ನಟ ಅಮಿತಾಭ್‌ ಬಚ್ಚನ್‌ ಹಾಗೂ ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಅವರಿಗೆ ಗ್ಯಾಂಗ್‌ಸ್ಟರ್‌ ಗೋಲ್ಡಿ ಧಿಲ್ಲೋನ್‌ ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಹಾಕಿದ್ದಾನೆ. ಇತ್ತೀಚಿನ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಬೆದರಿಕೆ ಬೆನ್ನಲ್ಲೇ ಈ ಹೊಸ ಬೆದರಿಕೆ ಬಂದಿದೆ.

ಮುಂಬೈ: ನಟ ಅಮಿತಾಭ್‌ ಬಚ್ಚನ್‌ ಹಾಗೂ ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಅವರಿಗೆ ಗ್ಯಾಂಗ್‌ಸ್ಟರ್‌ ಗೋಲ್ಡಿ ಧಿಲ್ಲೋನ್‌ ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಹಾಕಿದ್ದಾನೆ. ಇತ್ತೀಚಿನ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಬೆದರಿಕೆ ಬೆನ್ನಲ್ಲೇ ಈ ಹೊಸ ಬೆದರಿಕೆ ಬಂದಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಹಾಕಲಾಗಿದ್ದು, ಅದರಲ್ಲಿ ಇತ್ತೀಚೆಗೆ ನಡೆದ ಧಿಲ್ಲೋನ್‌ ಗ್ಯಾಂಗ್ ಸದಸ್ಯರ ಬಂಧನಕ್ಕೆ ಕಿಡಿಕಾರಲಾಗಿದೆ.

‘ನನ್ನ ಸಹವರ್ತಿಗಳ ಬಂಧನದಿಂದ ನನ್ನ ಪ್ಲ್ಯಾನ್‌ಗೆ ಯಾವುದೇ ಅಡ್ಡಿಯಾಗಿಲ್ಲ. ಮುಂಬೈನಲ್ಲಿ ನನ್ನ ಸುಮಾರು 200 ಸಹಚರರು ಸಕ್ರಿಯರಾಗಿದ್ದಾರೆ. ನಟನನ್ನು ಕೊಲ್ಲಲು ಸಿದ್ಧರಾಗಿದ್ದಾರೆ. ಸಿಖ್ಖರ ವಿರುದ್ಧ ಮಾತನಾಡುವ ಜನರನ್ನು ಮತ್ತು ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಅವರನ್ನು ಬುಲೆಟ್‌ ಪ್ರೂಫ್‌ ಗ್ಲಾಸ್‌ ರಕ್ಷಿಸುವುದಿಲ್ಲ. 1984ರ ಸಿಖ್‌ ವಿರೋಧಿ ಹಿಂಸಾಚಾರಕ್ಕೆ ಕಾರಣರಾದವರನ್ನು ನಾವು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆಯ ಪೋಸ್ಟ್‌ ಹಾಕಲಾಗಿದೆ.

ಪ್ರತಿ ಭಾನುವಾರ ಅಮಿತಾಭ್‌ ತಮ್ಮ ಮುನೆಯ ಮುಂಭಾಗದಲ್ಲಿ ನಿಂತು ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ. ಇತ್ತೀಚೆಗೆ ಅವರಿಗೆ ಜೀವ ಬೆದರಿಕೆ ಬಂದ ಬಳಿಕ ಅವರು ಬುಲೆಟ್‌ಫ್ರೂಫ್‌ ಗ್ಲಾಸ್‌ನೊಳಗೆ ನಿಂತು ದೂರದಿಂದಲೇ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗ್ಯಾಂಗ್‌ಸ್ಟರ್‌ಗಳು ಬಚ್ಚನ್‌ಗೆ ಈ ರೀತಿ ಬೆದರಿಕೆ ಹಾಕಿದ್ದಾರೆ. ಇತ್ತೀಚೆಗಷ್ಟೇ ಬಚ್ಚನ್‌ ಅವರ ಮನೆ ಮೇಲೆ ಗುಂಡಿನ ದಾಳಿಗೆ ಸಂಚು ರೂಪಿಸಿದ ಆರೋಪದಲ್ಲಿ ಪೊಲೀಸರು ಧಿಲ್ಲೋನ್‌ ನಂಟಿದ್ದ ವಿಕಾಸ್ ಠಾಕೂರ್ ಮತ್ತು ದೀಪಕ್ ಸಿಂಗ್ ಎಂಬುವರನ್ನು ಬಂಧಿಸಿದ್ದರು.

ಪಾರಾದೆವು- ಬಚ್ಚನ್:

ಈ ನಡುವೆ ಬಚ್ಚನ್‌ ತಮ್ಮ ಎಕ್ಸ್‌ ಖಾತೆಯಲ್ಲಿ ‘ಬಚ್‌ ಗಯೇ’ (ಪಾರಾದೆವು) ಎಂದು ನಿಗೂಢ ಪೋಸ್ಟ್‌ ಮಾಡಿ ಕುತೂಹಲ ಮೂಡಿಸಿದ್ದಾರೆ.

ಸತತ ಜೀವ ಬೆದರಿಕೆ

ಇತ್ತೀಚೆಗೆ ಅಮಿತಾಭ್‌, ಅಭಿಷೇಕ್‌ಗೆ ಬಿಷ್ಣೋಯ್‌ ಗ್ಯಾಂಗ್‌ ಹೆಸರಲ್ಲಿ ಬೆದರಿಕೆ ಕರೆ

ಬಳಿಕ ಬಚ್ಚನ್‌ ಮನೆ ಮೇಲೆ ನಡೆದ ಗುಂಡಿನ ದಾಳಿ ಕೇಸಲ್ಲಿ ತಂಡದ ಇಬ್ಬರ ಸೆರೆ

ಅದರ ಬೆನ್ನಲ್ಲೇ ಗ್ಯಾಂಗ್‌ಸ್ಟರ್‌ ಗೋಲ್ಡಿ ಧಿಲ್ಲೋನ್‌ ಹೆಸರಲ್ಲಿ ಜೀವ ಬೆದರಿಕೆ ರವಾನೆ

ನಿಮ್ಮ, ನಿಮ್ಮ ಪುತ್ರನ ಹತ್ಯೆಗೆ ನಮ್ಮ 200 ತಂಡ ಸಿದ್ಧವಾಗಿದೆ ಎಂದು ಎಚ್ಚರಿಕೆ

ನೀವು ಬುಲೆಟ್‌ಫ್ರೂಫ್‌ ಗೋಡೆ ನಡುವೆ ನಿಂತರೂ ತಪ್ಪಿಸಿಕೊಳ್ಳಲಾಗಲ್ಲ ಎಂದು ಕಿಡಿ

ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಬಚ್ಚನ್‌ ಮನೆಗೆ ಭದ್ರತೆ ಹೆಚ್ಚಿಸಿದ ಪೊಲೀಸರು

ಬಚ್ಚನ್‌ ಮೇಲೇಕೆ ಸಿಟ್ಟು?

1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೆಹಲಿಯಲ್ಲಿ ಭಾರೀ ಪ್ರಮಾಣದ ಸಿಖ್‌ ವಿರೋಧಿ ಹತ್ಯಾಕಾಂಡ ನಡೆದಿತ್ತು. ಈ ವೇಳೆ ಸಿಖ್ಖರ ವಿರುದ್ಧ ಅಮಿತಾಭ್‌ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು ಎಂಬುದು ತೀವ್ರಗಾಮಿ ಸಿಖ್‌ ಸಂಘಟನೆಗಳ ವಾದ. ಹೀಗಾಗಿಯೇ ಅಂಥ ಹೇಳಿಕೆ ನೀಡಿದವರು ಎಲ್ಲೇ ಇದ್ದರೂ ಬಿಡುವುದಿಲ್ಲ. ಅವರನ್ನು ಹತ್ಯೆ ಮಾಡುತ್ತೀವಿ ಎಂಬುದು ಗೋಲ್ಡಿ ಧಿಲ್ಲೋನ್‌ ಎಚ್ಚರಿಕೆ ನೀಡಲು ಕಾರಣ ಎನ್ನಲಾಗಿದೆ. ಆದರೆ ತಾವು ಅಂಥ ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ ಎಂದು ಬಚ್ಚನ್‌ ಹಲವು ಬಾರಿ ಸ್ಪಷ್ಟನೆ ನೀಡಿದ್ದರು.