ಭಾರತ ವಿರೋಧಿ ನಿಲುವು ಹೊಂದಿರುವ ಖಲಿಸ್ತಾನಿ ವಿರುದ್ಧ ಅಮೆರಿಕ, ನ್ಯೂಜಿಲೆಂಡ್‌ಗೆ ಭಾರತ ದೂರು

| N/A | Published : Mar 18 2025, 12:34 AM IST / Updated: Mar 18 2025, 05:28 AM IST

ಸಾರಾಂಶ

ಭಾರತ ವಿರೋಧಿ ನಿಲುವು ಹೊಂದಿರುವ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತವು ಅಮೆರಿಕ ಮತ್ತು ನ್ಯೂಜಿಲೆಂಡ್‌ಗೆ ಆಗ್ರಹಿಸಿದೆ. 

ನವದೆಹಲಿ: ಭಾರತ ವಿರೋಧಿ ನಿಲುವು ಹೊಂದಿರುವ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತವು ಅಮೆರಿಕ ಮತ್ತು ನ್ಯೂಜಿಲೆಂಡ್‌ಗೆ ಆಗ್ರಹಿಸಿದೆ. ನ್ಯೂಜಿಲೆಂಡ್‌ ಪ್ರಧಾನಿ ಭೇಟಿ ವೇಳೆ ಪ್ರಧಾನಿ ಮತ್ತು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಭೇಟಿ ವೇಳೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಈ ಆಗ್ರಹ ಮಾಡಿದ್ದಾರೆ.

ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಪರ್ ಲಕ್ಸನ್ ಅವರನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದರು. ಈ ವೇಳೆ ನ್ಯೂಜಿಲೆಂಡ್‌ನಲ್ಲಿ ಕೆಲವು ಕಾನೂನುಬಾಹಿರ ಶಕ್ತಿಗಳ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ, ಅಲ್ಲದೇ ಖಲಿಸ್ತಾನಿಗಳನ್ನು ಮಟ್ಟ ಹಾಕಲು ನ್ಯೂಜಿಲೆಂಡ್ ಸರ್ಕಾರದ ಸಹಾಯ ಕೋರಿದ್ದಾರೆ.

ಇನ್ನು ಭಾರತ ಪ್ರವಾಸದಲ್ಲಿರುವ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್‌ ಜೊತೆಗಿನ ಭೇಟಿ ವೇಳೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಖಲಿಸ್ತಾನಿ ವಿಚಾರ ಪ್ರಸ್ತಾಪಿಸಿದ್ದಾರೆ. ಅಮೆರಿಕದಲ್ಲಿ ಖಲಿಸ್ತಾನಿ ಸಂಘಟನೆ ಸಿಖ್‌ ಫಾರ್‌ ಜಸ್ಟೀಸ್‌ನ ಭಾರತ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಸಲಹೆ ನೀಡಿದ್ದಾರೆ.

ತುಳಸಿಗೆ ಕುಂಭಮೇಳದ ಗಂಗಾಜಲ ಉಡುಗೊರೆ ನೀಡಿದ ಪ್ರಧಾನಿ ಮೋದಿ 

ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್‌, ಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಈ ವೇಳೆ ತುಳಸಿ ಅವರಿಗೆ ಮೋದಿ ಮಹಾಕುಂಭ ಮೇಳದ ಪವಿತ್ರ ಗಂಗಾಜಲವನ್ನು ನೀಡಿದರು. ಇನ್ನು ಇದೇ ವೇಳೆ ತುಳಸಿ ಭಾರತದ ಪ್ರಧಾನಿಗೆ ತುಳಸಿ ಮಣಿಗಳನ್ನು ಉಡುಗೊರೆಯಾಗಿ ನೀಡಿದರು.

 ತುಳಸಿ ಗಬ್ಬಾರ್ಡ್‌ ಭಾರತೀಯ ಮೂಲದವರಲ್ಲ. ಆದರೆ ಅವರು ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಾರೆ.ಇತ್ತೀಚಿನ ತಮ್ಮ ಮಾರಿಷಸ್‌ ಪ್ರವಾಸದ ವೇಳೆಯೂ ಅಲ್ಲಿನ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಕುಂಭಮೇಳದ ಪವಿತ್ರ ಜಲ ನೀಡಿದ್ದರು.