ಸಾರಾಂಶ
ನವದೆಹಲಿ: ಚುನಾವಣಾ ಪ್ರಚಾರದ ವೇಳೆ ಖಲಿಸ್ತಾನಿ ಉಗ್ರರ ಗುಂಪು ತಮ್ಮ ಮೇಲೆ ದಾಳಿ ನಡೆಸಬಹುದು ಎಂಬ ಗುಪ್ತಚರ ವರದಿಯ ಕುರಿತು ತಮಗೆ ಯಾವುದೇ ಆತಂಕ ಇಲ್ಲ ಎಂದು ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅವರು, ದೇವರ ರಕ್ಷಣೆಯಲ್ಲಿರುವವರನ್ನು ಯಾರೂ ಹತ್ಯೆ ಮಾಡಲು ಆಗುವುದಿಲ್ಲ. ನನ್ನೊಂದಿಗೆ ದೇವರಿದ್ದಾನೆ. ನನ್ನ ಜೀವಿತಾವಧಿ ಇರುವವರೆಗೂ ನಾನು ಬದುಕುತ್ತೇನೆ. ಅವಧಿ ಮುಗಿದ ಮೇಲೆ ದೇವರೇ ಕರೆಸಿಕೊಳ್ಳುತ್ತಾನೆ. ಅಲ್ಲಿವರೆಗೆ ದೇವರು ನನ್ನನ್ನು ರಕ್ಷಿಸುತ್ತಾನೆ’ ಎಂದು ಹೇಳಿದರು.
ಮದ್ಯ ಹಗರಣದಲ್ಲಿ ಕೇಜ್ರಿ, ಸಿಸೋಡಿಯಾ ವಿಚಾರಣೆಗೆ ಇ.ಡಿ.ಗೆ ಕೇಂದ್ರ ಅನುಮತಿ
ನವದೆಹಲಿ: ದೆಹಲಿ ಮದ್ಯ ಲೈಸೆನ್ಸ್ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಸಂಬಂಧ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾರನ್ನು ವಿಚಾರಣೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.ಇದು, ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಆಪ್‌ಗೆ ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಕೇಜ್ರಿವಾಲ್ ಮತ್ತು ಸಿಸೋಡಿಯಾಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಇದೇ ಪ್ರಕರಣದಲ್ಲಿ ಈಗಾಗಲೇ ಸಿಬಿಐ ಮತ್ತು ಇ.ಡಿ, ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಇ.ಡಿ. ಕೂಡಾ ಪ್ರಕರಣದ ಬಗ್ಗೆ ಆರೋಪ ಪಟ್ಟಿ ಸಲ್ಲಿಸಿದ್ದ ಕೇಜ್ರಿವಾಲ್‌ರನ್ನು ಬಂಧಿಸಿತ್ತು. ಸದ್ಯ ಜಾಮೀನಿನ ಮೇಲೆ ಕೇಜ್ರಿವಾಲ್ ಮತ್ತು ಸಿಸೋಡಿಯಾ ಬಿಡುಗಡೆಯಾಗಿದ್ದಾರೆ.ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ಸಿಬಿಐ, ಇ.ಡಿಯಂಥ ಸಂಸ್ಥೆಗಳೇ ಕೈಗೆತ್ತಿಕೊಳ್ಳಬೇಕು ಎಂದು ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಕರಣವೊಂದರ ವೇಳೆ ಸುಪ್ರೀಂಕೋರ್ಟ್ ಹೇಳಿತ್ತು. ಅದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಈ ಅನುಮತಿ ನೀಡಿದೆ.
ಕಾಡ್ಗಿಚ್ಚು ಹಿನ್ನೆಲೆ: ಆಸ್ಕರ್ ಇತಿಹಾಸದಲ್ಲೇ ಮೊದಲ ಬಾರಿ ಕಾರ್ಯಕ್ರಮ ರದ್ದು?
ಲಾಸ್ ಏಂಜಲೀಸ್: ಕಾಡ್ಗಿಚ್ಚಿನ ಹಿನ್ನೆಲೆ ಮಾ.3ರಂದು ನಡೆಯಬೇಕಿದ್ದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಘೋಷಣ ಕಾರ್ಯಕ್ರಮವೇ ರದ್ದಾಗುವ ಸಾಧ್ಯತೆ ಎಂದು ವರದಿಗಳು ತಿಳಿಸಿವೆ. ಒಂದು ವೇಳೆ ಇದು ನಿಜವಾದರೆ ಇತಿಹಾಸದಲ್ಲೇ ಇಂಥ ಬೆಳವಣಿಗೆ ಮೊದಲನೆಯದ್ದು ಎನ್ನಿಸಲಿದೆ. ಜನರು ನೋವಿನಲ್ಲಿರುವಾಗ ಆಚರಣೆ ಕಷ್ಟ. ಬೆಂಕಿ ಕಡಿಮೆಯಾದರೂ, ಜನರು ತಿಂಗಳುಗಟ್ಟಲೇ ಆ ನೋವಿನಲ್ಲಿ ಇರುತ್ತಾರೆ ಎನ್ನುವುದು ವಾಸ್ತವ. ಆದ್ದರಿಂದ ಸರಿಯಾದ ಅವಕಾಶಗಳು ಒದಗಿದಾಗ ಸಂತ್ರಸ್ಥರ ನೆರವಿಗಾಗಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ’ ಎಂದು ದ ಸನ್ ಪತ್ರಿಕೆ ವರದಿ ಮಾಡಿದೆ. ಕಾಡ್ಗಿಚ್ಚಿನ ಪರಿಣಾಮ ಜ.17ಕ್ಕೆ ನಿಗದಿಯಾಗಿದ್ದ ಆಸ್ಕರ್ ನಾಮರ್ದೇಶಿತ ಹೆಸರು ಘೋಷಣೆಯನ್ನು ಜ.19ಕ್ಕೆ ಮುಂದೂಡಲಾಗಿತ್ತು.
ಅಮೆರಿಕದಲ್ಲಿ ಕಾರ್ಯಾಚರಣೆ ಸ್ಥಗಿತಕ್ಕೆ ಟಿಕ್‌ಟಾಕ್ ಸಜ್ಜು: ಮಸ್ಕ್ ಖರೀದಿ ವದಂತಿ
ವಾಷಿಂಗ್ಟನ್: ಭಾರತದಲ್ಲಿ ಈಗಾಗಲೇ ಬ್ಯಾನ್ ಆಗಿರುವ ಚೀನೀ ಆ್ಯಪ್ ಟಿಕ್‌ಟಾಕ್ ಭಾನುವಾರ ಅಮೆರಿಕದಿಂದಲೂ ನಿರ್ಗಮಿಸಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಅಮೆರಿಕ ಜಾರಿಗೆ ತಂದಿದ್ದ ಕಾನೂನಿನ ಪ್ರಕಾರ, ಟಿಕ್‌ಟಾಕ್ ಅಮೆರಿಕ ಕಂಪನಿಗೆ ಮಾರುವ ಅನ್ನು ಮಾರುವ ಅಥವಾ ಜ.19ರೊಳಗೆ ಮುಚ್ಚುವ ಆಯ್ಕೆಯನ್ನು ಅದರ ಮಾಲೀಕ ಬೈಟ್‌ಡ್ಯಾನ್ಸ್ ಮುಂದಿಡಲಾಗಿತ್ತು. ಒಂದು ವೇಳೆ ಜ.19ರೊಳಗೆ ಸುಪ್ರೀಂಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ನೀಡದೇ ಇದ್ದಲ್ಲಿ ಜ.19ರ ಬಳಿಕ ಅಮೆರಿಕದಲ್ಲಿ ಟಿಕ್‌ಟಾಕ್ ಸೇವೆ ರದ್ಧಾಗಲಿದೆ. ಈ ನಡುವೆ ಟಿಕ್‌ಟಾಕ್ ಅನ್ನು ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಖರೀದಿಸಲಿದ್ದಾರೆ ಎಂದು ವರದಿಗಳು ಹೇಳಿವೆಯಾದರೂ ಇದನ್ನೂ ಚೀನಾ ಕಂಪನಿಯಾಗಲಿ, ಮಸ್ಕ್ ಖಚಿತಪಡಿಸಿಲ್ಲ.