ದುಬೈನ 67 ಅಂತಸ್ತಿನ ಕಟ್ಟಡಕ್ಕೆ ಬೆಂಕಿ : ಎಲ್ಲ 3820 ಮಂದಿ ರಕ್ಷಣೆ

Published : Jun 15, 2025, 04:24 AM IST
dubai marina skyscraper fire

ಸಾರಾಂಶ

ದುಬೈನ ಮರೀನಾದಲ್ಲಿರುವ 67 ಅಂತಸ್ತಿನ ಟೈಗರ್ ಟವರ್ ಕಟ್ಟಡದಲ್ಲಿ ಶುಕ್ರವಾರ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ದುಬೈ: ದುಬೈನ ಮರೀನಾದಲ್ಲಿರುವ 67 ಅಂತಸ್ತಿನ ಟೈಗರ್ ಟವರ್ ಕಟ್ಟಡದಲ್ಲಿ ಶುಕ್ರವಾರ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಅಚ್ಚರಿಯ ವಿಷಯವೆಂದರೆ ಭಾರೀ ಅಗ್ನಿ ಅವಘಡ ಸಂಭವಿಸಿದರೂ ಕಟ್ಟದಲ್ಲಿದ್ದ ಎಲ್ಲಾ 3820 ಜನರನ್ನು ಯಾವುದೇ ತೊಂದರೆ ಇಲ್ಲದೇ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.

67 ಅಂತಸ್ತಿನ ಕಟ್ಟಡದಲ್ಲಿ 764 ಅಪಾರ್ಟ್‌ಮೆಂಟ್‌ ಸೇರಿದಂತೆ ವಾಣಿಜ್ಯ ಮಳಿಗೆಗಳಿವೆ. ಶುಕ್ರವಾರ ರಾತ್ರಿ ಎತ್ತರದ ಮನೆಯೊಂದಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಇತರೆ ಮನೆಗಳಿಗೂ ವ್ಯಾಪಿಸಿದೆ. ಆದರೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ 6 ತಾಸು ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿ ನಂದಿಸುವ ಹೊತ್ತಿನಲ್ಲೇ ಕಟ್ಟಡದಲ್ಲಿದ್ದ ಎಲ್ಲಾ 3820 ಜನರನ್ನು ಯಾವುದೇ ತೊಂದರೆ ಇಲ್ಲದೇ ರಕ್ಷಣೆ ಮಾಡಲಾಗಿದ್ದು, ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

‘ಟೈಗರ್ ಟವರ್’ ಎಂದು ಕರೆಯಲ್ಪಡುವ 919 ಅಡಿ ಎತ್ತರದ ಈ ಬೃಹತ್ ಮರೀನಾ ಪಿನ್ಯಾಕಲ್ ಕಟ್ಟಡಕ್ಕೆ ಬೆಂಕಿ ಬಿದ್ದಿರುವುದು ಇದೇ ಮೊದಲೇನಲ್ಲ. 2015ರ ಮೇನಲ್ಲಿ, 47ನೇ ಮಹಡಿಯ ಅಡುಗೆ ಮನೆಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ 48ನೇ ಮಹಡಿವರೆಗೂ ಹರಡಿ ಭಾರೀ ದುರಂತಕ್ಕೆ ಕಾರಣವಾಗಿತ್ತು.

ಬೆಂಗಳೂರು ದಂಪತಿ ಪಾರು -ಸಕಾಲಕ್ಕೆ ರಕ್ಷಿಸಿದ ದುಬೈ ಸರ್ಕಾರಕ್ಕೆ ಸಲಾಂ

ದುಬೈ: ಬೆಂಕಿ ಅವಘಡಕ್ಕೆ ತುತ್ತಾದ ದುಬೈನ ಮರೀನಾ ಪಿನ್ಯಾಕಲ್‌ನಲ್ಲಿ ಅನೇಕ ಭಾರತೀಯರು ವಾಸವಿದ್ದರು ಎಂಬ ಸಂಗತಿ ತಿಳಿದುಬಂದಿದೆ. ಈ ವೇಳೆ ಅದೇ ಕಟ್ಟಡದಲ್ಲಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ತಾವು ಸುರಕ್ಷಿತವಾಗಿ ಪಾರಾಗಿ ಬಂದ ಘಟನೆಯನ್ನು ವಿವರಿಸಿದ್ದಾರೆ.

ನಿಶಿತ್ ಶರ್ಮಾ ಎಂಬ ಬೆಂಗಳೂರು ಮೂಲದ ವ್ಯಕ್ತಿ ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಟೈಗರ್ ಟವರ್‌ಗೆ ಬೆಂಕಿ ಬೀಳುವಾಗ ನಾನು ನನ್ನ ಪತ್ನಿಯೊಂದಿಗೆ ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶಾಂತಿಯಿಂದ ನಿದ್ರೆ ಮಾಡುತ್ತಿದ್ದೆ. ಘಟನೆ ಭಯಾನಕವಾಗಿತ್ತು.

ಸರಿಯಾದ ಸಮಯಕ್ಕೆ ಹೊರಬಂದು ಬದುಕುಳಿಯಲು ನಾವು ಪುಣ್ಯ ಮಾಡಿದ್ದೆವು. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ದುಬೈ ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ತ್ವರಿತವಾಗಿ ಸ್ಪಂದಿಸುವಲ್ಲಿ ನಿರತವಾಗಿತ್ತು. ದುಬೈನ ತುರ್ತು ರಕ್ಷಣಾ ಪಡೆಗಳು ಇಷ್ಟು ವೇಗವಾಗಿ ಕಾರ್ಯನಿರ್ವಹಿಸಿ ಜೀವಗಳನ್ನು ಉಳಿಸಿದ್ದಕ್ಕಾಗಿ ಅಪಾರ ವಂದನೆಗಳು’ ಎಂದಿದ್ದಾರೆ.

PREV
Read more Articles on

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!