ಚೀನಾ ಮೇಲೆ ಕಣ್ಣು: ಬ್ರಹ್ಮೋಸ್ ಕ್ಷಿಪಣಿ ಫಿಲಿಪ್ಪೀನ್ಸ್‌ಗೆ

KannadaprabhaNewsNetwork | Updated : Apr 20 2024, 04:08 AM IST

ಸಾರಾಂಶ

ಬ್ರಹ್ಮೋಸ್‌ ಕ್ಷಿಪಣಿಯನ್ನು ಭಾರತ ಫಿಲಿಪ್ಪೀನ್ಸ್‌ಗೆ ಹಸ್ತಾಂತರ ಮಾಡುವುದರೊಂದಿಗೆ ರಕ್ಷಣಾ ವಲಯದಲ್ಲಿ ರಫ್ತುದಾರ ದೇಶವಾಗಿ ಬದಲಾಗಿದೆ.

ನವದೆಹಲಿ: ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ಪ್ರಾಬಲ್ಯ ವಿಸ್ತರಿಸುವ ಯತ್ನ ಮಾಡುತ್ತಿದ್ದಂತೆಯೇ ಇದಕ್ಕೆ ತಡೆ ಒಡ್ಡಲು ಭಾರತ ಸಜ್ಜಾಗಿದೆ. ಇದರ ಮೊದಲ ಭಾಗವಾಗಿ ಫಿಲಿಪ್ಪೀನ್ಸ್‌ಗೆ ಭಾರತವು ಬ್ರಹ್ಮೋಸ್‌ ಕ್ಷಿಪಣಿಯನ್ನು ರವಾನಿಸಿದೆ. ವಿದೇಶವೊಂದಕ್ಕೆ ಭಾರತ ಬ್ರಹ್ಮೋಸ್‌ ಕ್ಷಿಪಣಿ ರಫ್ತು ಮಾಡುತ್ತಿರುವುದು ಇದೇ ಮೊದಲು.

ಭಾರತ ಹಾಗೂ ಫಿಲಿಪ್ಪೀನ್ಸ್‌ನಡುವೆ 2022ರಲ್ಲಿ $375 ದಶಲಕ್ಷ ಮೌಲ್ಯದ ಬ್ರಹ್ಮೋಸ್‌ ಒಪ್ಪಂದ ಏರ್ಪಟ್ಟಿತ್ತು. ಅದರ ಅಂಗವಾಗಿ ಬ್ರಹ್ಮೋಸ್ ಸೂಪರ್‌ಸಾನಿಕ್‌ ಕ್ಷಿಪಣಿಗಳ ಮೊದಲ ಬ್ಯಾಚ್ ಭಾರತದಿಂದ ಫಿಲಿಪೈನ್ಸ್‌ಗೆ ಶುಕ್ರವಾರ ಬಂದಿಳಿದಿದೆ. ಭಾರತೀಯ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನವು ಬೆಳಿಗ್ಗೆ ಫಿಲಿಪ್ಪೀನ್ಸ್‌ನ ಕ್ಲಾರ್ಕ್ ಏರ್‌ಬೇಸ್‌ನಲ್ಲಿ ಮೇಡ್-ಇನ್-ಇಂಡಿಯಾ ಬ್ರಹ್ಮೋಸ್ ಕ್ಷಿಪಣಿಗಳನ್ನು ಇಳಿಸಿತು.

ಬ್ರಹ್ಮೋಸ್‌ ಕ್ಷಿಪಣಿ ವೈಶಿಷ್ಯ್ಯ:ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಭಾರತ-ರಷ್ಯಾದ ಜಂಟಿ ಉದ್ಯಮವಾಗಿದ್ದು, ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂ ವೇದಿಕೆಗಳಿಂದ ಉಡಾವಣೆ ಮಾಡಬಹುದಾದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉತ್ಪಾದಿಸುತ್ತದೆ.

ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ ವೇಗದಲ್ಲಿ ಅಥವಾ ಶಬ್ದಕ್ಕಿಂತ 3 ಪಟ್ಟು ವೇಗದಲ್ಲಿ ಹಾರುತ್ತದೆ.

ಚೀನಾಗೆ ಕಡಿವಾಣ ಏಕೆ ಅಗತ್ಯ?ಹೈಡ್ರೋಕಾರ್ಬನ್‌ಗಳ ಬೃಹತ್ ಮೂಲವಾದ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ಸಾರ್ವಭೌಮತ್ವ ಸಾಧಿಸಲು ಯತ್ನಿಸುತ್ತಿದೆ. ಅದಕ್ಕೆ ತಕ್ಕುದಾಗಿ ಸಮುದ್ರದಲ್ಲಿ ತನ್ನ ಜಲಾಂತರ್ಗಾಮಿಗಳು ಯುದ್ಧ ಹಡಗುಗಳನ್ನು ಚೀನಾ ನಿಯೋಜನೆ ಮಾಡುತ್ತಿದೆ.

ಆದರೆ ನಿಸರ್ಗದತ್ತ ವಸ್ತುಗಳ ಮೇಲೆ ಚೀನಾ ಪ್ರಾಬಲ್ಯ ಸಾಧಿಸುವುದನ್ನು ವಿಯೆಟ್ನಾಂ, ಫಿಲಿಪೈನ್ಸ್ ಮತ್ತು ಬ್ರೂನಿ ಸೇರಿದಂತೆ ಹಲವಾರು ದೇಶಗಳು ತೀವ್ರ ಆಕ್ಷೇಪ ಹೊಂದಿವೆ. ಅಲ್ಲದೆ, ಅಮೆರಿಕ ಸೇರಿ ಅನೇಕ ಪಾಶ್ಚಾತ್ಯ ದೇಶಗಳು ಚೀನಾ ಏಕಸ್ವಾಮ್ಯದ ಬಗ್ಗೆ ಕಳವಳ ಹೊಂದಿವೆ.ಹೀಗಾಗಿ ಭಾರತವು ಚೀನಾಗೆ ಸಡ್ಡು ಹೊಡೆದಿರುವ ಫಿಲಿಪ್ಪೀನ್ಸ್‌ನೊಂದಿಗೆ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ನೋಡುತ್ತಿದೆ. ಇದಲ್ಲದೆ ಇಥಿಯೋಪಿಯಾ, ಮೊಜಾಂಬಿಕ್, ಪೋಲೆಂಡ್ ಮತ್ತು ಐವರಿ ಕೋಸ್ಟ್‌ನೊಂದಿಗೆ ಆ ದೇಶಕ್ಕೂ ರಕ್ಷಣಾ ಸಾಧನಗಳ ರಫ್ತಿಗೆ ಭಾರತ ನಿರ್ಧರಿಸಿದೆ.

ಬ್ರಹ್ಮೋಸ್‌ಗೆ ಇತರ ದೇಶಗಳ ಬೇಡಿಕೆ:ಇದೇ ವೇಳೆ, ಫಿಲಿಪ್ಪೀನ್ಸ್‌ಗೆ ಭಾರತ ಬ್ರಹ್ಮೋಸ್‌ ಕಳಿಸುತ್ತಿದ್ದಂತೆಯೇ ಅರ್ಜೆಂಟೀನಾ ಸೇರಿದಂತೆ ಇತರ ಕೆಲವು ದೇಶಗಳು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಪಡೆಯಲು ಆಸಕ್ತಿ ತೋರಿಸಿವೆ.

Share this article