ನೇಪಾಳದ ಹೋಟೆಲ್‌ಗಳು ಜೆನ್‌ಝೀ ಸಿಟ್ಟಿಗೆ ಭಸ್ಮ: ₹2500 ಕೋಟಿ ನಷ್ಟ!

Published : Sep 13, 2025, 06:09 AM IST
Nepal Gen Z protests

ಸಾರಾಂಶ

ಸೋಷಿಯಲ್‌ ಮೀಡಿಯಾಗಳಿಗೆ ನಿಷೇಧ ಹೇರಿದ ಕ್ರಮ, ರಾಜಕಾರಣಿಗಳ ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಆಕ್ರೋಶಗೊಂಡು ನೇಪಾಳದಲ್ಲಿ ‘ಜೆನ್‌ ಝೀ’ಗಳು ನಡೆಸಿದ ಹಿಂಸಾತ್ಮಕ ಹೋರಾಟವು ಹೋಟೆಲ್‌ ಉದ್ಯಮಕ್ಕೆ 2500 ಕೋಟಿ ರು.ನಷ್ಟು ಭಾರೀ ನಷ್ಟ ಉಂಟು ಮಾಡಿದೆ.

 ಕಾಠ್ಮಂಡು: ಸೋಷಿಯಲ್‌ ಮೀಡಿಯಾಗಳಿಗೆ ನಿಷೇಧ ಹೇರಿದ ಕ್ರಮ, ರಾಜಕಾರಣಿಗಳ ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಆಕ್ರೋಶಗೊಂಡು ನೇಪಾಳದಲ್ಲಿ ‘ಜೆನ್‌ ಝೀ’ಗಳು ನಡೆಸಿದ ಹಿಂಸಾತ್ಮಕ ಹೋರಾಟವು ಹೋಟೆಲ್‌ ಉದ್ಯಮಕ್ಕೆ 2500 ಕೋಟಿ ರು.ನಷ್ಟು ಭಾರೀ ನಷ್ಟ ಉಂಟು ಮಾಡಿದೆ.

ಪ್ರವಾಸೋದ್ಯಮವೇ ಆದಾಯದ ಪ್ರಮುಖ ಮೂಲವಾಗಿರುವ ನೇಪಾಳದಲ್ಲಿ ಜೆನ್‌ ಝೀಗಳು ನಡೆಸಿದ ಪ್ರತಿಭಟನೆ ವೇಳೆ ಅಂತಾರಾಷ್ಟ್ರೀಯ ಬ್ರ್ಯಾಂಡ್‌ ಹೋಟೆಲ್‌ಗಳಾದ ಹಿಲ್ಟನ್‌, ಹಯಾತ್‌, ಕಾಠ್ಮಂಡು ವ್ಯಾಲಿ, ಪೊಖಾರ ಸೇರಿದಂತೆ 10ಕ್ಕೂ ಹೆಚ್ಚು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಹಾಳು ಮಾಡಿದ್ದರು. ಬೆಂಕಿ ಹಚ್ಚಿದ್ದರು.

ಈ ಪೈಕಿ ಭಾರೀ ದಾಳಿಗೆ ತುತ್ತಾದ ಹಿಲ್ಟನ್‌ ಹೋಟೆಲ್‌ ಒಂದಕ್ಕೇ 800 ಕೋಟಿ ರು.ಗೂ ಹೆಚ್ಚಿನ ನಷ್ಟವಾಗಿದೆ. ಇನ್ನೂ ಎಲ್ಲಾ ಹೋಟೆಲ್‌ಗಳಿಗೆ ಆದ ನಷ್ಟ ಲೆಕ್ಕ ಹಾಕಿದರೆ ಅದು 2500 ಕೋಟಿ ರು. ದಾಟಲಿದೆ ಎಂದು ನೇಪಾಳ ಹೋಟೆಲ್‌ಗಳ ಒಕ್ಕೂಟ ಹೇಳಿದೆ. ಜೊತೆಗೆ ಭಾರೀ ಹಾನಿಗೆ ತುತ್ತಾದ ಬಹುತೇಕ ಹೋಟೆಲ್‌ಗಳು ದುರಸ್ತಿ ಆಗದೆ ಪುನಾರಂಭ ಮಾಡುವ ಸ್ಥಿತಿಯಲ್ಲಿ ಇಲ್ಲ. ಇದು ಹೋಟೆಲ್‌ ಉದ್ಯೋಗ ನಂಬಿರುವ 2000ಕ್ಕೂ ಹೆಚ್ಚು ಸಿಬ್ಬಂದಿ, ಕಾರ್ಮಿಕರ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಹೋಟೆಲ್‌ಗಳ ಒಕ್ಕೂಟ ತಿಳಿಸಿದೆ.

ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನದ ವೇಳೆ ಭಾರತೀಯ ಮೂಲದ ಮಹಿಳೆಯ ಸಾವು

ಕಾಠ್ಮಂಡು: ನೇಪಾಳದಲ್ಲಿ ನಡೆದ ಹಿಂಸಾಚಾರ ಭಾರತೀಯ ಮೂಲದ ಮಹಿಳೆಯ ಜೀವ ಬಲಿ ಪಡೆದಿದೆ. ಹಿಂಸಾಚಾರದ ವೇಳೆ ಗಾಜಿಯಾಬಾದ್‌ ಮೂಲದ ರಾಜೇಶ್‌ ದೇವಿ ಸಿಂಗ್‌ ತಮ್ಮ ಪತಿಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಗುಂಪೊಂದು ಹೋಟೆಲ್‌ ಮೇಲೆ ದಾಳಿ ಬೆಂಕಿ ಹಚ್ಚಿದೆ. ಹೀಗಾಗಿ ಪ್ರಾಣ ಉಳಿಸಿಕೊಳ್ಳಲು ಬೇರೆ ದಾರಿ ಕಾಣದ ದಂಪತಿ ಹಯಾತ್‌ನ ಹೋಟೆಲ್‌ನ 4 ಮಹಡಿಯ ಕಿಟಕಿಯ ಗಾಜು ಒಡೆದಿದ್ದಾರೆ. ಬಳಿಕ ಹಾಸಿಗೆ ಮತ್ತು ದಿಂಬನ್ನು ಕೆಳಗೆ ಎಸೆದಿದ್ದಾರೆ. ಅದಾದ ನಂತರ ಬೆಡ್‌ಶೀಟ್‌ ಮತ್ತು ಕರ್ಟನ್‌ಗಳನ್ನು ಒಂದಕ್ಕೊಂದು ಜೋಡಿಸಿ ಹಗ್ಗದಂತೆ ಮಾಡಿಕೊಂಡು ಕಿಟಕಿಯ ಮೂಲಕ ಮೊದಲಿಗೆ ರಾಜೇಶ್‌ ದೇವಿ ಸಿಂಗ್‌ ಕೆಳಗೆ ಇಳಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿ ಬಿದ್ದು ಅವರು ಸಾವನ್ನಪ್ಪಿದರೆ, ಅವರ ಪತಿ ಗಾಯಗೊಂಡಿದ್ದಾರೆ.

PREV
Read more Articles on

Recommended Stories

ಅಲ್ಬೇನಿಯಾದಲ್ಲಿ ವಿಶ್ವದ ಮೊದಲ ಎಐ ಸಚಿವೆ ನೇಮಕ!
ಅಮೆರಿಕದಲ್ಲಿ ಪತ್ನಿಯ ಎದುರೇ ಕರ್ನಾಟಕ ವ್ಯಕ್ತಿಯ ಶಿರಚ್ಛೇದ