ಯುದ್ಧ ನಿಲ್ಲದಿದ್ರೆ ಭಾರತಕ್ಕೆ ತೈಲ, ಅನಿಲ ಆತಂಕ!

Published : Mar 04, 2026, 05:10 AM IST
Crude Oil

ಸಾರಾಂಶ

ಮಧ್ಯಪ್ರಾಚ್ಯದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಯುದ್ಧವು, ತನ್ನ ತೈಲ ಮತ್ತು ಅನಿಲದ ಬೇಡಿಕೆಯ ಶೇ.88ರಷ್ಟಕ್ಕೆ ವಿದೇಶಗಳನ್ನೇ ಅವಲಂಬಿಸಿರುವ ಭಾರತಕ್ಕೆ ಭಾರೀ ಪ್ರಮಾಣದ ಆತಂಕ ತಂದೊಡ್ಡಿದೆ.

 ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಯುದ್ಧವು, ತನ್ನ ತೈಲ ಮತ್ತು ಅನಿಲದ ಬೇಡಿಕೆಯ ಶೇ.88ರಷ್ಟಕ್ಕೆ ವಿದೇಶಗಳನ್ನೇ ಅವಲಂಬಿಸಿರುವ ಭಾರತಕ್ಕೆ ಭಾರೀ ಪ್ರಮಾಣದ ಆತಂಕ ತಂದೊಡ್ಡಿದೆ. ಒಂದು ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದಂತೆ ಯುದ್ಧವೇನಾದರೂ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ದಿನಗಳ ಕಾಲ ನಡೆದರೆ ಪರಿಸ್ಥಿತಿ ಬಿಗಡಾಯಿಸಲಾಗಿದೆ.

ಮೂಲಗಳ ಪ್ರಕಾರ, ಸದ್ಯ ದೇಶದ ಸಂಗ್ರಹಾಗಾರ ಮತ್ತು ವಿವಿಧ ದೇಶಗಳಿಂದ ಆಗಮಿಸುತ್ತಿರುವ ತೈಲವನ್ನು ಸೇರಿಸಿದರೆ ಒಟ್ಟು ಸಂಗ್ರಹದ ಪ್ರಮಾಣ ಅಂದಾಜು 10 ಕೋಟಿ ಬ್ಯಾರಲ್‌ ಆಗಲಿದೆ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಅನಿಲ ಸಂಗ್ರಹವೂ ಇದೆ. ಇದು ದೇಶದ 45 ದಿನಗಳ ಬೇಡಿಕೆ ಪೂರೈಸಲು ಸಾಕು.

ಆದರೆ ಭಾರತಕ್ಕೆ ಪೂರೈಕೆಯಾಗುವ ಒಟ್ಟು ತೈಲ ಮತ್ತು ಅನಿಲದಲ್ಲಿ ಶೇ.50ಕ್ಕಿಂತ ಹೆಚ್ಚಿನ ಪಾಲು ಹೋರ್ಮುಜ್‌ ಜಲಸಂಧಿ ಮೂಲಕವೇ ಬರುತ್ತದೆ. ಆದರೆ ಈ ಜಲಸಂಧಿಯನ್ನು ಇದೀಗ ಇರಾನ್‌ ಮುಚ್ಚಿದೆ. ಹೀಗಾಗಿ ಯುದ್ಧ ನಿಂತು, ಜಲಸಂಧಿ ಮತ್ತೆ ಸರಕು ಹಡಗುಗಳ ಸಂಚಾರಕ್ಕೆ ಮುಕ್ತ ಆಗುವವರೆಗೂ ಭಾರತಕ್ಕೆ ತೈಲ ಮತ್ತು ಅನಿಲ ಎರಡೂ ಆಮದಾಗುವುದಿಲ್ಲ. ಆಗ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕತಾರ್‌ ಅನಿಲ ಸ್ಥಗಿತ:

ಈ ನಡುವೆ ಭಾರತದ ಅತಿದೊಡ್ಡ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಪೂರೈಕೆ ದೇಶವಾದ ಕತಾರ್‌ ಮೇಲೆ ಇರಾನ್‌ ದಾಳಿ ನಡೆಸಿದ ಬಳಿಕ, ಅದು ತನ್ನ ಎಲ್ಲ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿದೆ. ಪರಿಣಾಮ, ಕತಾರ್ ಭಾರತಕ್ಕೆ ಅನಿಲ ಸರಬರಾಜು ಮಾಡುವ ದೀರ್ಘಾವಧಿ ಒಪ್ಪಂದ ಸ್ಥಗಿತಗೊಳಿಸಿದೆ. ಭಾರತ ವಾರ್ಷಿಕವಾಗಿ ಸುಮಾರು 2.7 ಕೋಟಿ ಟನ್‌ ಎಲ್‌ಎನ್‌ಜಿ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಕತಾರ್‌ನ ಪಾಲು ಶೇ.40ರಿಂದ 52ರವರೆಗೆ ಇದೆ. ಈಗ ಕತಾರ್‌ನ ರಾಸ್ ಲಫ್ಫಾನ್ ಮತ್ತು ಮೆಸೈದ್ ಸೌಲಭ್ಯಗಳ ಮೇಲೆ ಇರಾನ್‌ ದಾಳಿ ನಡೆದ ನಂತರ ಉತ್ಪಾದನೆ ಸಂಪೂರ್ಣವಾಗಿ ನಿಂತಿದೆ. ಇದರಿಂದ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಭಾರತದ ಉದ್ಯಮಗಳಿಗೆ ಶೇ.10ರಿಂದ 40 ಅನಿಲ ಸರಬರಾಜು ಕಡಿತಗೊಂಡಿದೆ.

ರಫ್ತು ಕಡಿತ:

ಈ ನಡುವೆ ಕೇಂದ್ರ ಸರ್ಕಾರ ಭಾರತೀಯ ರಿಫೈನರಿಗಳಿಗೆ, ರಫ್ತು ಕಡಿತಗೊಳಿಸಿ ದೇಶೀಯ ಕಂಪನಿಗಳಿಗೆ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಹೆಚ್ಚಿಸುವ ಕುರಿತು ಸೂಚನೆ ನೀಡುವ ಕುರಿತು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಇದರ ಜೊತೆಗೆ, ಒಂದು ವೇಳೆ ಮಧ್ಯಪ್ರಾಚ್ಯ ಬಿಕ್ಕಟ್ಟು ಹಲವು ದಿನಗಳ ಕಾಲ ಮುಂದುವರಿದರೆ ಗಲ್ಫ್‌ ರಾಷ್ಟ್ರಗಳಿಗೆ ಪರ್ಯಾಯವಾಗಿ ಅಮೆರಿಕ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕ ದೇಶಗಳಿಂದ ಹೆಚ್ಚಿನ ತೈಲ ತರಿಸಿಕೊಳ್ಳಲು ಪ್ರಸ್ತಾಪವನ್ನೂ ಸಿದ್ಧಪಡಿಸಿದೆ. ಜೊತೆಗೆ ಅಮೆರಿಕದ ಒತ್ತಡದ ಕಾರಣ ರಷ್ಯಾದಿಂದ ತೈಲ ಆಮದು ಸ್ಥಗಿತಗೊಳಿಸಲಾಗಿದ್ದು, ಅಲ್ಲಿಂದ ಮರಳಿ ತೈಲ ಆಮದಿನ ಸಾಧ್ಯತೆಯೂ ಇಲ್ಲದಿಲ್ಲ. ಈ ಬಗ್ಗೆ ರಷ್ಯಾ ಕೂಡಾ ಈಗಾಗಲೇ ಭಾರತಕ್ಕೆ ಆಫರ್‌ ನೀಡಿದೆ ಎನ್ನಲಾಗಿದೆ.

ಅಪಾಯ ಏನು?:

ದೇಶದ ಸರಕು ಸಾಗಣೆ ವ್ಯವಸ್ಥೆ ಬಹುತೇಕ ವಾಹನಗಳನ್ನು ಅವಲಂಬಿಸಿದೆ. ಒಂದು ವೇಳೆ ಪೆಟ್ರೋಲ್‌, ಡೀಸೆಲ್‌ ಸಿಗದೇ ಹೋದರೆ ಸರಕು ಸಾಗಣೆ ವ್ಯವಸ್ಥೆ ಪೂರ್ಣ ಸ್ಥಗಿತಗೊಳ್ಳಲಿದೆ. ಉದ್ಯಮಗಳು ಕೂಡಾ ಡೀಸೆಲ್‌ ಮೇಲೆ ಅವಲಂಬಿತವಾಗಿದೆ. ಇನ್ನು ಅನಿಲ ಕೂಡಾ ಉದ್ಯಮ ಮತ್ತು ವಾಹನಗಳಿಗೆ ಅತ್ಯಗತ್ಯ. ಹೀಗಾಗಿ ಪೂರೈಕೆಯಲ್ಲಿನ ವ್ಯತ್ಯಯ ದೇಶದ ಅರ್ಥ ವ್ಯವಸ್ಥೆಯನ್ನೇ ಹದಗೆಡಿಸಬಲ್ಲದಾಗಿದೆ. ಜೊತೆಗೆ ತೈಲ, ಅನಿಲದ ಬೆಲೆ ಹೆಚ್ಚಳವು ದೇಶದ ವಿದೇಶಿ ವಿನಿಮಯ ಸಂಗ್ರಹ ಕರಗಿಸುವುದರ ಜೊತೆಗೆ ಬೊಕ್ಕಸದ ಮೇಲೂ ಭಾರೀ ಹೊರೆ ಹೊರಿಸಲಿದೆ.

₹10000 ಕೋಟಿ ಸರಕಿರುವ ಭಾರತ ಹಡಗು ಅತಂತ್ರ

ನವದೆಹಲಿ: ಹೋರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡಿರುವ ಇರಾನ್‌, ಅದನ್ನು ಬಳಸುವ ಹಡಗುಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಇದರಿಂದಾಗಿ ಭಾರತದ 27 ಹಡಗುಗಳು ಅಲ್ಲಿ ಸಿಲುಕಿವೆ. ಅವುಗಳಲ್ಲಿ 10 ಸಾವಿರ ಕೋಟಿ ರು. ಮೌಲ್ಯದ ಸರಕುಗಳು ಇವೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಕೊಲ್ಲಿ ಯುದ್ಧ ಇನ್ನಷ್ಟು ರೌದ್ರ!
ದುಬೈನ ಅತಿ ಸುರಕ್ಷಿತ ನಗರ ಖ್ಯಾತಿಗೆ ಯುದ್ಧದ ಧಕ್ಕೆ