ಇರಾನ್ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ನಿರಂತರ ಬೆದರಿಕೆ ಒಡ್ಡುತ್ತಿರುವ ನಡುವೆಯೇ, ಯುದ್ಧಕ್ಕೆ ಸನ್ನದ್ಧವಾಗಿ ಮಧ್ಯಪ್ರಾಚ್ಯ ಸಮೀಪದ ಸಮುದ್ರದಲ್ಲಿ ಬೀಡುಬಿಟ್ಟಿರುವ, 1.2 ಲಕ್ಷ ಕೋಟಿ ರು. ಬೆಲೆಬಾಳುವ ಅಮೆರಿಕದ ಪ್ರತಿಷ್ಠಿತ ಯುದ್ಧನೌಕೆಯಲ್ಲಿ ಹೊಸ ಸಮಸ್ಯೆ ಶುರುವಾಗಿದೆ.
ವಾಷಿಂಗ್ಟನ್: ಇರಾನ್ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರ ಬೆದರಿಕೆ ಒಡ್ಡುತ್ತಿರುವ ನಡುವೆಯೇ, ಯುದ್ಧಕ್ಕೆ ಸನ್ನದ್ಧವಾಗಿ ಮಧ್ಯಪ್ರಾಚ್ಯ ಸಮೀಪದ ಸಮುದ್ರದಲ್ಲಿ ಬೀಡುಬಿಟ್ಟಿರುವ, 1.2 ಲಕ್ಷ ಕೋಟಿ ರು. ಬೆಲೆಬಾಳುವ ಅಮೆರಿಕದ ಪ್ರತಿಷ್ಠಿತ ಯುದ್ಧನೌಕೆಯಲ್ಲಿ ಹೊಸ ಸಮಸ್ಯೆ ಶುರುವಾಗಿದೆ. ಕಳೆದ 8 ತಿಂಗಳಿನಿಂದ ಸರಿಯಾದ ನಿರ್ವಹಣೆ ಮತ್ತು ಸೂಕ್ತ ಕೊಳಾಯಿ ವ್ಯವಸ್ಥೆ ಇಲ್ಲದೆ ನೌಕೆಯ 650 ಶೌಚಾಲಯಗಳು ಹದಗೆಟ್ಟಿವೆ. ಇದರಿಂದಾಗಿ ದೇಹಬಾಧೆ ತೀರಿಸಿಕೊಳ್ಳಲು ಒದ್ದಾಡುತ್ತಿರುವ ಸುಮಾರು 5,000 ಸಿಬ್ಬಂದಿ, ಕೆಲಸವನ್ನೇ ಬಿಡುವುದಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಏನಿದು ಸಮಸ್ಯೆ?:
ಅಮೆರಿಕದ ಕೆ ಯುಎಸ್‌ಎಸ್ ಗೆರಾಲ್ಡ್ ಆರ್. ಫೋರ್ಡ್ ಯುದ್ಧನೌಕೆ ಕಳೆದ ಜೂನ್‌ನಿಂದಲೇ ಸಮುದ್ರದಲ್ಲಿ ಬೀಡುಬಿಟ್ಟಿದೆ. ಇರಾನ್ ಮತ್ತು ಅಮೆರಿಕ ನಡುವೆ ಯುದ್ಧಾತಂಕ ತೀವ್ರವಾಗುತ್ತಿರುವ ಕಾರಣ ಇನ್ನಷ್ಟು ಕಾಲ ಅಲ್ಲಿಯೇ ಇರುವಂತೆ ಅಮೆರಿಕ ಸರ್ಕಾರ ಸೂಚನೆ ನೀಡಿದೆ. ಈ ನಡುವೆ, ಸಮುದ್ರದಲ್ಲಿ 8 ತಿಂಗಳಿಂದ ಇರುವ ಕಾರಣ ನೌಕೆಯ ಶೌಚಾಲಯದ ಉಪಕರಣಗಳು ಹಾಳಾಗುತ್ತಿವೆ. ಸೂಕ್ತ ಕೊಳಾಯಿ ವ್ಯವಸ್ಥೆ ಇಲ್ಲದೆ ಸುಮಾರು 650 ಶೌಚಾಲಯಗಳು ಹದಗೆಟ್ಟಿವೆ. ಇದನ್ನು ಸರಿಪಡಿಸಲು ಸಿಬ್ಬಂದಿ 24 ಗಂಟೆ ಕೆಲಸ ಮಾಡುತ್ತಿದ್ದರೂ ಫಲ ನೀಡುತ್ತಿಲ್ಲ.
45 ನಿಮಿಷ ಪಾಳಿ ನಿಂತರೆ ಮಾತ್ರ ಶೌಚ!:
ಯುವತಿಯರೂ ಸೇರಿದಂತೆ 20ರ ಆಸುಪಾಸು ವಯಸ್ಸಿನ ಸುಮಾರು 5,000 ಸಿಬ್ಬಂದಿ ಈ ಯುದ್ಧನೌಕೆಯಲ್ಲಿದ್ದಾರೆ. ಶೌಚಾಲಯಗಳು ಹದಗೆಟ್ಟಿರುವ ಕಾರಣ ನಿತ್ಯ 45 ನಿಮಿಷ ಪಾಳಿ ನಿಂತು ದೇಹಬಾಧೆ ತೀರಿಸಿಕೊಳ್ಳಬೇಕಾಗಿದೆ. ಹೀಗಾಗಿ ನಿಯೋಜನೆ ಮುಗಿದ ಬಳಿಕ ಅಮೆರಿಕ ನೌಕಾದಳದ ಕೆಲಸವನ್ನೇ ಬಿಡುವುದಾಗಿ ಅನೇಕರು ಹೇಳಿಕೊಂಡಿದ್ದಾರೆ. ನಿತ್ಯ ಟಾಯ್ಲೆಟ್ ರಿಪೇರಿ ಮಾಡುವವರು ಹಾಗೂ ಯೋಧರ ನಡುವೆ ಜಗಳ ಮಾಮೂಲಿಯಾಗಿದೆ.