;Resize=(412,232))
ವಾಷಿಂಗ್ಟನ್: ಮನೆಯಲ್ಲಿ ಸೊಳ್ಳೆ ಹೆಚ್ಚಾದರೆ ಸೊಳ್ಳೆ ನಿರೋಧಕ ಲಿಕ್ವಿಡ್ ಬಳಸುವುದು, ಸೊಳ್ಳೆ ಬತ್ತಿ ಹಚ್ಚಿ ಹೊಗೆ ಹಾಕುವುದು ಅಥವಾ ಎಲೆಕ್ಟ್ರಿಕ್ ಬ್ಯಾಟ್ ಹಿಡಿದು ಸೊಳ್ಳೆಗಳನ್ನು ಹುಡುಕಿ ಹುಡುಕಿ ಕೊಲ್ಲುವುದು ಮಾಮೂಲಿ. ಮುಳ್ಳಿನಿಂದ ಮುಳ್ಳು ತೆಗೆಯುವಂತೆ, ಸೊಳ್ಳೆ ಕಾಟದಿಂದ ಪಾರಾಗಲು ಸೊಳ್ಳೆಗಳನ್ನೇ ಬಳಸಿದರೆ?!
ಜಗತ್ತೇ ಚಕಿತಗೊಳ್ಳುವಂತಹ ಪ್ರಯೋಗವೊಂದಕ್ಕೆ ಅಮೆರಿಕದಲ್ಲಿ ಗೂಗಲ್ ಕಂಪನಿ ಕೈ ಹಾಕಿದೆ. ಪ್ರಯೋಗಾಲಯದಲ್ಲಿ ಗಂಡು ಸೊಳ್ಳೆಗಳನ್ನು ಸೃಷ್ಟಿಸಿ, ಅದಕ್ಕೆ ಬ್ಯಾಕ್ಟಿರಿಯಾಗಳನ್ನು ಸೇರ್ಪಡೆ ಮಾಡಿ, ಹೆಣ್ಣು ಸೊಳ್ಳೆಯ ಜತೆಗೆ ಅದು ಲೈಂಗಿಕ ಕ್ರಿಯೆ ನಡೆಸುವಂತೆ ಮಾಡಿ ಬಳಿಕ ಮೊಟ್ಟೆಗಳಿಂದ ಮರಿಹೊರ ಬರದಂತೆ ಮಾಡುವುದೇ ಈ ಪ್ರಯೋಗದ ತಿರುಳು!
ಸೊಳ್ಳೆಯಿಂದ ಹರಡುವ ರೋಗಗಳನ್ನು ತಗ್ಗಿಸಲು ಮುಂದಿನ ಎರಡು ವರ್ಷಗಳಲ್ಲಿ 3.2 ಕೋಟಿ ಸೊಳ್ಳೆಗಳನ್ನು ಫ್ಲೋರಿಡಾ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಬಿಡುಗಡೆ ಮಾಡುವುದಕ್ಕೆ ಅನುಮತಿ ಕೋರಿ ಸರ್ಕಾರದ ಪರಿಸರ ಸಂರಕ್ಷಣಾ ಸಂಸ್ಥೆಗೆ ಗೂಗಲ್ ಕಂಪನಿ ಪ್ರಸ್ತಾವನೆ ಸಲ್ಲಿಸಿದೆ. ರೋಗಕಾರಕ ಸೊಳ್ಳೆಗಳಿಂದ ಮುಕ್ತಿಗಾಗಿ ದಶಕದ ಹಿಂದೆ ‘ಡೀಬಗ್’ ಎಂಬ ಯೋಜನೆಯನ್ನು ಗೂಗಲ್ ಆರಂಭಿಸಿದೆ. ಅದರ ಭಾಗವೇ ಸೊಳ್ಳೆ ಬಿಡುಗಡೆ ಯೋಜನೆ.
ಮನುಷ್ಯರಿಗೆ ಕಚ್ಚುವುದು ಹೆಣ್ಣು ಸೊಳ್ಳೆಗಳು ಮಾತ್ರ. ಹೀಗಾಗಿ ಲ್ಯಾಬ್‌ನಲ್ಲಿ ಗಂಡು ಸೊಳ್ಳೆಗಳನ್ನು ಗೂಗಲ್ ಸೃಷ್ಟಿ ಮಾಡಲಿದೆ. ಈ ಸೊಳ್ಳೆಗಳಲ್ಲಿ ವೋಲ್ಬಾಚಿಯಾ ಪೈಪಿಯೆಂಟಿಸ್ ಬ್ಯಾಕ್ಟೀರಿಯಾವನ್ನು ಸೇರ್ಪಡೆ ಮಾಡಲಾಗುತ್ತದೆ. ವಾತಾವರಣಕ್ಕೆ ಬಿಡುಗಡೆಯಾದ ಬಳಿಕ ಇವು ಹೆಣ್ಣು ಸೊಳ್ಳೆಗಳ ಜತೆ ಸಂಭೋಗ ಮಾಡುತ್ತವೆ. ಅದರ ಫಲವಾಗಿ ಸೊಳ್ಳೆಗಳು ಮೊಟ್ಟೆ ಇಡುತ್ತವಾದರೂ, ಅವು ಒಡೆಯುವುದೇ ಇಲ್ಲ! ಹೀಗೆ ಕ್ರಮೇಣ ಸೊಳ್ಳೆಗಳ ಜನನವೇ ನಿಂತು ಅವು ನಿರ್ನಾಮವಾಗುತ್ತವೆ ಎಂಬುದು ಈ ಯೋಜನೆಯ ಲೆಕ್ಕಾಚಾರ. ತನ್ಮೂಲಕ ಡೆಂಘೀ, ವೆಸ್ಟ್ ನೈಲ್ ವೈರಸ್‌ನಂಥ ರೋಗ ಹರಡುವಿಕೆಗೆ ಬ್ರೇಕ್ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆಂದು ಬಿಡುಗಡೆ ಮಾಡಲಾಗುವ 3.2 ಕೋಟಿ ಗಂಡು ಸೊಳ್ಳೆಗಳಿಂದ ಮನುಷ್ಯರಿಗೆ ಯಾವುದೇ ಅಪಾಯವಾಗದು. ಕಾರಣ ಕಚ್ಚುವುದು ಹೆಣ್ಣುಸೊಳ್ಳೆಗಳು ಮಾತ್ರ. ಮೊದಲ ವರ್ಷ 1.6 ಕೋಟಿ, 2ನೇ ವರ್ಷ 1.6 ಕೋಟಿ ಸೊಳ್ಳೆ ಬಿಡುಗಡೆ ಮಾಡುವ ಯೋಜನೆ ಇದೆ.
- ಮಾನವರಿಗೆ ಕಚ್ಚುವುದು ಹೆಣ್ಣು ಸೊಳ್ಳೆಗಳು ಮಾತ್ರ. ಆ ಸಂತತಿ ತಗ್ಗಿಸುವ ಯೋಜನೆ ಇದು
- ಇದಕ್ಕಾಗಿ ಲ್ಯಾಬ್‌ನಲ್ಲಿ ಗೂಗಲ್ ಕಂಪನಿ ಕೃತಕವಾಗಿ ಗಂಡು ಸೊಳ್ಳೆಗಳನ್ನು ಸೃಷ್ಟಿ ಮಾಡಲಿದೆ
- ವೋಲ್ಬಾಚಿಯಾ ಎಂಬ ಬ್ಯಾಕ್ಟೀರಿಯಾಗಳನ್ನು ಸೃಷ್ಟಿಸಲಾದ ಸೊಳ್ಳೆಗಳಿಗೆ ಸೇರ್ಪಡೆಗೊಳಿಸಲಿದೆ
- ಇವನ್ನು ವಾತಾವರಣಕ್ಕೆ ಬಿಡುಗಡೆ ಮಾಡಿದಾಗ ಹೆಣ್ಣು ಸೊಳ್ಳೆಗಳನ್ನು ಅವು ಸಂಭೋಗಿಸುತ್ತವೆ
- ಸಂತಾನೋತ್ಪತ್ತಿ ಕ್ರಿಯೆ ನಡೆಯುತ್ತದೆ. ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಆದರೆ ಮೊಟ್ಟೆ ಒಡೆಯಲ್ಲ
- ಈ ಮೂಲಕ ಡೆಂಘೀ, ವೆಸ್ಟ್ ನೈಲ್ ವೈರಸ್‌ನಂತಹ ರೋಗಗಾರಕ ಸೊಳ್ಳೆಗಳ ಸಂತತಿ ತಗ್ಗುತ್ತದೆ
ಸಿಂಗಾಪುರದಲ್ಲೂ ನಡೆದಿತ್ತು ಪ್ರಯೋಗ
ಅಮೆರಿಕದಲ್ಲಿ ಗೂಗಲ್ ನಡೆಸಲು ಮುಂದಾಗಿರುವ ಸೊಳ್ಳೆ ನಿರ್ಮೂಲನೆ ಪ್ರಯೋಗ ಈ ಹಿಂದೆ ಸಿಂಗಾಪುರದಲ್ಲಿ ನಡೆದಿತ್ತು. ಸೊಳ್ಳೆ ಕಾಟ ತಪ್ಪಿಸಲು ಹಲವು ಪ್ರದೇಶಗಳಲ್ಲಿ ಸಿಂಗಾಪುರ ಸರ್ಕಾರವು ವೋಲ್ಬಾಚಿಯಾ ಬ್ಯಾಕ್ಟಿರಿಯಾ ಹೊಂದಿದ ಗಂಡು ಸೊಳ್ಳೆಗಳನ್ನು ಪರಿಸರಕ್ಕೆ ಬಿಡುಗಡೆ ಮಾಡಿತ್ತು. ಅವು ಹೆಣ್ಣು ಸೊಳ್ಳೆ ಜತೆ ಸಂಭೋಗ ನಡೆಸಿದ್ದರೂ ಮೊಟ್ಟೆಗಳು ಒಡದಿರಲಿಲ್ಲ. ಇದರಿಂದ ಪ್ರಯೋಗ ನಡೆದ ಸ್ಥಳಗಳಲ್ಲಿ ನಿಧಾನವಾಗಿ ಸೊಳ್ಳೆ ಸಂತತಿ ತಗ್ಗಿತ್ತು.