ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ‘ಅಕ್ವನ್‌’ (ದುಷ್ಟಶಕ್ತಿ ಎಂದರ್ಥ) ಚಂಡಮಾರುತದ ಪರಿಣಾಮವಾಗಿ ತಮಿಳುನಾಡಿನ ತೂತ್ತುಕುಡಿ, ನಾಗರ್‌ಕೋಯಿಲ್, ಕನ್ಯಾಕುಮಾರಿ ಸೇರಿ ಹಲವು ಪ್ರದೇಶಗಳಲ್ಲಿ ಸೋಮವಾರ ಮಳೆ ಸುರಿದಿದೆ.

ಚೆನ್ನೈ : ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ‘ಅಕ್ವನ್‌’ (ದುಷ್ಟಶಕ್ತಿ ಎಂದರ್ಥ) ಚಂಡಮಾರುತದ ಪರಿಣಾಮವಾಗಿ ತಮಿಳುನಾಡಿನ ತೂತ್ತುಕುಡಿ, ನಾಗರ್‌ಕೋಯಿಲ್, ಕನ್ಯಾಕುಮಾರಿ ಸೇರಿ ಹಲವು ಪ್ರದೇಶಗಳಲ್ಲಿ ಸೋಮವಾರ ಮಳೆ ಸುರಿದಿದೆ.

ಮಂಗಳವಾರ ಚಂಡಮಾರುತ ತೀವ್ರ

ಮಂಗಳವಾರ ಚಂಡಮಾರುತ ತೀವ್ರಗೊಂಡು ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ತಮಿಳುನಾಡು, ಆಂಧ್ರ ಮತ್ತು ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಮಂಗಳವಾರದಿಂದ ಚೆನ್ನೈ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಗಂಟೆಗೆ 40-50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಬುಧವಾರದಿಂದ ಕಾಂಚೀಪುರಂ, ರಾಣಿಪೇಟೆ, ತಿರುವಣ್ಣಾಮಲೈ, ವಿಲ್ಲುಪುರಂ, ಕಡಲೂರು, ಮೈಲಾಡುತುರೈ ಜಿಲ್ಲೆಗಳು ಹಾಗೂ ಪುದುಚೇರಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ತೂತ್ತುಕುಡಿಯಲ್ಲಿ ಗರಿಷ್ಠ 20 ಮಿ.ಮೀ ಮಳೆಯಾಗಿದ್ದು, ನಾಗರ್‌ಕೋಯಿಲ್ ಮತ್ತು ಕನ್ಯಾಕುಮಾರಿಯಲ್ಲಿ ತಲಾ 10 ಮಿ.ಮೀ ಮಳೆಯಾಗಿದೆ.

ಬಿರುಗಾಳಿ ಸಹಿತ ಭಾರಿ ಮಳೆ

ಇತ್ತ ಆಂಧ್ರದ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬಂಗಾಳದ ದಕ್ಷಿಣ ಜಿಲ್ಲೆಗಳ ಮೇಲೂ ಚಂಡಮಾರುತ ಪ್ರಭಾವ ಬೀರಲಿದ್ದು, ನ.19ರಿಂದ 21ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.