ಸಾರಾಂಶ
ನವದೆಹಲಿ: ಖುರೇಷಿ ಎಲೆಕ್ಷನ್ ಕಮಿಷನರ್ ಅಲ್ಲ, ಮುಸ್ಲಿಂ ಕಮಿಷನರ್ ಎಂಬ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಟೀಕೆಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಖಂಡ ಭಾರತದ ದೃಷ್ಟಿಕೋನದಿಂದ ನಾನು ಚುನಾವಣಾ ಆಯುಕ್ತನಾಗಿ ಕೆಲಸ ಮಾಡಿದೆ. ಆದರೆ ಕೆಲವು ವ್ಯಕ್ತಿಗಳು ಕೆಲಸದ ಬದಲು ಧರ್ಮವನ್ನು ಗುರುತಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಖುರೇಷಿ, ‘ನನ್ನ ಸಾಮರ್ಥ್ಯ ಮೀರಿ ಸಾಂವಿಧಾನಿಕ ಹುದ್ದೆಯಾದ ಚುನಾವಣಾ ಆಯೋಗದಲ್ಲಿ ಕೆಲಸ ಮಾಡಿದ್ದೇನೆ. ಐಎಎಸ್ ಅಧಿಕಾರಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದೇನೆ. ನಾನು ವ್ಯಕ್ತಿಯೊಬ್ಬನನ್ನು ಆತನ ಪ್ರತಿಭೆ, ಕೊಡುಗೆಗಳಿಂದ ಗುರುತಿಸಲ್ಪಡಬೇಕೇ ಹೊರತು ಧಾರ್ಮಿಕತೆಯಿಂದಲ್ಲ ಎಂಬ ಭಾರತದ ಮೇಲೆ ನಂಬಿಕೆ ಇಟ್ಟಿದ್ದೇನೆ. ಆದರೆ, ನನ್ನ ಪ್ರಕಾರ ಕೆಲವರಿಗೆ ಧಾರ್ಮಿಕ ಗುರುತು ಅವರ ದ್ವೇಷದ ರಾಜಕಾರಣ ಮುಂದುವರಿಸುವ ಮುಖ್ಯ ಸಾಧನವಾಗಿದೆ’ ಎಂದು ಹೇಳಿದ್ದಾರೆ.
ಜತೆಗೆ, ಭಾರತವು ಯಾವತ್ತೂ ಸಾಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳಿಗಾಗಿ ಹೋರಾಟ ನಡೆಸುತ್ತದೆ ಎಂದು ನಂಬಿದ್ದೇನೆ ಎಂದರು.
ಇದಕ್ಕೂ ಮೊದಲು, ''''''''ಯಾವತ್ತೂ ಹಂದಿಯ ಜತೆಗೆ ಗುದ್ದಾಡಬಾರದು. ಯಾಕೆಂದರೆ ಅದರಿಂದ ನಾವೇ ಕೆಸರಾಗುತ್ತೇವೆ, ಹಂದಿ ಅದನ್ನು ಇಷ್ಟಪಡುತ್ತದೆ'''''''' ಎಂಬ ಜಾರ್ಜ್ ಬರ್ನಾರ್ಡ್ ಶಾ ಅವರ ಹೇಳಿಕೆ ಮುಂದಿಟ್ಟುಕೊಂಡು ದುಬೆ ಕಾಲೆಳೆದಿದ್ದರು.
++++ಖರೇಶಿ ವಿರುದ್ಧದ ದುಬೆ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಶಿವಸೇನೆಯ ಸಂಜಯ್ ರಾವುತ್ ಸೇರಿ ಹಲವು ಮುಖಂಡರು ಕಿಡಿಕಾರಿದ್ದಾರೆ. ಖುರೇಷಿ ಅವರೊಬ್ಬ ಅತ್ಯುತ್ತಮ ಚುನಾವಣಾ ಆಯುಕ್ತರಾಗಿದ್ದರು ಎಂದು ಹೊಗಳಿದ್ದಾರೆ.