;Resize=(412,232))
ವಾಷಿಂಗ್ಟನ್: 40 ದಿನಗಳ ಮಧ್ಯಪ್ರಾಚ್ಯ ಯುದ್ಧಕ್ಕೆ ಪೂರ್ಣವಿರಾಮ ಹಾಕುವ ನಿಟ್ಟಿನಲ್ಲಿ ಶನಿವಾರ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಸಂಧಾನ ಸಭೆಗೂ ಮುನ್ನ ಇರಾನ್‌ಗೆ ಮತ್ತೆ 24 ಗಂಟೆಗಳ ಡೆಡ್‌ಲೈನ್ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇರಾನಿಯನ್ನರ ಮುಂದೆ ಬೇರೆ ಯಾವುದೇ ಅವಕಾಶವೇ ಉಳಿದಿಲ್ಲ. ಇರಾನಿಯನ್ನರು ಬದುಕಿರೋದೇ ನಮ್ಮ ಜೊತೆ ಸಂಧಾನ ಮಾತುಕತೆ ನಡೆಸಲು. ಪಾಕ್ ಮಾತುಕತೆಯಲ್ಲಿ ಯಾವುದೇ ಡೀಲ್ ಹೊರಹೊಮ್ಮದೇ ಇದ್ದರೆ ನಾವು ಇರಾನ್ ಮೇಲೆ ಹಿಂದೆಂದಿಗಿಂತಲೂ ಭೀಕರ ದಾಳಿ ನಡೆಸುತ್ತೇವೆ’ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಈ ಮೂಲಕ ಸಂಧಾನದ ವೇಳೆ ನಮ್ಮ ಷರತ್ತು ಒಪ್ಪಿಕೊಳ್ಳದೆ ಇರಾನ್‌ಗೆ ಬೇರೆ ವಿಧಿಯಿಲ್ಲ ಎಂದು ನೇರವಾಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ಟ್ರುತ್ ಸೋಶಿಯಲ್‌ನಲ್ಲಿ ಶುಕ್ರವಾರ ರಾತ್ರಿ ಪೋಸ್ಟ್ ಮಾಡಿರುವ ಅವರು, ‘ಅಂತಾರಾಷ್ಟ್ರೀಯ ಜಲಮಾರ್ಗಗಳನ್ನು ಬಳಸಿಕೊಂಡು ಜಗತ್ತನ್ನು ಅಲ್ಪಾವಧಿಗೆ ಸುಲಿಗೆ ಮಾಡುವುದನ್ನು ಬಿಟ್ಟರೆ, ತಮ್ಮ ಬಳಿ ಏನೂ ಇಲ್ಲ ಎಂಬುದು ಇರಾನಿಯರಿಗೆ ಅರ್ಥವಾದಂತೆ ತೋರುತ್ತಿಲ್ಲ. ಅವರು ಇಂದು ಜೀವಂತವಾಗಿದ್ದಾರೆ ಎಂದರೆ ಅದು ಮಾತುಕತೆಯ ಒಂದೇ ಕಾರಣಕ್ಕೆ!’ ಎಂದು ಹೇಳಿದ್ದಾರೆ.
ಜೊತೆಗೆ ‘ನ್ಯೂಯಾರ್ಕ್ ಪೋಸ್ಟ್’ಗೆ ನೀಡಿರುವ ಪ್ರತ್ಯೇಕ ಸಂದರ್ಶನದಲ್ಲಿಯೂ ಇದರ ಬಗ್ಗೆಯೇ ಮಾತನಾಡಿರುವ ಟ್ರಂಪ್, ‘ಅವರು ಮಾತುಕತೆ ಒಪ್ಪಲೇ ಬೇಕು. ಇಲ್ಲದೆ ಹೋದಲ್ಲಿ ನಾವು ಮತ್ತೆ ದಾಳಿ ಆರಂಭಿಸಲಿದ್ದೇವೆ. ಇದಕ್ಕೆಂದೇ ಅಮೆರಿಕ ಯುದ್ಧ ಹಡಗುಗಳಿಗೆ ಭಾರೀ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ತುಂಬಿಸುತ್ತಿದ್ದೇವೆ. ನಾವು ಅವುಗಳನ್ನು ಪರಿಣಾಮಕಾರಿಯಾಗಿ ಬಳಸಲಿದ್ದೇವೆ’ ಎಂದು ಎಚ್ಚರಿಸಿದ್ದಾರೆ.
ಈ ನಡುವೆ ಮಧ್ಯವರ್ತಿ ಪಾಕಿಸ್ತಾನದಲ್ಲಿ ಅಮೆರಿಕ ಹಾಗೂ ಇರಾನ್ ಪ್ರತಿನಿಧಿಗಳು ಮುಖಾಮುಖಿಯಾಗಿ ಕುಳಿತು ಮಾತುಕತೆ ನಡೆಸಲು ವೇದಿಕೆ ಸಜ್ಜಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸಂಧಾನ ಮಾತುಕತೆ ನಿಗದಿಯಾಗಿದೆ. ಈ ಸಭೆಯಲ್ಲಿ ಅಮೆರಿಕವನ್ನು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಪ್ರತಿನಿಧಿಸಲಿದ್ದಾರೆ. ಈ ನಿಟ್ಟಿನಲ್ಲಿ ಅವರು ಶುಕ್ರವಾರವೇ ಪಾಕ್‌ನತ್ತ ಪ್ರಯಾಣ ಆರಂಭಿಸಿದ್ದಾರೆ. ಆದರೆ ಇದಕ್ಕೂ ಮುನ್ನ, ‘ಧನಾತ್ಮಕ ಮಾತುಕತೆಯ ನಿರೀಕ್ಷೆಯಿದೆ. ನಮ್ಮ ಜತೆ ಆಟ ಆಡಬೇಡಿ’ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ಪರವಾಗಿ ಅಮೆರಿಕದಲ್ಲಿರುವ ದೂತ ಭಾಗವಹಿಸಬಹುದು ಎನ್ನಲಾಗಿದೆ.
ಮತ್ತೊಂದೆಡೆ ಇರಾನ್‌ನಿಂದ 10 ಮಂದಿಯ ನಿಯೋಗ ಬರಲಿದೆ ಎಂದು ಪಾಕ್‌ಗೆ ಇರಾನ್ ರಾಯಭಾರಿ ರೆಜಾ ಅಮಿರ್ ಹೇಳಿದ್ದಾರೆ. ಆದರೆ ಯಾರ ನೇತೃತ್ವದಲ್ಲಿ ಯಾರ್ಯಾರು ಬರಲಿದ್ದಾರೆ ಎಂದು ತಿಳಿದಿಲ್ಲ. ಸಭೆಗೆ ಕೂರುವ ಮೊದಲೇ ಅಮೆರಿಕಕ್ಕೆ ಇರಾನ್ ಕೆಲ ಷರತ್ತುಗಳನ್ನು ವಿಧಿಸಿದೆ. ‘ನಿರ್ಬಂಧಿಸಲಾಗಿರುವ ಇರಾನ್‌ನ ಎಲ್ಲಾ ಆಸ್ತಿಗಳನ್ನು ಬಿಡುಗಡೆ ಮಾಡಬೇಕು. ಜತೆಗೆ ಕದನವಿರಾಮವನ್ನು ಲೆಬನಾನ್‌ಗೂ ವಿಸ್ತರಿಸಿ, ಅದರ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಲಾಗಿದೆ.
ಹೀಗೆ ಎಚ್ಚರಿಕೆ ಮತ್ತು ಷರತ್ತಿನ ನಡುವೆಯೇ ಸಂಧಾನ ಮಾತುಕತೆ ಆರಂಭವಾಗುತ್ತಿದ್ದು, ಅದರ ಬೆಳವಣಿಗೆ ಕುರಿತು ಇಡೀ ಜಗತ್ತಿನ ಕಣ್ಣು ನೆಟ್ಟಿದೆ.