ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕ್ಷಯಮುಕ್ತ ಭಾರತಕ್ಕೆ ಕೈಜೋಡಿಸಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ವೈದ್ಯಾಧಿಕಾರಿ ಡಾ.ಎಂ.ಎಸ್. ಬಸವರಾಜು ಕರೆ ನೀಡಿದರು.ಯುವರಾಜ ಕಾಲೇಜು ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ಭಾರತದಲ್ಲಿ ಪ್ರತಿದಿನ ಸುಮಾರು 60 ಸಾವಿರ ಮಂದಿ ಕ್ಷಯರೋಗದ ಸೋಂಕಿಗೆ ತುತ್ತಾಗುತ್ತಿದ್ದಾರೆ. ಸುಮಾರು ಆರು ಸಾವಿರ ಜನರಿಗೆ ಕ್ಷಯರೋಗ ಉಲ್ಭಣವಾಗುತ್ತಿದೆ. ಸುಮಾರು ಆರು ನೂರು ಜನ ಕ್ಷಯರೋಗದಿಂದ ಮರಣ ಹೊಂದುತ್ತಿದ್ದಾರೆ. ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿನ್ ಎಂಬ ರೋಗಾಣುವಿನಿಂದ ಹರಡುತ್ತದೆ. ಒಬ್ಬರಿಂದ ಮತ್ತೊಬ್ಬರಿಗೆ ರೋಗಿಯು ಉಗಿಯುವ ಕಫದಲ್ಲಿನ ರೋಗಾಣು ಗಾಳಿಯ (ಉಸಿರಾಟ) ಮೂಲಕ ಹರಡುತ್ತದೆ ಎಂದರು.ಪರಿಣಾಮಕಾರಿ ಚಿಕಿತ್ಸೆಯಿಂದ ಕ್ಷಯರೋಗವನ್ನು ಗುಣಪಡಿಸಬಹುದಾಗಿದೆ.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಇದರಲ್ಲಿ ಜನ ಸಮುದಾಯದ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯ. ಮುಖ್ಯವಾಗಿ ವಿದ್ಯಾರ್ಥಿಯುವ ಸಮುದಾಯ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಕ್ಷಯರೋಗ ನಿರ್ಮೂಲನೆಗೆ ಮುಂದಾಗಬೇಕು. ಸಾಮಾನ್ಯ ಜನರಿಗೆ ಕ್ಷಯರೋಗದ ಬಗ್ಗೆ ಅರಿವು ಮೂಡಿಸಬೇಕು. ಎಲ್ಲರೂ ಕೈಜೋಡಿಸಿದಾಗ ಮಾತ್ರವೇ ಭಾರತ ರೋಗ ಮುಕ್ತದೇಶವಾಗುತ್ತದೆ, ಆರೋಗ್ಯಕರ ಭಾರತವಾಗುತ್ತದೆ ಎಂದರು.ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ಆಡಳಿತಾಧಿಕಾರಿ ಡಾ.ಕೆ. ಅಜಯಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ನಾಗೇಶ್ ಬಾಬು, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಂ. ವೆಂಕಟೇಶ್, ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಎಸ್. ಜಯಂತ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕರಾದ ಟಿ.ಎಸ್. ನಾಗರಾಜು ಇದ್ದರು.
ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಉಪನ್ಯಾಸಮೈಸೂರು: ನಗರದ ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಮಾ. 20, 22 ಹಾಗೂ 23ರಂದು ಸ್ವಾಮಿ ಶಾಂಭವಾನಂದಜೀ ಸ್ಮಾರಕ ಸಭಾಂಗಣದಲ್ಲಿ ಪ್ರತಿದಿನ ಸಂಜೆ 6 ರಿಂದ 6.50ರವರೆಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಮಾ. 20ರಂದು ಶ್ರೀಮದ್ಭಗವದ್ಗೀತಾ ವಿಷಯ ಕುರಿತು ಸ್ವಾಮಿ ಜ್ಞಾನಯೋಗಾನಂದ, ಮಾ. 22ರಂದು ಇನ್‌ಸೈಟ್ಸ್‌ಫರ್ಮ್ ಪ್ಯಾರಬಲ್ಸ್ ಆಫ್ ಶ್ರೀ ರಾಮಕೃಷ್ಣ -3 ವಿಷಯ ಕುರಿತು ಸ್ವಾಮಿ ಮಹೀಪಾಲಾನಂದ ಅವರು ಇಂಗ್ಲಿಷ್ ನಲ್ಲಿ ಹಾಗೂ ಮಾ. 23ರಂದು ಶ್ರೀಮಾತೆ ಶಾರದಾದೇವಿ ವಿಷಯ ಕುರಿತು ಸ್ವಾಮಿ ಯುಕ್ತೇಶಾನಂದ ಅವರು ಉಪನ್ಯಾಸ ನೀಡುವರು.