ಕೆನಡಾದಲ್ಲಿ ದೇಗುಲ ಗೋಡೆ ಮೇಲೆ ಖಲಿಸ್ತಾನಿ ಪರ ಬರಹ : ಪುಂಡರ ಅಟ್ಟಹಾಸ

| N/A | Published : Apr 22 2025, 01:48 AM IST / Updated: Apr 22 2025, 05:52 AM IST

ಸಾರಾಂಶ

ಕೆನಡಾದಲ್ಲಿ ಖಲಿಸ್ತಾನಿ ಪರ ಪುಂಡರ ಅಟ್ಟಹಾಸ ದಿನ ಕಳೆದಂತೆ ಹೆಚ್ಚಾಗುತ್ತಲೇ ಸಾಗಿದೆ. 2 ದಿನ ಹಿಂದೆ ಗುರುದ್ವಾರದ ಮೇಲೆ ಭಾರತ ವಿರೋಧಿ ಬರಹ ಕೀಚಿದ್ದ ಖಲಿಸ್ತಾನಿಗಳು, ಬಳಿಕ ಸರ್ರೆ ಎಂಬಲ್ಲಿನ ಶ್ರೀ ಲಕ್ಷ್ಮೀ ನಾರಾಯಣ ಮಂದಿರದ ಮೇಲೆ ಖಲಿಸ್ತಾನಿ ಪರ ಬರಹಗಳನ್ನು ಗೀಚಿ ವಿರೂಪ ಮಾಡಿದ್ದಾರೆ.

 ಟೊರಂಟೋ: ಕೆನಡಾದಲ್ಲಿ ಖಲಿಸ್ತಾನಿ ಪರ ಪುಂಡರ ಅಟ್ಟಹಾಸ ದಿನ ಕಳೆದಂತೆ ಹೆಚ್ಚಾಗುತ್ತಲೇ ಸಾಗಿದೆ. 2 ದಿನ ಹಿಂದೆ ಗುರುದ್ವಾರದ ಮೇಲೆ ಭಾರತ ವಿರೋಧಿ ಬರಹ ಕೀಚಿದ್ದ ಖಲಿಸ್ತಾನಿಗಳು, ಬಳಿಕ ಸರ್ರೆ ಎಂಬಲ್ಲಿನ ಶ್ರೀ ಲಕ್ಷ್ಮೀ ನಾರಾಯಣ ಮಂದಿರದ ಮೇಲೆ ಖಲಿಸ್ತಾನಿ ಪರ ಬರಹಗಳನ್ನು ಗೀಚಿ ವಿರೂಪ ಮಾಡಿದ್ದಾರೆ.ಘಟನೆಯ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ದೇವಾಲಯ, ‘ಏ.19ರ ಮುಂಜಾನೆ 3ರ ಸುಮಾರಿಗೆ 2 ಅಪರಿಚಿತರು ದೇವಸ್ಥಾನದ ಪ್ರವೇಶದಲ್ಲಿರುವ ಫಲಕ ಮತ್ತು ಕಂಬಗಳ ಮೇಲೆ ಖಲಿಸ್ತಾನ್‌ ಎಂದು ಬರೆದು ವಿರೂಪಗೊಳಿಸಿದ್ದಾರೆ. ಭದ್ರತೆಗಾಗಿ ಅಳವಡಿಸಲಾಗಿದ್ದ ಕ್ಯಾಮೆರಾಗಳನ್ನು ಕದ್ದಿದ್ದಾರೆ’ ಎಂದು ಮಾಹಿತಿ ನೀಡಿದೆ.

ಅಂತೆಯೇ, ಕೃತ್ಯವನ್ನು ಖಂಡಿಸಿದ್ದು, ‘ಇದು ಅಪರಾಧವಷ್ಟೇ ಅಲ್ಲ, ಅನೇಕ ಪರಿವಾರಗಳ ಆಧ್ಯಾತ್ಮಕ ಮತ್ತು ಸಾಂಸ್ಕೃತಿಕ ಕೇಂದ್ರದ ಮೇಲಿನ ನೇರ ದಾಳಿ. ಪ್ರಕರಣದ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು, ತನಿಖೆಗೆ ಸಹಕರಿಸುತ್ತಿದ್ದೇವೆ’ ಎಂದು ಹೇಳಿದೆ. ಅಂತೆಯೇ, ಇಂತಹ ದ್ವೇಷ ಕೃತ್ಯಗಳನ್ನು ಖಂಡಿಸಲು ಕೈಜೋಡಿಸುವಂತೆ ಸಾರ್ವಜನಿಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಆಗ್ರಹಿಸಿದೆ.