ಕೊಲ್ಲಿ ಯುದ್ಧ ಆರಂಭ ಬಳಿಕ ಅಮೆರಿಕ-ಇರಾನ್‌ ನೇರಾನೇರ ಮಾತುಕತೆ

KannadaprabhaNewsNetwork |  
Published : Apr 10, 2026, 01:30 AM ISTUpdated : Apr 10, 2026, 04:26 AM IST
Donald Trump

ಸಾರಾಂಶ

ಅಮೆರಿಕ-ಇರಾನ್‌ ನಡುವೆ ಘೋಷಣೆಯಾಗಿರುವ 2 ವಾರಗಳ ತಾತ್ಕಾಲಿಕ ಕದನ ವಿರಾಮದ ಭಾಗವಾಗಿ, ಮಧ್ಯವರ್ತಿ ದೇಶವಾಗಿರುವ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ಎರಡೂ ದೇಶಗಳ ಪ್ರಮುಖರ ಉನ್ನತ ಮಟ್ಟದ ಸಂಧಾನ ಸಭೆ ನಡೆಯಲಿದೆ

 ಇಸ್ಲಾಮಾಬಾದ್‌ :  ಅಮೆರಿಕ-ಇರಾನ್‌ ನಡುವೆ ಘೋಷಣೆಯಾಗಿರುವ 2 ವಾರಗಳ ತಾತ್ಕಾಲಿಕ ಕದನ ವಿರಾಮದ ಭಾಗವಾಗಿ, ಮಧ್ಯವರ್ತಿ ದೇಶವಾಗಿರುವ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ಎರಡೂ ದೇಶಗಳ ಪ್ರಮುಖರ ಉನ್ನತ ಮಟ್ಟದ ಸಂಧಾನ ಸಭೆ ನಡೆಯಲಿದೆ. ಈ ಮೂಲಕ ಮಧ್ಯಪ್ರಾಚ್ಯ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನ ಆರಂಭವಾಗಲಿದೆ.

ಆದರೆ ಅದಕ್ಕಿಂತ ಮುಖ್ಯವಾಗಿ ‘ತಾತ್ಕಾಲಿಕ ಕದನ ವಿರಾಮದಲ್ಲಿ ಹಿಜ್ಬುಲ್ಲಾ ಉಗ್ರರ ನೆಲೆವೀಡಾಗಿರುವ ಲೆಬನಾನ್‌ ಇಲ್ಲ. ಅಲ್ಲಿ ದಾಳಿ ಮುಂದುವರಿಯಲಿದೆ’ ಎಂದು ಅಮೆರಿಕ ಹಾಗೂ ಇಸ್ರೇಲ್‌ ಹೇಳುತ್ತಿರುವುದು ಕದನವಿರಾಮವನ್ನು ತೂಗುಯ್ಯಾಲೆಯಲ್ಲಿ ಇರಿಸಿದೆ. ಆದರೆ ಲೆಬನಾನ್‌ ಕೂಡ ಕದನ ವಿರಾಮ ವ್ಯಾಪ್ತಿಗೆ ಒಳಪಡಬೇಕು ಎಂದು ಇರಾನ್‌ ಪಟ್ಟು ಹಿಡಿದಿದೆ. ಹೀಗಾಗಿ ಶಾಶ್ವತ ಕದನವಿರಾಮ ಘೋಷಣೆಗೆ ಈ ಬಿಕ್ಕಟ್ಟಿನ ಇತ್ಯರ್ಥ ಪ್ರಮುಖವಾಗಿದೆ. ಆದ ಕಾರಣ ಸಭೆಯ ಪರಿಣಾಮ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಫೆ.28ರಿಂದ ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದ ಬಳಿಕ ಅಮೆರಿಕ-ಇರಾನ್‌ ನಡುವೆ ನಡೆಯುತ್ತಿರುವ ಮೊದಲ ನೇರಾ ನೇರ ಮಾತುಕತೆ ಇದಾಗಿದೆ.

ಅಮೆರಿಕ ನಿಯೋಗದ ನೇತೃತ್ವವನ್ನು ಉಪ ರಾಷ್ಟ್ರಪತಿ ಜೆ.ಡಿ.ವ್ಯಾನ್ಸ್‌ ಅವರು ವಹಿಸಿಕೊಳ್ಳಲಿದ್ದು, ಇವರ ಜತೆಗೆ ಸ್ಪೀವ್ ವಿಟ್ಕಾಫ್‌, ಕುಶ್ನರ್‌ರಂಥ ಪ್ರಮುಖ ಅಧಿಕಾರಿಗಳು ಇರಲಿದ್ದಾರೆ. ಇರಾನ್ ನಿಯೋಗದಲ್ಲಿ 10 ಹಿರಿಯ ಅಧಿಕಾರಿಗಳು ಇರಲಿದ್ದಾರೆ.

ಶಾಶ್ವತ ಕದನವಿರಾಮ ಅಜೆಂಡಾ:

ಮೂಲಗಳ ಪ್ರಕಾರ, ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮಾತುಕತೆಯ ಆದ್ಯತೆ ದೀರ್ಘಕಾಲಿನ ಒಪ್ಪಂದದ ಕುರಿತೇ ಆಗಿರಲಿದೆ. ಈಗಾಗಲೇ ಮಾಡಿಕೊಂಡಿರುವ ತಾತ್ಕಾಲಿಕ ಕದನ ವಿರಾಮವನ್ನು ಮಧ್ಯಪ್ರಾಚ್ಯ ಸಂಘರ್ಷಕ್ಕೆ ಪೂರ್ಣವಿರಾಮ ಹಾಕಲು ಬಳಸಿಕೊಳ್ಳುವುದೇ ಈ ಸಭೆಯ ಉದ್ದೇಶವಾಗಿರಲಿದೆ. ಇರಾನ್‌ ಮೇಲಿನ ನಿರ್ಬಂಧ ತೆರವು, ಪ್ರಾದೇಶಿಕ ಭದ್ರತೆ, ಇರಾನ್‌ನ ಅಣು ಮತ್ತು ಕ್ಷಿಪಣಿ ಯೋಜನೆಯ ಭವಿಷ್ಯ ಕುರಿತು ಮಾತುಕತೆ ವೇಳೆ ಗಂಭೀರ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಈಗಾಗಲೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌, ಸೇನಾ ಮುಖ್ಯಸ್ಥ ಆಸೀಂ ಮುನೀರ್‌ ಮತ್ತು ಉಪ ಪ್ರಧಾನಿ ಇಷಕ್‌ ದಾರ್ ಅವರು ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್‌ ಸೇರಿ, ಹಲವು ಅಂತಾರಾಷ್ಟ್ರೀಯ ನಾಯಕರ ಜತೆಗೆ ಸಂಪರ್ಕದಲ್ಲಿದ್ದಾರೆ. ಸಭೆಯ ಯಶಸ್ಸಿನ ಕುರಿತು ಚರ್ಚೆ ನಡೆಸುತ್ತಿದ್ದಾರೆ.

ಈ ಸಭೆ ಹಿನ್ನೆಲೆಯಲ್ಲಿ ಈಗಾಗಲೇ ಇಸ್ಲಾಮಾಬಾದ್‌ನಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ಗುರುವಾರ, ಶುಕ್ರವಾರ ಎರಡು ದಿನ ರಜೆ ಘೋಷಿಸಲಾಗಿದೆ.

ಯಶಸ್ಸಿನ ಬಗ್ಗೆ ಅನುಮಾನ:

ಈ ನಡುವೆ, ಲೆಬನಾನ್‌ ಮೇಲಿನ ಇಸ್ರೇಲ್‌ ದಾಳಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆಯ ಯಶಸ್ಸಿನ ಕುರಿತು ಇರಾನ್‌ನ ಪಾಕಿಸ್ತಾನದ ರಾಯಭಾರಿ ರೇಜಾ ಅಮಿರಿ ಮೊಹಗ್ದಮ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಯುದ್ಧ ನಿಂತರೂ ವಿಶ್ವಕ್ಕೆ ತಪ್ಪದ ಹೋರ್ಮುಜ್‌ ಜಲಸಂಧಿ ಸಂಕಷ್ಟ
ಇರಾನ್‌ ಕದನ ವಿರಾಮಕ್ಕೆ ಬೇಡಿಕೊಂಡಿತು : ಹೆಗ್ಸೆತ್‌