ಪಾಲೆಸ್ತೀನ್‌ನ ಹಮಾಸ್‌ ಉಗ್ರ ಸಂಘಟನೆಯ ನಾಯಕ ಇಸ್ಮಾಯಿಲ್‌ ಹನಿ ಇರಾನ್‌ನಲ್ಲಿ ವಾಯುದಾಳಿ ನಡೆಸಿ ಹತ್ಯೆ

KannadaprabhaNewsNetwork | Updated : Aug 02 2024, 01:24 PM IST

ಸಾರಾಂಶ

ಕಳೆದ ವರ್ಷ ಅ.7ರಂದು ಇಸ್ರೇಲ್‌ನೊಳಗೆ ನುಗ್ಗಿ 1200ಕ್ಕೂ ಹೆಚ್ಚು ನಾಗರಿಕರ ಹತ್ಯೆ ಮಾಡಿಸಿದ್ದ ಪಾಲೆಸ್ತೀನ್‌ನ ಹಮಾಸ್‌ ಉಗ್ರ ಸಂಘಟನೆಯ ನಾಯಕ ಇಸ್ಮಾಯಿಲ್‌ ಹನಿಯೆನನ್ನು ಬುಧವಾರ ಇರಾನ್‌ನಲ್ಲಿ ವಾಯುದಾಳಿ ನಡೆಸಿ ಹತ್ಯೆಗೈಯಲಾಗಿದೆ.

ಬೈರೂತ್‌: ಕಳೆದ ವರ್ಷ ಅ.7ರಂದು ಇಸ್ರೇಲ್‌ನೊಳಗೆ ನುಗ್ಗಿ 1200ಕ್ಕೂ ಹೆಚ್ಚು ನಾಗರಿಕರ ಹತ್ಯೆ ಮಾಡಿಸಿದ್ದ ಪಾಲೆಸ್ತೀನ್‌ನ ಹಮಾಸ್‌ ಉಗ್ರ ಸಂಘಟನೆಯ ನಾಯಕ ಇಸ್ಮಾಯಿಲ್‌ ಹನಿಯೆನನ್ನು ಬುಧವಾರ ಇರಾನ್‌ನಲ್ಲಿ ವಾಯುದಾಳಿ ನಡೆಸಿ ಹತ್ಯೆಗೈಯಲಾಗಿದೆ. ಹತ್ಯೆಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲವಾದರೂ, ಇಸ್ಮಾಯಿಲ್‌ ಹತ್ಯೆಗೆ ಪಣತೊಟ್ಟಿದ್ದ ಇಸ್ರೇಲ್‌ ಈ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆಗೆ ಹಮಾಸ್‌ ಮತ್ತು ಇರಾನ್‌ ಎರಡೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತೀಕಾರದ ಘೋಷಣೆ ಮಾಡಿವೆ. ಹೀಗಾಗಿ ಬೂದಿಮುಚ್ಚಿದ ಕೆಂಡದಂತಿದ್ದ ಇಸ್ರೇಲ್‌-ಪಾಲೆಸ್ತೀನ್‌ ಸಮರಕ್ಕೆ ಇದೀಗ ಇರಾನ್‌ ಕೂಡಾ ಕೈಜೋಡಿಸುವ ಆತಂಕ ಎದುರಾಗಿದೆ.

ಏನಾಯ್ತು?:

ಇರಾನ್‌ನ ನೂತನ ಅಧ್ಯಕ್ಷ ಮಸೌದ್‌ ಪೆಜೆಶ್ಕಿಯಾನ್‌ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಇಸ್ಮಾಯಿಲ್‌ ಹನಿಯೆ ಮತ್ತು ಇತರೆ ಪ್ಯಾಲೆಸ್ತೀನಿ ನಾಯಕರು ರಾಜಧಾನಿ ಟೆಹ್ರಾನ್‌ಗೆ ಆಗಮಿಸಿದ್ದರು. ಹೀಗೆ ಆಗಮಿಸಿದ್ದ ಅತಿಥಿಗಳು ಕಟ್ಟಡವೊಂದರ ಮೇಲೆ ನಡೆದ ವೈಮಾನಿಕ ದಾಳಿ ವೇಳೆ ಇಸ್ಲಾಯಿಲ್‌ ಹತನಾಗಿದ್ದಾನೆ. ಈ ವಿಷಯವನ್ನು ಇರಾನ್‌ನ ಸೇನೆ ಮತ್ತು ಹಮಾಸ್‌ ಸಂಘಟನೆಗಳು ಖಚಿತಪಡಿಸಿವೆ.

ಈ ದಾಳಿಯ ಹೊಣೆಯನ್ನು ಇದುವರೆಗೂ ಯಾರೂ ಹೊತ್ತಿಲ್ಲ. ಇಸ್ರೇಲ್‌ ಕೂಡ ಹೇಳಿಕೆ ನೀಡಿಲ್ಲ. ಆದರೆ ಶತ್ರುಗಳನ್ನು ವಿದೇಶಗಳಿಗೆ ನುಗ್ಗಿ ಅವರ ನೆಲದಲ್ಲೇ ಹತ್ಯೆಗೈಯುವುದಕ್ಕೆ ಪ್ರಖ್ಯಾತಿ ಹೊಂದಿರುವ ಇಸ್ರೇಲ್‌ನ ಬಾಹ್ಯ ಗುಪ್ತಚರ ಸಂಸ್ಥೆ ಮೊಸ್ಸಾದ್‌ ಈ ದಾಳಿ ನಡೆಸಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಪ್ರತೀಕಾರ- ಇರಾನ್ ಎಚ್ಚರಿಕೆ:

ಈ ನಡುವೆ ಇಸ್ಲಾಯಿಲ್‌ ಹತ್ಯೆಯನ್ನು ಕಟುವಾಗಿ ಟೀಕಿಸಿರುವ ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ, ‘ನಮ್ಮ ನೆಲದಲ್ಲೇ ಈ ಹತ್ಯೆ ನಡೆದಿರುವ ಹಿನ್ನೆಲೆಯಲ್ಲಿ ರಕ್ತದ ಬಲಿದಾನಕ್ಕೆ ಪ್ರತೀಕಾರ ನಮ್ಮ ಹಕ್ಕು’ ಎಂದು ಅಬ್ಬರಿಸಿದ್ದಾರೆ.

==

ಗಾಜಾ ಯುದ್ಧದಲ್ಲಿ ಮಡಿದ ಸೈನಿಕರ ವೀರ್ಯ ಸಂಗ್ರಹ!

ಟೆಲ್‌ ಅವಿವ್‌: ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಮುಂದುವರೆದಿರುವ ಹೊತ್ತಿನಲ್ಲಿಯೇ , ಯುದ್ಧದಲ್ಲಿ ಸತ್ತಿರುವ ಇಸ್ರೇಲಿ ಸೈನಿಕರ ಪೋಷಕರು, ತಮ್ಮ ಮಕ್ಕಳ ದೇಹದಿಂದ ವೀರ್ಯವನ್ನು ಹೊರತೆಗೆದು, ಫ್ರೀಜ್‌ ಮಾಡಬೇಕೆಂಬ ಒತ್ತಾಯ ತೀವ್ರಗೊಳಿಸಿದ್ದಾರೆ. ಈ ಮೂಲಕ ಮೃತ ಯೋಧನ ಪತ್ನಿಗೆ ಆ ವೀರ್ಯದ ಮೂಲಕ ಮೊಮ್ಮಕ್ಕಳನ್ನು ಪಡೆವ ಉದ್ದೇಶ ಅವರದ್ದು.

ಈಗಾಗಲೇ ಸೈನಿಕರು, ನಾಗರಿಕರು ಸೇರಿದಂತೆ 170 ಮಂದಿಯ ವೀರ್ಯವನ್ನು ಹೊರತೆಗೆಯಲಾಗಿದೆ. ವೀರ್ಯ ವ್ಯಕ್ತಿ ಮರಣ ಹೊಂದಿದ 72 ಗಂಟೆಗಳ ಕಾಲ ದೇಹದಲ್ಲಿ ಬದುಕುಳಿದಿರುತ್ತದೆ. ವೀರ್ಯವನ್ನು ವ್ಯಕ್ತಿ ಮೃತ ಪಟ್ಟ 24 ಗಂಟೆಯೊಳಗೆ ಹೊರತೆಗೆದರೆ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.ಆ ವೀರ್ಯವನ್ನು ಫ್ರೀಜ್‌ ಮಾಡಿ ಮೃತನ ಪತ್ನಿಗೆ ನೀಡಿದರೆ ಆಕೆಗೆ ಮಕ್ಕಳಾಗುವ ಸಾಧ್ಯತೆ ಇರುತ್ತದೆ. ಬೇಡಿಕೆ ಹೆಚ್ಚಿದ ಕಾರಣ ಕಳೆದ ಅಕ್ಟೋಬರ್‌ನಲ್ಲಿ ಇಸ್ರೇಲ್ ಸರ್ಕಾರ ವೀರ್ಯ ಫ್ರೀಜ್ ಮಾಡಲು ನ್ಯಾಯಾಲಯದ ಅನುಮತಿ ಬೇಕು ಎನ್ನುವ ನಿಯಮವನ್ನು ತೆಗೆದು ಹಾಕಿತ್ತು. ಈ ನಿಯಮದಲ್ಲಿ ಮತ್ತಷ್ಟು ಸರಳ ಆಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

Share this article