ್ಚಾಗುತ್ತದೆ. ಈ ಬಗ್ಗೆ ಅವರಿಗೂ ಹೇಳಿದೆ’ ಎಂದು ಚಟಾಕಿ ಹಾರಿಸಿದರು.

==

ಅಂಬರ್‌ ಕೋಟೆಗೆ ವ್ಯಾನ್ಸ್‌ ಪರಿವಾರ ಭೇಟಿ

ಜೈಪುರ: ಪ್ರಸ್ತುತ 4 ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌, ಭಾರತ ಮೂಲದವರಾದ ಪತ್ನಿ ಉಷಾ ಮತ್ತು ಮೂವರು ಮಕ್ಕಳು, ವಿಶ್ವ ಪಾರಂಪರಿಕ ತಾಣಗಳಲ್ಲೊಂದಾದ ಜೈಪುರದ ಅಂಬರ್‌ ಕೋಟೆಗೆ ಭೇಟಿ ನೀಡಿದರು.

____

ಬಿಗಿ ಭದ್ರತೆಯ ನಡುವೆ ಕೋಟೆಗೆ ಆಗಮಿಸಿದ ವ್ಯಾನ್ಸ್‌ ಪರಿವಾರವನ್ನು ರಾಜಸ್ಥಾನ ಸಿಎಂ ಭಜನ್‌ಲಾಲ್‌ ಶರ್ಮಾ ಹಾಗೂ ಡಿಸಿಎಂ ದಿಯಾ ಕುಮಾರಿ ಎದುಗೊಂಡರು. ಅವರ ಸ್ವಾಗತಕ್ಕೆ ಚಂದಾ ಹಾಗೂ ಮಾಲಾ ಎಂಬ ಆನೆಗಳೂ ಸಿಂಗರಿಸಿಕೊಂಡು ನಿಂತಿದ್ದವು.

ಅಂಬರ್‌ ಫೋರ್ಟ್‌ನ ಶಿಲ್ಪಕಲೆಯನ್ನು ಸವಿದ ವ್ಯಾನ್ಸ್‌ ಕುಟುಂಬ, ಬಳಿಕ ರಾಜ್ಯದ ಜಾನಪದ ನೃತ್ಯಗಳನ್ನೂ ವೀಕ್ಷಿಸಿತು.