- ಸರ್ಕಾರದಿಂದ 3 ದಿನದ ಗಡುವಿನ ಬೆನ್ನಲ್ಲೇ ಬೆಳವಣಿಗೆ- ಪೋಸ್ಟ್ ಅಳಿಸಿದ್ದಕ್ಕೆ ಮೆಟಾ ಜಾಗತಿಕ ತಂಡ ವಿಷಾದ
- ಡೀಪ್‌ಫೇಕ್, ಮಕ್ಕಳ ದುರ್ಬಳಕೆ ವಿಡಿಯೋಗೂ ಕ್ಷಮೆನವದೆಹಲಿ: ಇತ್ತೀಚಿನ ದೆಹಲಿ ವಿದ್ಯಾರ್ಥಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವೊಂದನ್ನು ಫೇಸ್‌ಬುಕ್‌ನಿಂದ ಕೆಲಕಾಲ ತೆಗೆದು ಹಾಕಿದ ಪ್ರಕರಣ ಸಂಬಂಧ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಮೆಟಾ ಒಡೆತನದ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಡೀಪ್‌ಫೇಕ್ ವಿಡಿಯೋ ಮತ್ತು ಮಕ್ಕಳ ದುರ್ಬಳಕೆ ವಿಡಿಯೋ, ಕೆಲವೊಂದು ಕೆಲವೊಂದು ಮಾಹಿತಿಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಲು ಭಾರೀ ಹಣ ಪಡೆದ ಪ್ರಕರಣಗಳ ಬಗ್ಗೆಯೂ ಅವರು ಕ್ಷಮೆ ಯಾಚಿಸಿದ್ದಾರೆ.ಮೇಲ್ಕಂಡ ಬೆಳವಣಿಗೆಗಳ ಬಗ್ಗೆ ಜುಕರ್‌ಬರ್ಗ್ 3 ದಿನಗಳಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಬುಧವಾರ ಗಡುವು ವಿಧಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಸರ್ಕಾರದ ಸಮನ್ಸ್ ಹಿನ್ನೆಲೆಯಲ್ಲಿ ಅಮೆರಿಕದಿಂದ ತುರ್ತಾಗಿ ಬುಧವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದ ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯಲ್ ಕಾಪ್ಲಾನ್ ನೇತೃತ್ವದ ತಂಡವು ಮೊದಲಿಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಬಳಿಕ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿತು. ಈ ವೇಳೆ ಮೋದಿ ಪೋಸ್ಟ್ ರದ್ದು ಮಾಡಿದ್ದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮೆಟಾ ಲಿಖಿತ ಸ್ವರೂಪದಲ್ಲಿ ಕ್ಷಮೆ ಯಾಚಿಸಿತು ಮತ್ತು ಬೆಳವಣಿಗೆ ಬಗ್ಗೆ ವಿಷಾದ ವ್ಯಕ್ತಪಡಿಸಿತು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಅದರೆ ಈ ಕುರಿತು ಮೆಟಾದ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಲಿಲ್ಲ. ಎರಡು ದಿನಗಳ ಹಿಂದೆ ಭಾರತದಲ್ಲಿ ಮೆಟಾ ಅಧಿಕಾರಿಗಳು ಸಂಸದೀಯ ಸ್ಥಾಯಿ ಸಮಿತಿ ಸದಸ್ಯರ ಮುಂದೆ ಹಾಜರಾಗಿ ಮೋದಿ ವಿಡಿಯೋ ರದ್ದಾಗಿದ್ದು ತಾಂತ್ರಿಕ ತೊಂದರೆಯಿಂದಾಗಿ. ಈ ಕುರಿತು ಕ್ಷಮೆ ಯಾಚಿಸಲು ಸಿದ್ಧ ಎಂದು ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಸಮಿತಿ, ಮೆಟಾ ಭಾರತದಿಂದ ಸಾವಿರಾರು ಕೋಟಿ ರು. ಆದಾಯ ಸಂಗ್ರಹಿಸುತ್ತಿದೆ. ಆದರೆ ಇಲ್ಲಿನ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ಘಟನೆಯ ಹೊಣೆಯನ್ನು ಮೆಟಾ ಹೊರಬೇಕು ಮತ್ತು ಸ್ವತಃ ಜುಕರ್‌ಬರ್ಗ್ ಅವರೇ ಈ ಕುರಿತು ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಕ್ರಮ ಎದುರಿಸಲು ಸಿದ್ಧರಾಗಬೇಕು ಎಂದು ಎಚ್ಚರಿಸಿತ್ತು.