ಸಾರಾಂಶ
ಲಂಡನ್/ನವದೆಹಲಿ: ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಅವರ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಲು ಯತ್ನಿಸಿದ ಘಟನೆ ಘಟನೆ ಸಂಭವಿಸಿದೆ. ಲಂಡನ್‌ನ ಚಾಥಂ ಹೌಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ಜೈಶಂಕರ್ ವಾಪಸ್ ಹೋಗುತ್ತಿದ್ದಾಗ ಅವರ ಬೆಂಗಾವಲು ಪಡೆ ವಾಹನದತ್ತ ನುಗ್ಗಿದ ಖಲಿಸ್ತಾನಿ ಪರ ಪ್ರತಿಭಟನಾಕಾರನೊಬ್ಬ ಭಾರತದ ಧ್ವಜ ಹರಿದು ಧಾರ್ಷ್ಟ್ಯ ಮೆರೆದಿದ್ದಾನೆ. ಈ ಭದ್ರತಾ ವೈಫಲ್ಯದ ಕುರಿತು ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಪ್ರತಿಭಟನಾಕಾರನೊಬ್ಬ ಜೈಶಂಕರ್ ಅವರ ಬೆಂಗಾವಲು ಪಡೆಯ ಕಾರಿನತ್ತ ನುಗ್ಗಿದ್ದು, ಪೊಲೀಸರು ಆರಂಭದಲ್ಲಿ ಆತನನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಈ ವೇಳೆ ಆತ ಪೊಲೀಸರ ಎದುರೇ ಭಾರತದ ತ್ರಿವರ್ಣ ಧ್ವಜ ಹರಿದು, ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗಿದ. ಈ ಸಂದರ್ಭದಲ್ಲಿ ಎಚ್ಚೆತ್ತ ಪೊಲೀಸರು ಆ ವ್ಯಕ್ತಿ ಮತ್ತು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ಲಂಡನ್‌ನ ಚಾಥಂ ಹೌಸ್‌ನಲ್ಲಿ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮೈ ಅವರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ಜೈಶಂಕರ್ ಹೊರಬರುತ್ತಿದ್ದಾಗ ಈ ಘಟನೆ ನಡೆದಿದೆ.
ಭಾರತ ಆಕ್ರೋಶ:
ಭಾರತದ ವಿದೇಶಾಂಗ ಸಚಿವಾಲಯವು ಭದ್ರತಾ ವೈಫಲ್ಯ ಕುರಿತು ಖಂಡನೆ ವ್ಯಕ್ತಪಡಿಸಿದೆ. ನಾವು ಭದ್ರತೆ ಉಲ್ಲಂಘನೆಯ ವಿಡಿಯೋ ನೋಡಿದ್ದೇವೆ. ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಸಣ್ಣ ಗುಂಪೊಂದರ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ. ಬ್ರಿಟನ್ ಸರ್ಕಾರ ಈ ಕುರಿತು ಕ್ರಮ ಕೈಕೊಂಡು ರಾಜತಾಂತ್ರಿಕ ಬಾಧ್ಯತೆ ಪಾಲಿಸುವ ವಿಶ್ವಾಸವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಬ್ರಿಟನ್ ಖಂಡನೆ:
ಈ ನಡುವೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಮೇಲೆ ಖಲಿಸ್ತಾನಿಗಳು ದಾಳಿ ಮಾಡಲು ಪ್ರಯತ್ನಿಸಿದ ಘಟನೆಯನ್ನು ಖಂಡಿಸಿರುವ ಬ್ರಿಟನ್, ಈ ಕುರಿತು ಸೂಕ್ತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟನ್ ವಿದೇಶಾಂಗ ಸಚಿವಾಲಯ ‘ಭಾರತದ ವಿದೇಶಾಂಗ ಸಚಿವ ಜೈಶಂಕರ್ ಯುಕೆ ಭೇಟಿಯ ಸಮಯದಲ್ಲಿ ಭದ್ರತಾ ಉಲ್ಲಂಘನೆಯ ದೃಶ್ಯಗಳನ್ನು ನೋಡಿದ್ದೇವೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಬ್ರಿಟನ್ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಎತ್ತಿಹಿಡಿದರೂ, ಸಾರ್ವಜನಿಕ ಕಾರ್ಯಕ್ರಮಗಳನ್ನು ಬೆದರಿಸುವ ಅಥವಾ ಅಡ್ಡಿಪಡಿಸುವ ಯಾವುದೇ ಪ್ರಯತ್ನಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳ ಈ ಪ್ರಚೋದನಕಾರಿ ಚಟುವಟಿಕೆಗಳನ್ನು ಖಂಡಿಸುತ್ತೇವೆ’ ಎಂದಿದೆ.
- ವಿದೇಶಾಂಗ ಸಚಿವರ ಲಂಡನ್ ಭೇಟಿ ವೇಳೆ ದುಸ್ಸಾಹಸ
- ಸಚಿವರ ಬೆಂಗಾವಲು ಕಾರಿನತ್ತ ನುಗ್ಗಿದ ಪ್ರತಿಭಟನಾಕಾರ
- ತ್ರಿವರ್ಣ ಧ್ವಜ ಹರಿದು, ಖಲಿಸ್ತಾನಿ ಉಗ್ರರ ಪರ ಘೋಷಣೆ
- ಭದ್ರತಾ ವೈಫಲ್ಯಕ್ಕೆ ಮೋದಿ ಸರ್ಕಾರ ಕಿಡಿ । ಬ್ರಿಟನ್ ವಿಷಾದ
ದಾಳಿ ನಡೆದಿದ್ದು ಹೇಗೆ?
- ಲಂಡನ್‌ನ ಚಾಥಂ ಹೌಸಲ್ಲಿ ನಡೆದ ಸಭೆ ಮುಗಿಸಿ ಜೈಶಂಕರ್ ವಾಪಸ್ ಹೋಗುತ್ತಿದ್ದರು
- ಆಗ ಅವರ ಬೆಂಗಾವಲು ಪಡೆ ವಾಹನದತ್ತ ನುಗ್ಗಿದ ಖಲಿಸ್ತಾನಿ ಪರ ಪ್ರತಿಭಟನಾಕಾರ
- ಭಾರತ ವಿರೋಧಿ ಘೋಷಣೆ ಕೂಗುತ್ತ ತ್ರಿವರ್ಣ ಧ್ವಜ ಹಿಡಿದು ನುಗ್ಗಿದ ಖಲಿಸ್ತಾನಿ ಉಗ್ರ
- ಬಳಿಕ ತ್ರಿವರ್ಣ ಧ್ಬಜ ಹರಿದು ದಾರ್ಷ್ಟ್ಯ । ಆದರೂ ಆತನ ತಡೆಯಲು ಪೊಲೀಸರ ಹಿಂದೇಟು
- ಇಷ್ಟೆಲ್ಲ ಆದ ಬಳಿಕ ಪೊಲೀಸರ ವಶಕ್ಕೆ ಉಗ್ರ । ಆದರೂ ಈವರೆಗೂ ದಾಖಲಾಗದ ಕೇಸು