ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿದ್ದ ಹೈದ್ರಾಬಾದ್ ಮೂಲದ ಮೊಹಮ್ಮದ್ ಅಸ್ಫಾನ್ ಎಂಬ ವ್ಯಕ್ತಿ ಸಾವನ್ನಪ್ಪಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿದ್ದ ಹೈದ್ರಾಬಾದ್ ಮೂಲದ ಮೊಹಮ್ಮದ್ ಅಸ್ಫಾನ್ ಎಂಬ ವ್ಯಕ್ತಿ ಸಾವನ್ನಪ್ಪಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಉಕ್ರೇನ್‌ಗೆ ಹೊಂದಿಕೊಂಡಿರುವ ರಷ್ಯಾದ ಗಡಿಯ ಯುದ್ಧಭೂಮಿಯಲ್ಲಿ ಹೋರಾಡುವ ವೇಳೆ ಉಕ್ರೇನ್ ಯೋಧರು ಹಾರಿಸಿದ ಗುಂಡಿಗೆ ಅಸ್ಫಾನ್ ಸಾವನ್ನಪ್ಪಿದ ವಿಷಯ ಆತನ ಕುಟುಂಬಕ್ಕೆ ರವಾನೆಯಾಗಿದೆ.ಕೆಲ ದಿನಗಳ ಹಿಂದಷ್ಟೇ ಗುಜರಾತ್ ಮೂಲದ ಹಮಿಲ್ ಮಂಗುಕಿಯಾ ಎಂಬ ವ್ಯಕ್ತಿ ಕೂಡಾ ಉಕ್ರೇನ್ ನಡೆಸಿದ ಕ್ಷಿಪಣಿ ದಾಳಿಗೆ ಬಲಿಯಾಗಿದ್ದ. ಹೀಗಾಗಿ ಇವರ ಜೊತೆಗೇ ರಷ್ಯಾ ಯುದ್ಧ ಭೂಮಿಯಲ್ಲಿ ಹೋರಾಡುತ್ತಿರುವ ಕಲಬುರಗಿ ಮೂಲದ ಮೂವರು ಕನ್ನಡಿಗರು ಕೂಡಾ ಆತಂಕ ಎದುರಿಸುವಂತಾಗಿದೆ.
ವಂಚನೆ:ಕೆಲ ದಿನಗಳ ಹಿಂದೆ ಹೈದ್ರಾಬಾದ್ ಮೂಲದ ಸಯ್ಯದ್ ಸಲ್ಮಾನ್ ಎಂಬಾತ ತನ್ನ ಕುಟುಂಬ ಸದಸ್ಯರಿಗೆ ದೂರವಾಣಿ ಕರೆ ಮಾಡಿ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಜೊತೆಗೆ ರಷ್ಯಾಕ್ಕೆ ತೆರಳಿದ್ದ ಅಸ್ಫಾನ್‌ನ ಪೋಷಕರು ಹೈದ್ರಾಬಾದ್ ಸಂಸದ ಅಸಾದುದ್ದೀನ್ ಒವೈಸಿನ ನೆರವು ಕೋರಿದ್ದರು. ಈ ಹಿನ್ನೆಲೆಯಲ್ಲಿ ಒವೈಸಿ, ರಷ್ಯಾ ರಾಜಧಾನಿ ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿ ಸಂಪರ್ಕ ಮಾಡಿ ಅಸ್ಫಾನ್ ಸೇರಿದಂತೆ ಭಾರತೀಯರ ರಕ್ಷಣೆಗೆ ಮನವಿ ಮಾಡಿದ ವೇಳೆ ಅಸ್ಫಾನ್ ಸಾವನ್ನಪ್ಪಿದ ವಿಷಯವನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದರಿಂದ ಕುಟುಂಬ ಸದಸ್ಯರು ಆಘಾತಕ್ಕೆ ಒಳಗಾಗಿದ್ದಾರೆ.ನೌಕರಿ ವಂಚನೆ:ಮಹಾರಾಷ್ಟ್ರ ಮೂಲದ ಮಧ್ಯವರ್ತಿಯೊಬ್ಬ ಹಲವು ಭಾರತೀಯ ಯುವಕರಿಗೆ ರಷ್ಯಾ ಸೇನೆಯಲ್ಲಿ ಮಾಸಿಕ 2 ಲಕ್ಷ ರು.ವೇತನದ ಉದ್ಯೋಗ ನೀಡುವುದಾಗಿ ಹೇಳಿ ಕಳೆದ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಕಳುಹಿಸಿಕೊಟ್ಟಿದ್ದ. ಆದರೆ ಅಲ್ಲಿಗೆ ತೆರಳಿದ ಬಳಿಕ, ರಷ್ಯಾ ಪರವಾಗಿ ಯುದ್ಧದಲ್ಲಿ ಹೋರಾಡುವ ವ್ಯಾಗ್ನರ್ ಎಂಬ ಖಾಸಗಿ ಸೇನಾಪಡೆಗೆ ಸೇರಲು ತಮ್ಮನ್ನು ಕಳುಹಿಸಿರುವ ವಿಷಯ ಭಾರತೀಯರ ಗಮನಕ್ಕೆ ಬಂದಿತ್ತು. ಹೀಗೆ ಹೋದವರಲ್ಲಿ ಕರ್ನಾಟಕದ ಕಲಬುರಗಿಯ ಮೂವರು ಕೂಡಾ ಸೇರಿದ್ದರು. ಇವರನ್ನೆಲ್ಲಾ ಬಿಡುಗಡೆ ಮಾಡುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ರಷ್ಯಾಕ್ಕೆ ಕೋರಿಕೆ ಕೂಡಾ ಸಲ್ಲಿಸಿತ್ತು.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.