ಮನೆ ಮನೆ ಅಲೆಯುತ್ತಿದ್ದ ಹಮಾಸ್‌ ಉಗ್ರಗಾಮಿ ಸಂಘಟನೆ ನಾಯಕ ಸಿನ್ವರ್‌ನ ಹುಡುಕಿ ಹತ್ಯೆಗೈದ ಇಸ್ರೇಲ್‌

KannadaprabhaNewsNetwork |  
Published : Oct 19, 2024, 12:26 AM ISTUpdated : Oct 19, 2024, 04:32 AM IST
ಸಿನ್ವರ್‌ನ | Kannada Prabha

ಸಾರಾಂಶ

1200 ಇಸ್ರೇಲಿಗಳ ನರಮೇಧದ ಪ್ರಮುಖ ರೂವಾರಿ ಹಾಗೂ ಹಮಾಸ್‌ ಉಗ್ರಗಾಮಿ ಸಂಘಟನೆ ನಾಯಕ ಯಾಹ್ಯಾ ಸಿನ್ವರ್‌ನನ್ನು ಹುಡುಕಿ ಹತ್ಯೆ ಮಾಡಿದ್ದು ಹೇಗೆ ಎಂಬ ರೋಚಕ ಕಾರ್ಯಾಚರಣೆಯ ವಿವರವನ್ನು ಇಸ್ರೇಲ್‌ ಸೇನೆ ಶುಕ್ರವಾರ ನೀಡಿದೆ ಹಾಗೂ ಸಿನ್ವರ್‌ ಕೊನೇ ಕ್ಷಣಗಳ ಡ್ರೋನ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಗಾಜಾ: 1200 ಇಸ್ರೇಲಿಗಳ ನರಮೇಧದ ಪ್ರಮುಖ ರೂವಾರಿ ಹಾಗೂ ಹಮಾಸ್‌ ಉಗ್ರಗಾಮಿ ಸಂಘಟನೆ ನಾಯಕ ಯಾಹ್ಯಾ ಸಿನ್ವರ್‌ನನ್ನು ಹುಡುಕಿ ಹತ್ಯೆ ಮಾಡಿದ್ದು ಹೇಗೆ ಎಂಬ ರೋಚಕ ಕಾರ್ಯಾಚರಣೆಯ ವಿವರವನ್ನು ಇಸ್ರೇಲ್‌ ಸೇನೆ ಶುಕ್ರವಾರ ನೀಡಿದೆ ಹಾಗೂ ಸಿನ್ವರ್‌ ಕೊನೇ ಕ್ಷಣಗಳ ಡ್ರೋನ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಸೇನೆ ವಕ್ತಾರ ಡೇನಿಯಲ್‌ ಹಗರಿ ಹೇಳಿಕೆ ನೀಡಿ, ‘ಗಾಜಾದಲ್ಲಿರುವ ನಮ್ಮ ಸೇನಾ ತುಕಡಿಯು ದಕ್ಷಿಣ ಗಾಜಾದಲ್ಲಿ ಇರುವುದನ್ನು ಪತ್ತೆ ಮಾಡಿತ್ತು. ಯಾರಿಗೂ ಸಿಗಬಾರದು ಎಂದು ಆತ ಮನೆಯಿಂದ ಮನೆಗೆ ತನ್ನ ಇಬ್ಬರು ಚೇಲಾಗಳ ಜತೆ ಸೇರಿಕೊಂಡು ಅಲೆಯುತ್ತಿದ್ದ. 

ಆಗ ಸೇನೆಯು ಈ ಮೂವರ ಮೇಲೂ ಗುಂಡಿನ ದಾಳಿ ಮಾಡಿತು. ಈ ವೇಳೆ ಇಬ್ಬರು ಚೇಲಾಗಳು ಸತ್ತರು. ಸಿನ್ವರ್‌ ಒಬ್ಬನೇ ಈಗಾಗಲೇ ವಾಯುದಾಳಿಯಲ್ಲಿ ಧ್ವಂಸವಾಗಿದ್ದ ಒಂದು ಮನೆಗೆ ನುಗ್ಗಿದ’ ಎಂದರು.‘

ಆಗ ನಾವು ಸಿನ್ವರ್ ಹೊಕ್ಕ ಮನೆಗೆ ಕ್ಯಾಮೆರಾ ಇದ್ದ ಡ್ರೋನ್‌ ಕಳಿಸಿದೆವು. ಈ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ಹಾಗೂ ಮೈ-ಕೈಗೆ ಧೂಳು ಮೆತ್ತಿಕೊಂಡಿದ್ದ ಸಿನ್ವರ್‌ ಕಂಡ. ಆತ ಧೂಳಾಗಿದ್ದ ಸೋಫಾ ಮೇಲೆ ಕೂತಿದ್ದ ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದ. ಡ್ರೋನ್‌ ನೋಡಿದ ಕೂಡಲೇ ಅದರತ್ತ ಬೆತ್ತ ಎಸೆದ. ಈ ವೇಳೆ ದಾಳಿ ನಡೆಸಿ ಆತನ ಹತ್ಯೆಗೈಯಲಾಯಿತು’ ಎಂದರು.

ಸಿನ್ವರ್‌ ವೀರೋಚಿತ ಸಾವು: ಹಮಾಸ್‌ ಅಧಿಕೃತ ಘೋಷಣೆ

ಜೆರುಸಲೇಂ: ತನ್ನ ನಾಯಕ ಯಾಹ್ಯಾ ಸಿನ್ವರ್‌ ಇಸ್ರೇಲ್‌ ದಾಳಿಯಲ್ಲಿ ಸತ್ತಿದ್ದಾನೆ ಎಂದು ಹಮಾಸ್‌ ಮುಖಂಡ ಖಲೀಲ್‌ ಅಲ್‌ ಯಾಹ್ಯಾ ಶುಕ್ರವಾರ ಖಚಿತಪಡಿಸಿದ್ದಾನೆ. ‘ಸಿನ್ವರ್‌ ಕೊನೇ ಕ್ಷಣದವರೆಗೂ ವೀರೋಚಿತವಾಗಿ ಹೋರಾಡಿದ. ಶತ್ರು ಎದುರಿಗಿದ್ದರೂ ಶಸ್ತ್ರಾಸ್ತ್ರ ಝಳಪಿಸಿದ’ ಎಂದಿದ್ದಾರೆ. 

ಗುರುವಾರ ಸಿನ್ವರ್‌ನನ್ನು ದ.ಗಾಜಾದಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಹೇಳಿದ್ದರೂ ಹಮಾಸ್‌ ಖಚಿತಪಡಿಸಿರಲಿಲ್ಲ. ಈ ಬಗ್ಗೆ ಶುಕ್ರವಾರ ಟೀವಿಯಲ್ಲಿ ಹೇಳಿಕೆ ನೀಡಿರುವ ಖಲೀಲ್‌, ‘ನಿನ್ನೆ ಸಿನ್ವರ್‌ ಹತ್ಯೆ ಆಗಿದೆ. ಆದರೆ ಗಾಜಾ ಮೇಲೆ ಇಸ್ರೇಲ್ ದಾಳಿ ನಿಲ್ಲಿಸುವವರೆಗೆ ಹಾಗೂ ತನ್ನ ಪಡೆಗಳನ್ನು ಹಿಂಪಡೆವ ವರೆಗೆ ನಾವು ಇಸ್ರೇಲಿ ಒತ್ತೆಯಾಳುಗಳನ್ನು ಬಿಡಲ್ಲ’ ಎಂದಿದ್ದಾನೆ.

ಸಿನ್ವರ್‌ ಹತ್ಯೆಯಿಂದ ಯುದ್ಧಕ್ಕೆ ಹೊಸ ರೂಪ: ಹಿಜ್ಬುಲ್ಲಾ ಎಚ್ಚರಿಕೆ

ಬೈರೂತ್‌: ಹಮಾಸ್‌ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ ಬಳಿಕ ಇಸ್ರೇಲ್‌ ವಿರುದ್ಧದ ಯುದ್ಧ ಉಲ್ಬಣಿಸಿ ಹೊಸ ಹಂತಕ್ಕೆ ತಲುಪಲಿದೆ ಎಂದು ಲೆಬನಾನ್‌ನ ಹಿಜ್ಬುಲ್ಲಾ ಉಗ್ರಸಂಘಟನೆ ಎಚ್ಚರಿಸಿದೆ. ಇರಾನ್‌ ಕೂಡ ಪ್ರತಿರೋಧವನ್ನು ಬಲಪಡಿಸಿಕೊಳ್ಳುವುದಾಗಿ ಹೇಳಿದೆ.

ಗಾಜಾ ಯುದ್ಧಕ್ಕೆ ನಾಂದಿ ಹಾಡಿದ 2023 ಅ.7ರ ದಾಳಿಯ ಮುಖ್ಯ ಸಂಚುಗಾರ ಯಾಹ್ಯಾ ಸಿನ್ವರ್‌ನನ್ನು ಪ್ಯಾಲೆಸ್ತೀನ್‌ನ ಗಾಜಾ ಪ್ರದೇಶದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಬುಧವಾರ ಹೊಡೆದುರುಳಿಸಲಾಗಿತ್ತು. ಈ ಬೆಳವಣಿಗೆಯನ್ನು ಪಾಶ್ಚಿಮಾತ್ಯ ದೇಶಗಳ ನಾಯಕರು ಯುದ್ಧದ ಕೊನೆ ಹಂತ ಎಂದರೆ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮಾತ್ರ ಹಮಾಸ್‌ ಉಗ್ರರ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳ ಬಿಡುಗಡೆಯಾಗುವ ತನಕ ಸಮರ ಮುಂದುವರೆಯಲಿದೆ ಎಂದರು. ಜುಲೈನಲ್ಲಿ ನಡೆದ ಇಸ್ಮಾಯಿಲ್‌ ಹನಿಯೇ ಹತ್ಯೆ ಬಳಿಕ ಹಮಾಸ್‌ನ ಮುಂದಾಳತ್ವವನ್ನು ಸಿನ್ವರ್‌ ವಹಿಸಿಕೊಂಡಿದ್ದ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಇರಾನ್ ಯುದ್ಧಕ್ಕೆ ಪಾಕ್‌ ಪ್ರವೇಶ ಮಾಡುತ್ತಾ ?
ಅಕ್ಕಪಕ್ಕದ ದೇಶಗಳಿಗೂ ಯುದ್ಧದ ಕೊಳ್ಳಿ