ಸಾರಾಂಶ
ನವದೆಹಲಿ: ಪರಿವಾರ ಸಮೇತರಾಗಿ ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಪ್ರಧಾನಿ ನರೆಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದನ್ನು, ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧದಲ್ಲಿ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ ಆಮದುಗಳ ಮೇಲೆ ಅಮೆರಿಕ ಹೇರಿದ್ದ ಶೇ.26ರಷ್ಟು ತೆರಿಗೆಗೆ 90 ದಿನಗಳ ತಡೆ ನೀಡಲಾಗಿರುವ ಈ ಹೊತ್ತಿನಲ್ಲಿ, ಮೋದಿ ಮತ್ತು ವಾನ್ಸ್ ನಡುವೆ ದ್ವಿಪಕ್ಷೀಯ ವ್ಯಾಪಾರದ ಕುರಿತು ಚರ್ಚೆ ನಡೆದಿದೆ. ಜೊತೆಗೆ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿನ ಪ್ರಗತಿಯನ್ನು ಸ್ವಾಗತಿಸಿದ ನಾಯಕರಿಬ್ಬರೂ, ಅದರ ಪ್ರಗತಿಯನ್ನು ಪರಿಶೀಲಿಸಿದರು ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ಇದೇ ವೇಳೆ, ಜನವರಿಯಲ್ಲಿ ಅಮೆರಿಕಕ್ಕೆ ಭೇಟಿ ನೀಡಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದದ್ದನ್ನು ಮೋದಿ ಸ್ಮರಿಸಿದರು. ಅಂತೆಯೇ, ಅವರಿಬ್ಬರೂ ಪರಸ್ಪರ ಆಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡು, ಶಕ್ತಿ, ಭದ್ರತೆ, ವ್ಯೂಹಾತ್ಮ ತಂತ್ರಜ್ಞಾನಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಮುಂದುವರೆಸುವ ಭರವಸೆಯನ್ನೂ ವ್ಯಕ್ತಪಡಿಸಿದರು. ವರ್ಷಾಂತ್ಯಕ್ಕೆ ಟ್ರಂಪ್ ಭಾರತ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ಮೋದಿ ತಿಳಿಸಿದರು.
ಅತ್ತ ವ್ಯಾನ್ಸ್ ಅವರೊಂದಿಗೆ ಆಗಮಿಸಿರುವ ಅಧಿಕಾರಿಗಳು ಭಾರತದ ಅಧಿಕಾರಿಗಳ ತಂಡದೊಂದಿಗೂ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದರಿಂದ ಭಾರತಕ್ಕೆ ಲಾಭವಾಗುವಂತಹ ಬೆಳವಣಿಗೆಗಳಾಗುವ ನಿರೀಕ್ಷೆಯಿದೆ.
ವ್ಯಾನ್ಸ್ ಮಕ್ಕಳಿಗೆ ಮೋದಿ ನವಿಲುಗರಿ!
ಮಾತುಕತೆಗೂ ಮುನ್ನ ತಮ್ಮ ನಿವಾಸಕ್ಕೆ ಬಂದ ವ್ಯಾನ್ಸ್, ಅವರ ಭಾರತೀಯ ಮೂಲದ ಪತ್ನಿ ಉಷಾ ವ್ಯಾನ್ಸ್ ಹಾಗೂ 3 ಮಕ್ಕಳನ್ನು ಮೋದಿ ಅವರು ಸ್ವಾಗತಿಸಿ ಹೂದೋಟದಲ್ಲಿ ಸುತ್ತಾಡಿಸಿದರು ಹಾಗೂ ವ್ಯಾನ್ಸ್ ಮಕ್ಕಳಿಗೆ ನವಿಲುಗರಿ ನೀಡಿದರು. ಮಾತುಕತೆ ಬಳಿಕ ವ್ಯಾನ್ಸ್ ಅವರಿಗಾಗಿ ಮೋದಿ ಔತಣಕೂಟ ಏರ್ಪಡಿಸಿದ್ದರು.
ಅಕ್ಷರಧಾಮ ದೇಗುಲಕ್ಕೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಭೇಟಿ
ನವದೆಹಲಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಮ್ಮ ಭಾರತ ಮೂಲದ ಪತ್ನಿ ಉಷಾ ವ್ಯಾನ್ಸ್ ಮತ್ತು ಮೂವರು ಮಕ್ಕಳೊಂದಿಗೆ 4 ದಿನದ ಭಾರತ ಪ್ರವಾಸ ಆರಂಭಿಸಿದ್ದಾರೆ. ಮೊದಲ ದಿನವವೇ ಕುಟುಂಬ ಸಮೇತರಾಗಿ ಅವರು ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡಿದರು. ಈ ವೇಳೆ ಅವರ ಮಕ್ಕಳು ಭಾರತೀಯ ಪೋಷಾಕಿನಲ್ಲಿ ಮಿಂಚಿದರು.
ಸೋಮವಾರ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬರಮಾಡಿಕೊಂಡರು.ಬಳಿಕ ವ್ಯಾನ್ಸ್ ಕುಟುಂಬಸಮೇತರಾಗಿ ದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದುಕೊಂಡರು. ಈ ವೇಳೆ ಹಿರಿಯ ಮಗ ಇವಾನ್ ಮತ್ತು 2ನೇ ಮಗ ವಿವೇಕ್ ಬಿಳಿ ಪೈಜಾಮದ ಮೇಲೆ ಹಳದಿ ಮತ್ತು ಕಂದು ಕುರ್ತಾ ಧರಿಸಿದ್ದರೆ, ಮಗಳು ಮಿರಾಬೆಲ್ ತಿಳಿ ಹಸಿರು ಅನಾರ್ಕಲಿ ಸೂಟ್ ಧರಿಸಿದ್ದರು.ಜೈಪುರ ಮತ್ತು ಆಗ್ರಾಕ್ಕೂ ವ್ಯಾನ್ಸ್ ಭೇಟಿ ನೀಡಲಿದ್ದಾರೆ.