ನವದೆಹಲಿ : ದಂಗೆಪೀಡಿತ ನೇಪಾಳದಲ್ಲಿ ಬೆಂಗಳೂರಿನ 20 ಮಂದಿ ಸೇರಿದಂತೆ ದೇಶದ ವಿವಿಧ ಭಾಗಗಳ ಸುಮಾರು 150ಕ್ಕೂ ಅಧಿಕ ಪ್ರವಾಸಿಗರು ಸಿಲುಕಿಕೊಂಡಿರುವುದು ವರದಿಯಾಗಿದೆ. ಈ ಪೈಕಿ ಮೂಲತಃ ಚೆನ್ನೈನವರಾಗಿರುವ ಪ್ರಸ್ತುತ ಬೆಂಗಳೂರು ಉದ್ಯೋಗಿ ಗೌರಿ ಕೆ. ಎಂಬುವವರು ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದು, ಎಲ್ಲೆಡೆ ಅರಾಜಕತೆ ಇದೆ. ನಾವು ಇರುವ ಹೋಟೆಲ್‌ನಿಂದ ಹೊರಬರಲೂ ಭಯವಾಗ್ತಿದೆ ಎಂದಿದ್ದಾರೆ.
ಗೌರಿ ತಮ್ಮ ಸೋದರಿಯೊಂದಿಗೆ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. ಈ ವೇಳೆ ನೇಪಾಳದಲ್ಲಿ ದಂಗೆ ಆರಂಭವಾಗಿದೆ. ಕಾಠ್ಮಂಡುವಿನ ಹೋಟೆಲೊಂದರಲ್ಲಿ ಅನೇಕ ಭಾರತೀಯ ಪ್ರವಾಸಿಗರೊಂದಿಗೆ ಸಿಲುಕಿರುವ ಅವರು, ಭಾರತಕ್ಕೆ ಮರಳಲು ವಿಮಾನವಿಲ್ಲದೆ ಪರದಾಡುತ್ತಿದ್ದಾರೆ.
‘ಬುಧವಾರ ಭಾರತಕ್ಕೆ ಬರಲು ವಿಮಾನ ನಿಗದಿಯಾಗಿತ್ತು. ಆದರೆ ಸಂಘರ್ಷದಿಂದಾಗಿ ಎಲ್ಲ ವಿಮಾನಯಾನ ಸಂಸ್ಥೆಗಳು ಸೇವೆಗಳನ್ನು ರದ್ದುಗೊಳಿಸಿವೆ. ಬೆಂಗಳೂರಿನ 20 ಮಂದಿ ಸೇರಿದಂತೆ 150ಕ್ಕೂ ಅಧಿಕ ಪ್ರವಾಸಿಗರು ಕಾಠ್ಮಂಡುವಿನ ಹೊಟೆಲ್‌ನಲ್ಲಿ ಸಿಲುಕಿಕೊಂಡಿದ್ದೇವೆ. ನಮ್ಮ ಟೂರಿಸ್ಟ್ ಏಜೆನ್ಸಿ ಮಂಗಳವಾರದವರೆಗೆ ಮಾತ್ರ ಹೊಟೆಲ್ ಬುಕ್ ಮಾಡಿದೆ. ವಿಮಾನಗಳು ರದ್ದಾಗಿರುವುದರಿಂದ ನಾವು ಹೊರಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ಗೌರಿ ತಿಳಿಸಿದ್ದಾರೆ.
ಅಲ್ಲಿನ ಸಂಘರ್ಷ ಪರಿಸ್ಥಿತಿಯನ್ನು ವಿವರಿಸಿದ ಅವರು, ‘ಎಲ್ಲೆಡೆ ಸಂಪೂರ್ಣ ಅರಾಜಕತೆ ಇತ್ತು. ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದ ಕಟ್ಟಡಗಳಿಂದ ಹೊಗೆ ಬರುತ್ತಿತ್ತು. ಕರ್ಫ್ಯೂ ಜಾರಿಯಲ್ಲಿದ್ದರೂ, ಯುವಕರು ಮುಕ್ತವಾಗಿ ಓಡಾಡುತ್ತಿದ್ದರು. ಆಗಾಗ ಗುಂಡಿನ ಸದ್ದು ಕೇಳಿಸುತ್ತಿತ್ತು. ಕರ್ಫ್ಯೂ ಜಾರಿಯಲ್ಲಿದ್ದ ಕಾರಣ ಬುಧವಾರ ಪರಿಸ್ಥಿತಿ ಸ್ವಲ್ಪ ಶಾಂತಿಯುತವಾಗಿತ್ತು, ಆದರೆ ಬಂದೂಕುಧಾರಿ ವಿದ್ಯಾರ್ಥಿಗಳು ಇನ್ನೂ ರಸ್ತೆಗಳಲ್ಲಿ ಓಡಾಡುತ್ತಿದ್ದರು. ವಿಮಾನ ಸೇವೆಗಳ ಪುನಾರಂಭಕ್ಕಾಗಿ ನಾವು ಪ್ರಾರ್ಥಿಸುತ್ತಿದ್ದೇವೆ. ಕಾಠ್ಮಂಡುವಿನಿಂದ ನವದೆಹಲಿಗೆ ವಿಮಾನಯಾನ ಸಂಸ್ಥೆಗಳು ಭಾರಿ ಬೆಲೆಗಳನ್ನು ವಿಧಿಸುವ ಮೂಲಕ ಮಾರಕ ಅವ್ಯವಹಾರ ನಡೆಸುತ್ತಿವೆ ಎಂದು ಕೇಳಲ್ಪಟ್ಟಿದ್ದೇನೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸಿಲುಕಿದ 700 ಭಾರತೀಯರ ರಕ್ಷಣೆಗೆ ವಿಶೇಷ ವಿಮಾನ?
ಕಾಠ್ಮಂಡು: ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರವು ಸೆಪ್ಟೆಂಬರ್ 10, ಸಂಜೆ 5 ಗಂಟೆಯಿಂದ ಕಾಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮತ್ತೆ ತೆರೆದಿದೆ. ಇದರಿಂದಾಗಿ ಇಲ್ಲಿ ಸಿಲುಕಿರುವ ಸುಮಾರು 700 ಭಾರತೀಯರು ಸೇರಿ ಸಾವಿರಾರು ಜನರಿಗೆ ನಿರಾಳತೆ ಉಂಟಾಗಿದೆ. ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡುವ ಸಾಧ್ಯತೆ ಕೂಡ ಇದೆ ಎಂದು ಮೂಲಗಳು ಹೇಳಿವೆ. ಮಂಗಳವಾರದ ಗಲಾಟೆ ಕಾರಣ ಏರ್ ಇಂಡಿಯಾ, ಇಂಡಿಗೋ, ನೇಪಾಳ ಏರ್‌ಲೈನ್ಸ್ ವಿಮಾನಗಳು ಕಾಠ್ಮಂಡುವಿಗೆ ಸಂಚಾರ ನಿಲ್ಲಿಸಿದ್ದವು.
ರಕ್ಷಿಸಿ: ಭಾರತೀಯ ವಾಲಿಬಾಲ್ ಪಟು ಅಳು!
ವಾಲಿಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತದಿಂದ ತೆರಳಿದ್ದ ವಾಲಿಬಾಲ್ ಪಟು ಉಪಸ್ಥಾ ಗಿಲ್ ನೇಪಾಳದಲ್ಲಿ ಸಿಲುಕಿ ಪರದಾಡುತ್ತಿದ್ದಾಳೆ. ತನ್ನನ್ನು ರಕ್ಷಿಸಿ ಎಂದು ನೇಪಾಳದಲ್ಲಿ ಅಶಾಂತಿ ಮೂರನೇ ದಿನವೂ ಮುಂದುವರಿದಿದ್ದು, ತನ್ನನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಳುತ್ತಲೇ ಮನವಿ ಮಾಡಿಕೊಂಡಿದ್ದಾಳೆ.