ಎಲಾನ್ ಮಸ್ಕ್ 3 ವರ್ಷಗಳ ಹಿಂದೆ ಆರಂಭಿಸಿದ್ದ ವೇಗದೂತ ಪ್ರಯಾಣದ ಹೈಪರ್‌ಲೂಪ್ ಯೋಜನೆಯು ಎಂಜಿನಿಯರಿಂಗ್ ಅನುಮಾನಗಳಿಂದಾಗಿ ಸ್ಥಗಿತಗೊಂಡಿದೆ.
ನವದೆಹಲಿ: ಪ್ರಯಾಣದಲ್ಲಿ ಕ್ರಾಂತಿಯನ್ನೇ ಉಂಟು ಮಾಡಲಿದೆ ಎಂದು ಹೇಳಲಾಗಿದ್ದ ಹೈಪರ್‌ಲೂಪ್ ಯೋಜನೆ ಆರಂಭಕ್ಕೂ ಮುನ್ನವೇ ಅಂತ್ಯಗೊಂಡಿದೆ. ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಆರಂಭಿಸಿದ್ದ ಹೈಪರ್‌ಲೂಪ್ ಒನ್ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೈಪರ್‌ಲೂಪ್ ಯೋಜನೆ ಅಂತ್ಯವಾಗಿರುವ ಕುರಿತಾಗಿ ವರದಿ ಪ್ರಕಟಿಸಿರುವ ಬ್ಲೂಮ್‌ಬರ್ಗ್, ‘ಹೈಪರ್‌ಲೂಪ್ ಒನ್ ಯೋಜನೆಯಲ್ಲಿ ಹಣ ತೊಡಗಿಸಿದ್ದ ರಿಚರ್ಡ್ ಬ್ರಾನ್‌ಸನ್ ತಮ್ಮ ಹಣವನ್ನು ಹಿಂಪಡೆದುಕೊಂಡಿದ್ದಾರೆ. ಅಲ್ಲದೇ ಈ ಕಂಪನಿಯಲ್ಲಿರುವ ಉಳಿದ ನೌಕರರನ್ನು ಮುಂದಿನ ವರ್ಷಾಂತ್ಯದ ವೇಳೆಗೆ ವಜಾ ಮಾಡಲಾಗುತ್ತದೆ’ ಎಂದು ಹೇಳಿದೆ. ಏನಿದು ಹೈಪರ್‌ಲೂಪ್ ಯೋಜನೆ:ಅಯಸ್ಕಾಂತದ ಶಕ್ತಿಯನ್ನು ಬಳಸಿಕೊಂಡು ಪೈಪ್ ಮುಖಾಂತರ ಅತಿವೇಗದ ಸಂಚಾರ ಸೌಲಭ್ಯವನ್ನು ಒದಗಿಸುವುದು ಹೈಪರ್‌ಲೂಪ್ ಯೋಜನೆಯಾಗಿದೆ. ಇದರಲ್ಲಿ ರೈಲುಗಳು ಗಂಟೆಗೆ 1127 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಅಲ್ಲದೇ ಇದು ಈಗಿರುವ ಎಲ್ಲಾ ಸಾರಿಗೆ ಸೌಲಭ್ಯಗಳಿಗೆ ಹೋಲಿಸಿದರೆ ಇದು ಹೆಚ್ಚು ಪರಿಸರಸ್ನೇಹಿಯಾಗಿರಲಿದೆ ಎನ್ನಲಾಗಿತ್ತು. ಹೀಗಾಗಿ ಎಲಾನ್ ಮಸ್ಕ್ ಈ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿ ಹೈಪರ್‌ಲೂಪ್ ಒನ್ ಯೋಜನೆಯನ್ನು ಆರಂಭಿಸಿದ್ದರು. ಅಮೆರಿಕದ ನೆವಾಡ ಮರುಭೂಮಿಯಲ್ಲಿ ಕೆಲವು ಪ್ರತಿಕೃತಿಗಳನ್ನು ರಚನೆ ಮಾಡಲಾಗಿತ್ತು. ಆದರೆ ಇದರ ಎಂಜಿನಿಯರಿಂಗ್ ವ್ಯವಸ್ಥೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತು ವಿಶ್ವದ ಯಾವುದೇ ದೇಶಗಳಿಂದಲೂ ಯೋಜನೆ ಆರಂಭಕ್ಕೆ ಪ್ರಸ್ತಾವ ಬರದೇ ಇರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಗಿದೆ ಎಂದು ಮೂಲಗಳನ್ನುಲ್ಲೇಖಿಸಿ ವರದಿ ಮಾಡಲಾಗಿದೆ. 2020ರಲ್ಲಿ ಮೊದಲು ಲೈಪರ್‌ಲೂಪ್‌ನ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿತ್ತು. ಈ ವೇಳೆ 170 ಕಿ.ಮೀ. ವೇಗವನ್ನು ಸಾಧಿಸಲಾಗಿತ್ತು. ಇದಾದ ಬಳಿಕ 2022 ಯೋಜನೆಯನ್ನು ಬದಲಾಯಿಸಿರುವುದಾಗಿ ಘೋಷಿಸಿದ ಮಸ್ಕ್, ಜನರ ಬದಲು ಸರಕನ್ನು ಇದರಲ್ಲಿ ಸಾಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು. ಇದಾದ ಬಳಿಕ ಒಂದಷ್ಟು ಹೂಡಿಕೆದಾರರು ಯೋಜನೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಈ ಯೋಜನೆಯನ್ನು ಇದೀಗ ಕೈಬಿಡಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ.ಬೆಂಗಳೂರಲ್ಲೂ ಆರಂಭಕ್ಕೆ ಚಿಂತನೆ!ಹೈಪರ್‌ಲೂಪ್ ಯೋಜನೆಯನ್ನು ಬೆಂಗಳೂರು ವಿಮಾನ ನಿಲ್ದಾಣದಿಂದಲೂ ಆರಂಭಿಸಲು ನಿರ್ಧರಿಸಲಾಗಿತ್ತು. ಬೆಂಗಳೂರು ವಿಮಾನ ನಿಲ್ದಾಣದಿಂದ ನಗರ ಕೇಂದ್ರಕ್ಕೆ ಹೈಪರ್‌ಲೂಪ್ ಅಳವಡಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಬಳಿಕ ಡ್ರೋನ್ ಟ್ಯಾಕ್ಸಿ ಸೇರಿದಂತೆ ಇತರ ಸಂಚಾರ ವ್ಯವಸ್ಥೆಗಳ ಬಗ್ಗೆ ಚಿಂತನೆ ಆರಂಭವಾಗಿತ್ತು.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.