ಇರಾನ್‌ ಅಣ್ವಸ್ತ್ರ ನೆಲೆಗೆ ಇಸ್ರೇಲ್‌ ಭಾರಿ ದಾಳಿ

KannadaprabhaNewsNetwork |  
Published : Jun 15, 2025, 02:48 AM IST
ಇರಾನ್‌ ಮೇಲೆ ಇಸ್ರೇಲ್‌ ದಾಳಿ | Kannada Prabha

ಸಾರಾಂಶ

ಕಳೆದ 20 ತಿಂಗಳಿನಿಂದ ನೆರೆಯ ಪ್ಯಾಲೆಸ್ತೀನ್‌ನ ಗಾಜಾಪಟ್ಟಿ ಪ್ರದೇಶದ ಮೇಲೆ ಸತತ ದಾಳಿ ನಡೆಸುತ್ತಿರುವ ಇಸ್ರೇಲ್‌, ಶುಕ್ರವಾರ ಬೆಳಗ್ಗೆ ತನ್ನ ಮತ್ತೊಂದು ಶತ್ರು ದೇಶವಾದ ಇರಾನ್‌ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ.

- ‘ಆಪರೇಷನ್‌ ರೈಸಿಂಗ್‌ ಲಯನ್‌’ಗೆ 2 ಇರಾನಿ ಸೇನಾಧಿಕಾರಿಗಳು ಸೇರಿದಂತೆ 78 ಬಲಿ- ಇರಾನ್‌ನಿಂದಲೂ ಪ್ರತಿದಾಳಿ । ಮಧ್ಯಪ್ರಾಚ್ಯ ದೇಶಗಳ ಮಧ್ಯೆ ಮತ್ತೊಂದು ಯುದ್ಧಾತಂಕ--ಅಣ್ವಸ್ತ್ರ ನೆಲೆಗಳಮೇಲೆ ದಾಳಿ ಏಕೆ? ಕಳೆದ ಕೆಲ ತಿಂಗಳಿನಿಂದ ಇರಾನ್‌ ಭಾರೀ ಪ್ರಮಾಣದಲ್ಲಿ ಪರಮಾಣು ಬಾಂಬ್‌ ತಯಾರಿಸಲು ಅಗತ್ಯವಾದ ಯುರೇನಿಯಂ ಅನ್ನು ಸಂಸ್ಕರಿಸಿದೆ. ಇದರುಂದ 15 ಅಣುಬಾಂಬ್‌ ತಯಾರಿಸಬಹುದು. ಇವನ್ನು ತನ್ನ ಮೇಲೆ ಇರಾನ್‌ ಬಳಸಬಹುದು ಎಂಬುದು ಇಸ್ರೇಲ್‌ ಆತಂಕ. ಹೀಗಾಗಿ ದಾಳಿ ಮಾಡಿದೆ.===ದಾಳಿ ನಡೆದರೂ ವಿಕಿರಣ ಸೋರಿಕೆ ಇಲ್ಲಇರಾನ್‌ನ ಪರಮಾಣು ಕೇಂದ್ರ ಗುರಿಯಾಗಿಸಿ ಇಸ್ರೇಲ್‌ ದಾಳಿ ನಡೆಸಿದ್ದರೂ ವಿಕಿರಣ ಸೋರಿಕೆ ಆತಂಕವಿಲ್ಲ. ಏಕೆಂದರೆ ಪರಮಾಣು ಪದಾರ್ಥ ಮತ್ತು ಸ್ಫೋಟದ ವೇಳೆ ಬಳಸುವ ಸ್ಫೋಟಕ ಪ್ರತ್ಯೇಕ ಇರಿಸಲಾಗಿರುತ್ತದೆ. ಇವು ಒಟ್ಟಾಗಿ ಇದ್ದರೆ ಮಾತ್ರ ಸೋರಿಕೆ ಸಾಧ್ಯ. ಇಲ್ಲದಿದ್ದರೆ ಇಲ್ಲ ಎಂದಿದ್ದಾರೆ ತಜ್ಞರು.---ಇರಾನ್‌ನೊಳಗೇ ನೆಲೆ ಸ್ಥಾಪಿಸಿ ಅಲ್ಲಿಂದ ದಾಳಿ!ಉಕ್ರೇನ್‌ ಇತ್ತೀಚೆಗೆ ರಷ್ಯಾಗೇ ನುಗ್ಗಿ ರಹಸ್ಯ ಡ್ರೋನ್‌ ದಾಳಿ ಮಾಡಿದಂತೆ ಇಸ್ರೇಲ್‌, ಇರಾನ್‌ನೊಳಗಿಂದಲೇ ನುಗ್ಗಿ ಅಲ್ಲಿಂದಲೇ ಸಂಘಟಿಸಿತ್ತು. ಇರಾನ್‌ನಲ್ಲೇ ರಹಸ್ಯ ನೆಲೆ ಸ್ಥಾಪಿಸಿ ಅಲ್ಲಿಂದಲೇ ಡ್ರೋನ್‌ ಹಾಗೂ ಕ್ಷಿಪಣಿ ದಾಳಿ ಮಾಡಿತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.---ಆಗಿದ್ದೇನು?- ಇರಾನ್‌ ತನ್ನ ಮೇಲೆ ಅಣುಬಾಂಬ್‌ ದಾಳಿ ಮಾಡಬಹುದು ಎಂದು ಇಸ್ರೇಲ್‌ ಆತಂಕ- ಹೀಗಾಗಿ ಇರಾನ್‌ನ ಅಣ್ವಸ್ತ್ರ ಘಟಕಗಳು, ಸೇನಾ ಮುಖ್ಯಸ್ಥರ ಮೇಲೆ ಇಸ್ರೇಲ್‌ ದಾಳಿ- 100ಕ್ಕೂ ಹೆಚ್ಚು ಸ್ಥಳ ಗುರಿ ಮಾಡಿ ದಾಳಿ, ಇಬ್ಬರು ಪ್ರಮುಖ ಸೇನಾ ನಾಯಕರು ಬಲಿ- ರೈಸಿಂಗ್‌ ಲಯನ್‌ ದಾಳಿಗೆ ಇರಾನ್‌ನಲ್ಲಿ 78 ಜನರ ಸಾವು, 350 ಜನರಿಗೆ ಗಾಯ- ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ನೆತನ್ಯಾಹು ಮಾಹಿತಿ====

ದುಬೈ/ತೆಹ್ರಾನ್‌/ಟೆಲ್‌ ಅವೀವ್‌: ಕಳೆದ 20 ತಿಂಗಳಿನಿಂದ ನೆರೆಯ ಪ್ಯಾಲೆಸ್ತೀನ್‌ನ ಗಾಜಾಪಟ್ಟಿ ಪ್ರದೇಶದ ಮೇಲೆ ಸತತ ದಾಳಿ ನಡೆಸುತ್ತಿರುವ ಇಸ್ರೇಲ್‌, ಶುಕ್ರವಾರ ಬೆಳಗ್ಗೆ ತನ್ನ ಮತ್ತೊಂದು ಶತ್ರು ದೇಶವಾದ ಇರಾನ್‌ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಇರಾನ್‌ನ ಯುರೇನಿಯಂ ಸಂಸ್ಕರಣಾ ಘಟಕ, ಪರಮಾಣು ಬಾಂಬ್‌ ಸಂಬಂಧಿ ಘಟಕಗಳು, ಸೇನಾ ನೆಲೆಗಳು, ಕ್ಷಿಪಣಿ ಸಂಗ್ರಹಾಗಾರ, ಪರಮಾಣು ವಿಜ್ಞಾನಿಗಳು, ಸೇನಾ ಮುಖ್ಯಸ್ಥರನ್ನು ಗುರಿಯಾಗಿಸಿ 100ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ 200ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಬಳಸಿ ಇಸ್ರೇಲ್‌ ದಾಳಿ ನಡೆಸಿದೆ.

ರೈಸಿಂಗ್‌ ಲಯನ್‌ ಹೆಸರಿನ ಈ ದಾಳಿಯಲ್ಲಿ ಇರಾನ್‌ನ ಅರೆಸೇನಾಪಡೆ ರೆವಲ್ಯೂಷನರಿ ಗಾಡ್ಸ್ಸ್‌ನ ಮುಖ್ಯಸ್ಥ ಜ. ಹೊಸ್ಸೇನ್‌ ಸಲಾಮಿ ಮತ್ತು ಇರಾನ್‌ನ ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಮೊಹಮ್ಮದ್‌ ಬಘೇರಿ ಸೇರಿದಂತೆ ಸೇನೆಯ ಹಲವು ನಾಯಕರು, ಪರಮಾಣು, ಕ್ಷಿಪಣಿ ಯೋಜನೆಯಲ್ಲಿ ಭಾಗಿಯಾಗಿದ್ದ ಹಲವು ವಿಜ್ಞಾನಿಗಳು ಸೇರಿದಂತೆ 78 ಜನರು ಸಾವನ್ನಪ್ಪಿದ್ದು, 350ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಇರಾನ್‌ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ ಜೀವಂತಾಗಿದ್ದಾರೆ ಎಂದು ಇರಾನ್‌ ಖಚಿತಪಡಿಸಿದೆ.

ಇನ್ನೊಂದೆಡೆ ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಯುರೇನಿಯಂ ಸಂಸ್ಕರಣಾ ಘಟಕ ಸೇರಿದಂತೆ ಪರಮಾಣು ಬಾಂಬ್‌ ತಯಾರಿಕೆಗೆ ನೆರವಾಗುತ್ತಿದ್ದ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು, ಅವುಗಳ ಬಳಿ ಭಾರೀ ಪ್ರಮಾಣದ ಕಪ್ಪುಹೊಗೆ ಮೇಲೇರಿದ್ದು ಕಂಡುಬಂದಿದೆ. ಈ ಘಟಕಗಳಿಂದ ವಿಕಿರಣ ಸೋರಿಕೆ ಕುರಿತು ಇದುವರೆಗೂ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದರ ಮೇಲೆ ನಿಗಾ ವಹಿಸಲಾಗಿದೆ ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ ಹೇಳಿದೆ.

ಇದರ ಬೆನ್ನಲ್ಲೇ ಇರಾನ್‌ ಕೂಡಾ ಇಸ್ರೇಲ್ ಮೇಲೆ ನೂರಾರು ಡ್ರೋನ್‌ ಬಳಸಿ ದಾಳಿ ನಡೆಸಿದ್ದು, ಅವಗಳೆಲ್ಲವನ್ನೂ ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ನಮ್ಮ ಅಸ್ತಿತ್ವಕ್ಕೆ ಅಪಾಯ ಎದುರಾದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ನಮ್ಮ ಮೇಲಿನ ಅಪಾಯ ನಿಲ್ಲುವವರೆಗೂ ದಾಳಿ ಮುಂದುವರೆಯಲಿದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದಾರೆ. ಜೊತೆಗೆ ಘಟನೆ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ಗಣ್ಯರಿಗೆ ಕರೆ ಮಾಡಿ ನೆತನ್ಯಾಹು ಮಾಹಿತಿ ನೀಡಿದ್ದಾರೆ.

ಇಸ್ರೇಲ್‌ ನಡೆಸಿದ ದಾಳಿ 1980ರಲ್ಲಿ ಇರಾನ್‌- ಇರಾಕ್‌ ನಡುವೆ ನಡೆದ ಭೀಕರ ಯುದ್ಧದ ಬಳಿಕ ಇರಾನ್‌ನ ಮೇಲಿನ ಅತಿದೊಡ್ಡ ದಾಳಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ವೈರತ್ವ ಇನ್ನಷ್ಟು ಹೆಚ್ಚಿಸುವ ಜೊತೆಗೆ ಯುದ್ಧ ತೀವ್ರವಾಗುವ ಆತಂಕವನ್ನೂ ಹುಟ್ಟುಹಾಕಿದೆ.

ದಾಳಿ ಏಕೆ?:

ಕಳೆದ ಕೆಲ ತಿಂಗಳಿನಿಂದ ಇರಾನ್‌ ಭಾರೀ ಪ್ರಮಾಣದಲ್ಲಿ ಪರಮಾಣು ಬಾಂಬ್‌ ತಯಾರಿಸಲು ಅಗತ್ಯವಾದ ಯುರೇನಿಯಂ ಅನ್ನು ಸಂಸ್ಕರಿಸಿದೆ. ಇದು ಕೆಲವೇ ದಿನಗಳಲ್ಲಿ ಕನಿಷ್ಠ 15 ಪರಮಾಣು ಬಾಂಬ್‌ ಸಿದ್ಧಪಡಿಸುವ ಸಾಮರ್ಥ್ಯವನ್ನು ಇರಾನ್‌ಗೆ ನೀಡಿದೆ. ಇದು ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವಕ್ಕೆ ಭಂಗ ತರುವ ಸಂಗತಿ. ಹೀಗಾಗಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇರಾನ್‌ನ ಪರಮಾಣು ಬಾಂಬ್‌ ತಯಾರಿ ಸಾಮರ್ಥ್ಯ ನಾಶ ಮಾಡಬೇಕು ಎನ್ನುವ ಉದ್ದೇಶದಿಂದ ಇರಾನ್‌ನ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಸ್ರೇಲ್‌ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ.

ಇದರ ಜೊತೆಗೆ ಇಸ್ರೇಲ್‌ ವಿರುದ್ಧ ಸದಾ ದಾಳಿ ನಡೆಸುವ ಹಮಾಸ್‌, ಹಿಜ್ಬುಲ್ಲಾ ಉಗ್ರರಿಗೂ ಇರಾನ್‌ ಆರ್ಥಿಕ ಮತ್ತು ಸೇನಾ ನೆರವು ನೀಡುತ್ತಿದೆ. ಜೊತೆಗೆ ತನ್ನ ವಿರುದ್ಧ ಸಂಚು ರೂಪಿಸುವ ಇರಾಕ್‌, ಲೆಬನಾನ್‌, ಸಿರಿಯಾ, ಗಾಜಾದಲ್ಲಿನ ವಿವಿಧ ಸಂಘಟನೆಗಳನ್ನು ಇರಾನ್‌ ನಾನಾ ರೀತಿಯಲ್ಲಿ ಬೆಂಬಲಿಸುತ್ತಿದೆ ಎಂಬುದು ಇಸ್ರೇಲ್‌ ಆಕ್ರೋಶಕ್ಕೆ ಕಾರಣ.

ಇರಾನ್‌ ಎಚ್ಚರಿಕೆ:

ದಾಳಿ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆಯತೊಲ್ಲಾ ಖೊಮೇನಿ, ‘ಇಸ್ರೇಲ್‌ ತನ್ನ ದುಷ್ಟ ಮತ್ತು ರಕ್ತಸಿಕ್ತ ಕೈಗಳ ಮೂಲಕ ನಮ್ಮ ಗೌರವಾನ್ವಿಯ ದೇಶದ ಮೇಲೆ ದಾಳಿ ನಡೆಸಿದೆ. ವಸತಿ ಪ್ರದೇಶಗಳ ಮೇಲೆ ದಾಳಿಯ ಮೂಲಕ ಹಿಂದೆಂದಿಗಿಂತಲೂ ತನ್ನ ದುರುದ್ದೇಶವನ್ನು ಪ್ರದರ್ಶಿಸಿದೆ. ಇದಕ್ಕೆ ಸೂಕ್ತ ತಿರುಗೇಟು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಅಮೆರಿಕಕ್ಕೆ ಮಾಹಿತಿ:

ಅಮೆರಿಕ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿನ ತನ್ನ ದೂತಾವಾಸ ಸಿಬ್ಬಂದಿಯನ್ನು ಗುರುವಾರವೇ ಹಿಂದಕ್ಕೆ ಕರೆಸಿಕೊಂಡಿತ್ತು. ಇದು ದಾಳಿ ಕುರಿತು ಅಮೆರಿಕಕ್ಕೆ ಮಾಹಿತಿ ಇತ್ತು ಎಂಬ ಸುಳಿವು ನೀಡಿದೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು
ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ