ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಬಿಟ್ಟು ಶರಣರ ವಚನ, ದಾಸರ ಕೀರ್ತನ ಕೇಳಿಸುವುದು ಹಾಗೂ ಕಲಿಸುವುದು ಪ್ರತಿಯೊಬ್ಬ ತಂದೆ-ತಾಯಂದಿರ ಕರ್ತವ್ಯ

ಕೊಪ್ಪಳ: ಒತ್ತಡದ ಜೀವನದಲ್ಲಿ ಸಂಗೀತ ಕಲಿಕೆ, ಕೇಳುವುದರಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ. ಇದರಿಂದ ಸಂಸ್ಕಾರ ಬರುತ್ತದೆ ಎಂದು ಶ್ರೀಗುರುಕೃಪಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ದಾನಪ್ಪ ಕವಲೂರು ಹೇಳಿದರು.

ಇಲ್ಲಿನ ಬಿಟಿ ಪಾಟೀಲ್‌ ನಗರದ ಶ್ರೀಸಿದ್ಧಿವಿನಾಯಕ ದೇವಸ್ಥಾನದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಭಾಗ್ಯನಗರದ ಶ್ರೀಗುರುಕೃಪಾ ಸಂಗೀತ ಹಾಗೂ ಕಲಾ ಸಂಘದ ಹತ್ತನೇ ವಾರ್ಷಿಕೋತ್ಸವ ಹಾಗೂ ಪಂಡಿತ ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯಸ್ಮರಣೆಯ ನಾದ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತ ದತ್ತು ಕಮ್ಮಾರ ಮಾತನಾಡಿ, ಮಕ್ಕಳು ಓದಿನ ಜತೆಗೆ ಸಂಗೀತ ಕಲಿಯುವುದನ್ನು ರೂಢಿಸಿಕೊಳ್ಳಬೇಕು ಎಂದರು.

ವಿಶ್ವಗುರು ಶ್ರೀಬಸವೇಶ್ವರ ಟ್ರಸ್ಟಿನ ಮುಖಂಡ ರಾಜೇಶ್ ಸಸಿಮಠ ಮಾತನಾಡಿ, ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಬಿಟ್ಟು ಶರಣರ ವಚನ, ದಾಸರ ಕೀರ್ತನ ಕೇಳಿಸುವುದು ಹಾಗೂ ಕಲಿಸುವುದು ಪ್ರತಿಯೊಬ್ಬ ತಂದೆ-ತಾಯಂದಿರ ಕರ್ತವ್ಯ. ಇಂತಹ ಸಂಸ್ಕಾರದಿಂದ ಮಕ್ಕಳು ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಕಲಾವಿದ ಮಹಾದೇವಪ್ಪ ವಂದಾಲ್ ಹಾಗೂ ಶ್ರೀನಿವಾಸ್ ಜೋಶಿ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಆಕಾಶವಾಣಿ ಕಲಾವಿದೆ ಪುಷ್ಪಾವತಿ ಹೊಸಪೇಟೆ ಸಂಗೀತ ಪ್ರಸ್ತುತಪಡಿಸಿದರು. ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ಗುರು ವೀರೇಶ ಹಿಟ್ನಾಳ ಹಾರ್ಮೋನಿಯಂ, ರಾಘವೇಂದ್ರ ಗಂಗಾವತಿ,ರಿಜ್ವಾನ್ ಮುದ್ದಾಬಳ್ಳಿ ತಬಲಾ, ಮಧು ಕವಲೂರು, ಸಮೃದ್ಧಿ ಬೆನ್ನಾಳ್ ತಾಳದಲ್ಲಿ ಸಾಥ್‌ ನೀಡಿದರು.

ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶ್ರೀಗುರುಕೃಪಾ ಸಂಗೀತ ಹಾಗೂ ಸಾಂಸ್ಕೃತಿಕ ಕಲಾಸಂಘದ ಕಾರ್ಯದರ್ಶಿ ಶಕುಂತಲಾ ಬೆನ್ನಾಳ, ಸ್ಪಂದನಾ ಹಿಂದಲಮನಿ, ವೈಭವಿ ಕೋಡ್ಬಳೆ ಸೇರಿದಂತೆ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.