‘ಇಸ್ರೇಲ್‌ನಾದ್ಯಂತ ಹೈ ಅಲರ್ಟ್‌, ಎಲ್ಲೆಡೆ ಭಯದ ವಾತಾವರಣ ಇದೆ’

Published : Jun 15, 2025, 07:58 AM IST
Iran Israel conflict

ಸಾರಾಂಶ

ಇರಾನಿನ ಅಣುಸ್ಥಾವರದ ಮೇಲೆ ಇಸ್ರೇಲಿನ ಭೀಕರ ದಾಳಿಯ ಬಳಿಕ ಉಂಟಾಗಿರುವ ಪ್ರತಿದಾಳಿಯಿಂದ ಇಸ್ರೇಲ್ ದೇಶಾದ್ಯಂತ ಹೈ ಅಲರ್ಟ್ ಸ್ಥಿತಿ ಇದೆ.

  ಉಪ್ಪಿನಂಗಡಿ :   ಇರಾನಿನ ಅಣುಸ್ಥಾವರದ ಮೇಲೆ ಇಸ್ರೇಲಿನ ಭೀಕರ ದಾಳಿಯ ಬಳಿಕ ಉಂಟಾಗಿರುವ ಪ್ರತಿದಾಳಿಯಿಂದ ಇಸ್ರೇಲ್ ದೇಶಾದ್ಯಂತ ಹೈ ಅಲರ್ಟ್ ಸ್ಥಿತಿ ಇದೆ. ವೈರಿ ರಾಷ್ಟ್ರದ ಆಕ್ರಮಣಗಳು ನಡೆಯುತ್ತಿದ್ದಂತೆಯೇ ಸೈರನ್‌ಗಳು ಮೊಳಗಿದಾಗ ಶೆಲ್ಟರ್‌ನೊಳಗೆ ಆಶ್ರಯ ಪಡೆಯುತ್ತಿದ್ದೇವೆ ಎಂದು ಪ್ರಸಕ್ತ ಇಸ್ರೇಲ್‌ನಲ್ಲಿರುವ ಉಪ್ಪಿನಂಗಡಿ ನಿವಾಸಿ ಅರುಣ್ ಗೋಡ್ವಿನ್ ಮಿನೇಜಸ್ ತಿಳಿಸಿದ್ದಾರೆ.

ಸದ್ಯದ ಇಸ್ರೇಲ್‌ ಪರಿಸ್ಥಿತಿ ಕುರಿತು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿರುವ ಅವರು, ಇಸ್ರೇಲ್ ಅಭೇಧ್ಯವಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ವೈರಿ ರಾಷ್ಟ್ರದ ಕ್ಷಿಪಣಿಗಳನ್ನು ಆಕಾಶದಲ್ಲೇ ಬೆನ್ನಟ್ಟಿ ಧ್ವಂಸಗೊಳಿಸಲಾಗುತ್ತಿದೆ. ಆದಾಗ್ಯೂ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದಾಗ ಕೆಲವೊಂದು ಮಿಸೈಲ್‌ಗಳು ಅಪ್ಪಳಿಸುತ್ತಿದೆ. ಕಳೆದ ರಾತ್ರಿ ಟೆಲ್ ಅವೀವ್‌ನಲ್ಲಿರುವ ನಮ್ಮ ಮನೆಯ ಸಮೀಪದಲ್ಲೇ ಮಿಸೈಲೊಂದು ಅಪ್ಪಳಿಸಿತ್ತು. ದೊಡ್ಡದಾದ ಶಬ್ದ ಕೇಳಿಸಿ ಭಯದಿಂದ ಶೆಲ್ಟರ್‌ನಿಂದ ಹೊರಗೆ ಬಂದಿದ್ದೇವೆ. ದಾಳಿ ಪ್ರತಿದಾಳಿಗಳು ರಾತ್ರಿ ವೇಳೆಯಲ್ಲೇ ನಡೆಯುತ್ತಿರುವುದರಿಂದ ಸಹಜವಾಗಿ ಭಯದ ವಾತಾವರಣ ಉಂಟಾಗಿದೆ ಎಂದಿದ್ದಾರೆ.

ಕಳೆದ ರಾತ್ರಿ ಮೂರು ಬಾರಿ ಸೈರನ್ ಮೊಳಗಿದ್ದು, ಮನೆ ಸಮೀಪದ ಶೆಲ್ಟರ್‌ನಲ್ಲಿ ರಕ್ಷಣೆ ಪಡೆದಿರುತ್ತೇವೆ. ಅಂಗಡಿ, ಮುಂಗಟ್ಟುಗಳು ಮುಚ್ಚಿವೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಹೊರಗಡೆ ಸುತ್ತಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಇರಾನ್‌ನಿಂದ ಪ್ರತಿದಾಳಿಯ ನಿರೀಕ್ಷೆಯಿಂದ ಹೆಚ್ಚಿನ ಅಲರ್ಟ್ ಇದೆ. ಯಾವುದೇ ಸಮಯದಲ್ಲಿ ಏನಾದರೂ ಸಂಭವಿಸಬಹುದೆಂಬ ಭೀತಿ ಮಾತ್ರ ಎಲ್ಲರಲ್ಲೂ ಇದೆ. ಸದ್ಯಕ್ಕೆ ಇಸ್ರೇಲ್ ಸೈನ್ಯದ ಸ್ವರಕ್ಷಣಾ ವ್ಯವಸ್ಥೆಯ ಬಲದಲ್ಲಿ ಸುರಕ್ಷಿತವಾಗಿದ್ದೇವೆ ಎಂದು ವಿವರಿಸಿದ್ದಾರೆ.

 ಇಸ್ರೇಲ್‌ನಲ್ಲಿ ಸಿಲುಕಿದ ‘ಕೈ’ ವಕ್ತಾರ

ನಟರಾಜ್‌ ಸೇರಿ 18 ಕನ್ನಡಿಗರು! 

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ವಿಮಾನ ಹಾರಾಟಗಳು ಸ್ಥಗಿತಗೊಂಡ ಪರಿಣಾಮ ಅಧ್ಯಯನ ಪ್ರವಾಸಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ 18 ಮಂದಿ ಕನ್ನಡಿಗರು ಅಲ್ಲೇ ಸಿಲುಕಿಕೊಂಡಿದ್ದಾರೆ.

ಯುದ್ಧದ ಸ್ಥಿತಿ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಇಸ್ರೇಲ್‌ನ ಟೆಲ್‌ ಅವೀವ್‌ ನಗರದಲ್ಲಿ ಕೆಪಿಸಿಸಿ ವಕ್ತಾರ ಎ.ಎನ್‌.ನಟರಾಜಗೌಡ ಸೇರಿ ಬಿ-ಪ್ಯಾಕ್‌ನ 18 ಮಂದಿ ಸದಸ್ಯರು ಸಿಲುಕಿದ್ದಾರೆ.

ಅಧ್ಯಯನ ಪ್ರವಾಸಕ್ಕಾಗಿ ತೆರಳಿದ್ದ ಕನ್ನಡಿಗರ ತಂಡ ಕಳೆದ ಒಂದು ವಾರದಿಂದ ಇಸ್ರೇಲ್‌ನಲ್ಲೇ ಇತ್ತು. ಶುಕ್ರವಾರ ಬೆಂಗಳೂರಿಗೆ ವಾಪಸಾಗಬೇಕಿತ್ತು. ಆದರೆ ಹಠಾತ್‌ ವಿಮಾನ ಹಾರಾಟ ಸ್ಥಗಿತದಿಂದ ಇಸ್ರೇಲ್‌ನಲ್ಲೇ ಉಳಿದುಕೊಳ್ಳುವಂತಾಗಿದೆ.

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ನಟರಾಜ್‌ಗೌಡ, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಅವರ ಮೂಲಕ ವಿದೇಶಾಂಗ ವ್ಯವಹಾರಗಳ ಕಚೇರಿಗೂ ಮಾಹಿತಿ ತಲುಪಿಸಿದ್ದೇವೆ. ಇಸ್ರೇಲ್‌ ಕಾನ್ಸುಲೇಟ್‌ ಅವರು ನಮ್ಮ ಜತೆಯಲ್ಲೇ ಇದ್ದಾರೆ. ಭಾರತೀಯ ರಾಯಭಾರಿ ಕಚೇರಿ ಕಟ್ಟಡ ಪಕ್ಕದಲ್ಲೇ ಇದೆ. ಯಾವಾಗ ವಿಮಾನ ಸೇವೆ ಆರಂಭವಾಗುತ್ತದೋ ಎಂಬುದು ಗೊತ್ತಿಲ್ಲದೆ ಅತಂತ್ರರಾಗಿದ್ದೇವೆ. ರಾತ್ರಿ ನಮ್ಮ ಹೋಟೆಲ್‌ನಿಂದ 1 ಕಿ.ಮೀ. ದೂರದಲ್ಲಿ ಬಾಂಬ್‌ ಬಿದ್ದಿದೆ. ಹೀಗಾಗಿ ಆತಂಕಗೊಂಡಿದ್ದೇವೆ ಎಂದರು.

PREV
Read more Articles on

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!