ಯುದ್ಧಕ್ಕೆ ಎಂಟ್ರಿ ಆದ್ರೆ ದುಬೈ ನಾಶ : ಯುಎಇಗೆ ಅಮೆರಿಕ ತಜ್ಞ ಎಚ್ಚರಿಕೆ

Published : Mar 31, 2026, 11:46 AM IST
Iran

ಸಾರಾಂಶ

ಮಧ್ಯಪ್ರಾಚ್ಯ ಯುದ್ಧ ನಾನಾ ರೀತಿಯ ವಿನಾಶಕ್ಕೆ ಕಾರಣವಾಗುತ್ತಿರುವ ನಡುವೆಯೇ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಮೇಲೆ ಇರಾನ್‌ನ ಭೀಕರ ದಾಳಿಯ ಕುರಿತು ಅಮೆರಿಕ ಆರ್ಥಿಕ ತಜ್ಞರೊಬ್ಬರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

 ವಾಷಿಂಗ್ಟನ್‌: ಮಧ್ಯಪ್ರಾಚ್ಯ ಯುದ್ಧ ನಾನಾ ರೀತಿಯ ವಿನಾಶಕ್ಕೆ ಕಾರಣವಾಗುತ್ತಿರುವ ನಡುವೆಯೇ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಮೇಲೆ ಇರಾನ್‌ನ ಭೀಕರ ದಾಳಿಯ ಕುರಿತು ಅಮೆರಿಕ ಆರ್ಥಿಕ ತಜ್ಞರೊಬ್ಬರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಯುಎಇ ಏನಾದರೂ ಯುದ್ಧಕ್ಕೆ ಧುಮುಕಿದರೆ ಅದು ಪುಡಿಪುಡಿಯಾಗುವುದು ನಿಶ್ಚಿತ ಎಂದು ಎಚ್ಚರಿಸಿದ್ದಾರೆ.

ಅಮೆರಿಕ ಸ್ನೇಹಿ ದೇಶವಾಗಿರುವ ಕಾರಣ ಯುಎಇಯನ್ನು, ಪ್ರಮುಖವಾಗಿ ದುಬೈ ನಗರವನ್ನು ಗುರಿಯಾಗಿಸಿ ಇರಾನ್‌ ದಾಳಿ ನಡೆಸುತ್ತಿದೆ.

ಈ ಕುರಿತು ಅಮೆರಿಕದ ಖ್ಯಾತ ಆರ್ಥಿಕ ತಜ್ಞ ಜೆಫ್ರಿ ಸ್ಯಾಕ್ಸ್‌ ಮಾತನಾಡಿ, ‘ಯುಎಇ ಯುದ್ಧಕ್ಕೆ ಧುಮುಕಿದರೆ ಅದರ ಪ್ರಮುಖ ನಗರಗಳಾದ ದುಬೈ ಮತ್ತು ಅಬುಧಾಬಿ ನಾಶವಾಗುತ್ತವೆ. ಇವು ಪ್ರವಾಸಿ ಕೇಂದ್ರಗಳು, ಯುದ್ಧ ಕ್ಷೇತ್ರಗಳಲ್ಲ. ಯುಎಇ ಯುದ್ಧವನ್ನು ಪ್ರವೇಶಿಸಿದರೆ ಈ ನಗರಗಳು ಧೂಳಿಪಟವಾಗುವುದು ನಿಶ್ಚಿತ. ಅಮೆರಿಕವನ್ನು ನಂಬಿ ವಿಪತ್ತಿಗೆ ಆಹ್ವಾನ ಕೊಡಬಾರದು’ ಎಂದು ಎಚ್ಚರಿಸಿದರು.

ದುಬೈ ಮೋಜಿನ ತಾಣವೇ ಹೊರತು ಯುದ್ಧಕ್ಷೇತ್ರವಲ್ಲ:

‘ದುಬೈ ಮತ್ತು ಅಬುಧಾಬಿ ರೆಸಾರ್ಟ್‌ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳೇ ಹೊರತು ಬಲವರ್ಧಿತ ಕ್ಷಿಪಣಿ ರಕ್ಷಣಾ ಪ್ರದೇಶಗಳಲ್ಲ. ಇಲ್ಲಿ ಶ್ರೀಮಂತರು ಪಾರ್ಟಿ ಮಾಡಲು ಮತ್ತು ಹಣ ಹೂಡಲು ಬರುತ್ತಾರೆ. ಯುದ್ಧವನ್ನು ಪ್ರವೇಶಿಸುವುದರಿಂದ, ದುಬೈನಂತಹ ಸ್ಥಳದ ಸಂಪೂರ್ಣ ಉದ್ದೇಶವನ್ನೇ ಸೋಲಿಸಿದಂತಾಗುತ್ತದೆ. ಯುಎಇ ಕಣ್ಣು ತೆರೆದುಕೊಂಡೇ ಇಂಥ ಅಸಂಬದ್ಧ ಸಮಸ್ಯೆಗೆ ಸಿಲುಕಿದೆ. ಸಮರ ಪ್ರವೇಶಿಸಿದರೆ ‘ಕೊಲ್ಲಿಯ ಆಭರಣ’ ಎಂದೇ ಖ್ಯಾತವಾಗಿರುವ ದುಬೈ ಗಂಭೀರ ತೊಂದರೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಅಮೆರಿಕ ಮೇಲೆ ಅವಲಂಬನೆ ಬೇಡ:

‘ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಸೇರಿ ಯುದ್ಧವನ್ನು ಪ್ರವೇಶಿಸುವುದು ವಿಪತ್ತಿಗೆ ಆಹ್ವಾನ. ಇಂತಹ ಸಂಕೀರ್ಣ ಮತ್ತು ಅಪಾಯಕಾರಿ ರಾಜಕೀಯ ಪರಿಸ್ಥಿತಿಯಲ್ಲಿ ಈ ದೇಶಗಳಿಗೆ ಬೆಂಬಲ ನೀಡುವುದು ದೊಡ್ಡ ತಪ್ಪು. ಕೊಲ್ಲಿ ದೇಶಗಳು ತಮ್ಮ ಎಲ್ಲವನ್ನೂ ಅಮೆರಿಕದ ರಕ್ಷಣಾ ವ್ಯವಸ್ಥೆಯ ಮೇಲೆ ಹೂಡಿಕೆ ಮಾಡಿವೆ. ಇದು ಅವರ ಮೂಲಭೂತ ಹೂಡಿಕೆ. ಅಮೆರಿಕದ ಸೈನ್ಯ ಸೌಲಭ್ಯಗಳಿವೆ, ಅವರು ನಮ್ಮನ್ನು ರಕ್ಷಿಸುತ್ತಾರೆ ಎಂದು ಅವರು ಭಾವಿಸಿದ್ದಾರೆ. ಇದು ಸಂಪೂರ್ಣವಾಗಿ ತಪ್ಪು ಲೆಕ್ಕ’ ಎಂದು ಸ್ಯಾಕ್ಸ್‌ ಎಚ್ಚರಿಕೆ ನೀಡಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಶೀಘ್ರ ಡೀಲ್‌ ಆಗದಿದ್ರೆ ಭೀಕರ ದಾಳಿ : ಟ್ರಂಪ್‌
ಇರಾನ್‌ ಮೇಲೆ ಭಾರಿ ಭೂದಾಳಿಗೆ 57000 ಅಮೆರಿಕ ಯೋಧರು ರೆಡಿ !