ಢಾಕಾ: ತನ್ನ ದೇಶದಲ್ಲಿ ವಿರೋಧವನ್ನು ಎದುರಿಸಿ ಸುರಕ್ಷತೆಯ ಕಾರಣಕ್ಕೆ ದೇಶ ಬಿಟ್ಟು ಬಂದು ಸದ್ಯ ಭಾರತದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಕೆಲ ಕಾಲ ದೆಹಲಿಯಲ್ಲಿಯೇ ಉಳಿಯಲಿದ್ದಾರೆ ಎಂದು ಶೇಖ್ ಹಸೀನಾ ಪುತ್ರ ಸಜೀಬ್ ವಾಝೇದ್ ಜಾಯ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ತಮ್ಮ ತಾಯಿ ಮೂರನೇ ದೇಶದಲ್ಲಿ ಆಶ್ರಯ ಪಡೆಯಲು ಬಯಸಿದ್ದಾರೆ ಎನ್ನುವ ವದಂತಿಗಳಿಗೆ ಉತ್ತರಿಸಿದ ಜಾಯ್ ‘ಇದೆಲ್ಲವೂ ಕೇವಲ ವದಂತಿ. ಈ ತನಕ ಆಕೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆಕೆ ದೆಹಲಿಗೆ ಹೋಗಿದ್ದಾರೆ. ಅಲ್ಲಿಯೇ ಕೆಲ ಕಾಲ ಇರಲಿದ್ದಾರೆ. ತಾಯಿಯ ಜೊತೆ ಅವರ ಸಹೋದರಿ ಕೂಡ ಇದ್ದಾರೆ. ಹೀಗಾಗಿ ಆಕೆ ಒಂಟಿಯಾಗಿಲ್ಲ’ ಎಂದಿದ್ದಾರೆ.
ರಾಯಭಾರ ಕಚೇರಿಯ ಹೆಚ್ಚುವರಿ ಸಿಬ್ಬಂದಿ ಢಾಕಾದಿಂದ ವಾಪಸ್
ನವದೆಹಲಿ: ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರೆದಿರುವ ಹಿನ್ನೆಲೆಯಲ್ಲಿ ರಾಜಧಾನಿ ಢಾಕಾದಲ್ಲಿನ ಭಾರತದ ರಾಯಭಾರ ಕಚೇರಿಯ ಹೆಚ್ಚುವರಿ ಸಿಬ್ಬಂದಿ ಸ್ವಯಂ ಪ್ರೇರಿತವಾಗಿ ಕುಟುಂಬ ಸಮೇತ ಬುಧವಾರ ಭಾರತಕ್ಕೆ ಮರಳಿದ್ದಾರೆ. ಚಿತ್ತಗಾಂಗ್, ರಾಜಶಾಹಿ, ಖುಲ್ನಾ ಮತ್ತು ಸಿಲ್ಹೆತ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಾರತದ ಹೆಚ್ಚುವರಿ ಸಿಬ್ಬಂದಿಯೂ ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳ ಗಡಿಗೆ ಆಗಮಿಸಿದ ಬಾಂಗ್ಲನ್ನರು
ಕೋಲ್ಕತಾ: ಬಾಂಗ್ಲಾದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವ ನಡುವೆಯೇ, ಸಾವಿರಾರು ಬಾಂಗ್ಲಾದೇಶಿ ಪ್ರಜೆಗಳು ಭಾರತದಲ್ಲಿ ಆಶ್ರಯ ಬಯಸಿ ಪಶ್ಚಿಮ ಬಂಗಾಳ ಗಡಿಯತ್ತ ಆಗಮಿಸತೊಡಗಿದ್ದಾರೆ. ಬಂಗಾಳದ ಜಲ್‌ಪೈಗುರಿ ಜಿಲ್ಲೆಯಲ್ಲಿ ಬಾಂಗ್ಲಾದೊಂದಿಗೆ ಹೊಂದಿರುವ ಗಡಿ ಪ್ರದೇಶದಲ್ಲಿ ಸಾವಿರಾರು ಹಿಂದೂ, ಮುಸ್ಲಿಮರು ಕುಟುಂಬ ಸಮೇತರಾಗಿ ಬೀಡುಬಿಟ್ಟಿದ್ದಾರೆ. ಬಾಂಗ್ಲಾದಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಭಾರತ ಪ್ರವೇಶಕ್ಕೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಬಾಂಗ್ಲಾ ವಲಸಿಗರ ಪ್ರವೇಶಕ್ಕೆ ಭಾರತ ಸರ್ಕಾರದ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಆಶ್ರಯ ಕೋರಿದವರನ್ನು ಬಿಎಸ್‌ಎಫ್ ಸಿಬ್ಬಂದಿ ಮರಳುತ್ತಿದ್ದಾರೆ. ಜೊತೆಗೆ ಬಾಂಗ್ಲಾದೊಂದಿಗೆ ಹೊಂದಿರುವ ಗಡಿಯುದ್ದಕ್ಕೂ ತಮ್ಮ ಪಹರೆ ಬಿಗಿ ಮಾಡಿದ್ದಾರೆ.